ಬೆಂಗಳೂರು: ನಾಡ ಹಬ್ಬ ದಸರ ಮತ್ತು ದೀಪಾವಳಿಗೆ ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಹಾಲಿನ ಬೆಲೆ ಏರಿಕೆಯ ಬಿಸಿಯನ್ನು ಮುಟ್ಟಿಸುವ ಸಿದ್ಧತೆಯನ್ನು ನಡೆಸಿದೆ.
ಸರ್ಕಾರವು ಹಾಲಿನ ದರವನ್ನು ಲೀಟರ್ ಗೆ 8 ರೂಪಾಯಿ ಮತ್ತು ಬಸ್ ಪ್ರಯಾಣದ ದರವನ್ನು ಸಹ ಹೆಚ್ಚಿಸಲು ನಿರ್ಣಯಿಸಿದೆ. ಹಬ್ಬ ಮತ್ತು ರಜೆಯ ಸಂದರ್ಭದಲ್ಲಿ ಹಾಲು ಮತ್ತು ಬಸ್ ಪ್ರಯಾಣ ಎಂದಿಗಿಂತ ತುಸು ಹೆಚ್ಚಾಗಿಯೇ ಬೇಕಾಗಿದ್ದು, ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ.
ರೈತರಿಗೆ 2 ರೂ. ಲಾಭ..!
ಮಂಗಳವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಕುರಿತು ಚಿಂತನೆಯನ್ನು ನಡೆಸಿರುವ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು “ನವೆಂಬರ್ 1ರಿಂದ ಜಾರಿಗೆ ಬರಲಿರುವ ಈ ದರ ಪರಿಷ್ಕರಣೆಯಲ್ಲಿ 80:20 ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಅಂದರೆ, ಹೆಚ್ಚಳವಾಗುವ 8 ರೂಪಾಯಿಗಳಲ್ಲಿ 6 ರೂಪಾಯಿ ನೇರವಾಗಿ ಹಾಲು ಉತ್ಪಾದಕ ರೈತರ ಖಾತೆಗೆ ತಲುಪಲಿದ್ದು, ಉಳಿದ 2 ರೂಪಾಯಿ ಜಿಲ್ಲಾ ಹಾಲು ಒಕ್ಕೂಟಗಳ ನಿರ್ವಹಣೆಗೆ ತಲುಪಲಿದೆ. ಒಕ್ಕೂಟಗಳು 70:30 ಅನುಪಾತಕ್ಕೆ ಮನವಿ ಮಾಡಿದ್ದರೂ, ರೈತರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಬಸ್ ಟಿಕೆಟ್ ದರ ಸಹ 3 ರೂ. ನಿಂದ 30 ರೂ.ವರೆಗೆ ಏರಿಕೆ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಟಿಕೆಟ್ ದರವನ್ನು ಸಹ 3 ರೂಪಾಯಿಯಿಂದ 30 ರೂಪಾಯಿವರೆಗೆ ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ನೀಡಲಾಗಿದ್ದು, ಚುನಾವಣೆಗಳು ಎದುರಾಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆಯ ತೊಡಕನ್ನು ತಪ್ಪಿಸುವ ಸಲುವಾಗಿ ಚುನಾವಣಾ ಆಯೋಗದಿಂದ ಅನುಮತಿ ಪಡೆದ ಬಳಿಕವಷ್ಟೇ ಈ ದರದ ಹೆಚ್ಚಳದ ಕುರಿತು ಅಧಿಕೃತ ಪ್ರಕಟಣೆಯನ್ನು ಹೊರಡಿಸಲಿದೆ ಎಂದು ಸರ್ಕಾರ ತಿಳಿಸಿದೆ.
ಹಾಲಿನ ದರದಲ್ಲಿನ ಏರಿಕೆಯು ರೈತರಿಗೆ ದೊಡ್ಡಮಟ್ಟದ ಆರ್ಥಿಕ ನೆರವು ಮತ್ತು ಪ್ರೋತ್ಸಾಹ ನೀಡಲಿದೆ ಎಂದು ಹೇಳಲಾಗುತ್ತಿದ್ದರೂ ಸಾರಿಗೆ ಮತ್ತು ಹಾಲಿನ ದರದ ಏರಿಕೆಯ ಪರಿಣಾಮವನ್ನು ಸಾಮಾನ್ಯ ಜನರು ಅನುಭವಿಸುವಂತಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ.







