ಬೆಂಗಳೂರು: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಹೂರ್ತ ಫಿಕ್ಸ್ ಆಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಇತ್ತೀಚಿಗೆ ರಾಜಕೀಯ ಬೆಳವಣಿಗೆಗಳು ಅದಕ್ಕೆ ಪೂರಕವಾಗಿವೆ.
ರಾಜ್ಯದಲ್ಲಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳ ಚುನಾವಣೆಗಳು ಡಿಸೆಂಬರ್ 15ರ ವೇಳೆಗೆ ನಡೆಸಲು ಎಲ್ಲಾ ತಯಾರಿ ನಡೆಯುತ್ತಿದೆ. ಕೊನೆಗೂ ಹಲವಾರು ವರ್ಷಗಳ ಬಳಿಕ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಕರ್ನಾಟಕ ಸರ್ಕಾರವು ನಿರ್ಧರಿಸಿದೆ.
ಚುನಾವಣೆ ಬಗ್ಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಅವರು “ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳು ಡಿಸೆಂಬರ್ 15ರ ವೇಳೆಗೆ ನಡೆಯಲಿದೆ. ಈ ವಿಚಾರವಾಗಿ ಮುಂದಿನ ಒಂದೆರಡು ದಿನಗಳಲ್ಲಿ ಅಧಿಕೃತ ಮೀಸಲಾತಿ ಪಟ್ಟಿ ಬಿಡುಗಡೆಯಾಗಲಿದೆ” ಎಂದು ಹೇಳಿಕೆ ನೀಡುವ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ಸಂಬಂಧಿತ ಅಧಿಕಾರಿಗಳಿಗೆ ಸಿದ್ಧತೆ ನಡೆಸಲು ಕರೆ ನೀಡಿದ್ದಾರೆ.
ಮೀಸಲಾತಿ ಪ್ರಕ್ರಿಯೆಗಳು ಬಹುತೇಕ ಪೂರ್ಣ..?
ಈಗಾಗಲೇ ಚುನಾವಣೆಯನ್ನು ನಡೆಸಲು ಅಗತ್ಯವಾಗಿರುವಂತಹ ಮೀಸಲಾತಿ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿದ್ದು, ಕಳೆದ ತಿಂಗಳು ನಡೆದಂತಹ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆದಿದ್ದು, ಶಾಸಕರು ನೀಡಿದ ಕೆಲವು ಸಣ್ಣಪುಟ್ಟ ಬದಲಾವಣೆಗಳ ಸಲಹೆಯನ್ನು ಕೂಡ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಅಕ್ಟೋಬರ್ 6ರ ಮಂಗಳವಾರದಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆಯ ದಿನಾಂಕ ಮತ್ತು ಪ್ರಕ್ರಿಯೆಯ ಕುರಿತು ಅಂತಿಮ ಹಂತದ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.
ಚುನಾವಣೆ ನಡೆಸಲು ಸಚಿವ ಸಂಪುಟ ಒಪ್ಪಿಗೆ
ಸರಕಾರದಿಂದ ಚುನಾವಣೆಗಳನ್ನು ನಡೆಸಲು ಸಮ್ಮತಿ ದೊರೆಯುತ್ತಿದ್ದಂತೆ ರಾಜ್ಯದ ಚುನಾವಣಾ ಆಯೋಗವು ಅಧಿಸೂಚನೆಯನ್ನು ಹೊರಡಿಸಲು ಟೊಂಕಕಟ್ಟಿ ನಿಂತಿದೆ. ಈ ಬಾರಿಯ ಪಂಚಾಯಿತಿ ಚುನಾವಣೆಗಳು ವಿದ್ಯುನ್ಮಾನ ಮತ ಯಂತ್ರದ ಬದಲಿಗೆ ಬ್ಯಾಲೆಟ್ ಪೇಪರ್ ಗಳ ಮೂಲಕ ನಡೆಯಲಿದ್ದು, ಅದಕ್ಕೆ ತಗಲುವಂತಹ ವೆಚ್ಚಗಳನ್ನು ಭರಿಸಲು ಚುನಾವಣಾ ಆಯೋಗಕ್ಕೆ ಅಗತ್ಯವಾಗಿರುವಂತಹ ಅನುದಾನವನ್ನು ಬಿಡುಗಡೆ ಮಾಡಲು ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕವಾಗಿ ಒಪ್ಪಿಗೆಯನ್ನು ಸಹ ನೀಡಲಾಗಿದೆ.
ರಾಜಕೀಯ ಬಲಾಬಲಕ್ಕೆ ವೇದಿಕೆ ಸಿದ್ಧ!
ಸ್ಥಳೀಯ ಪಂಚಾಯಿತಿ ಚುನಾವಣೆಗಳು ಪ್ರಮುಖ ರಾಜಕೀಯ ಪಕ್ಷಗಳಿಗೆ ಒಂದು ಪ್ರತಿಷ್ಠೆಯ ಕಣವಾಗಿ ರೂಪುಗೊಳ್ಳಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಪಕ್ಷದ ಬಲಾಬಲ ಮತ್ತು ಸಂಘಟನೆಗಿರುವ ಶಕ್ತಿಯನ್ನು ಪ್ರದರ್ಶಿಸಲು ಒಂದು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ ಎನ್ನಲಾಗಿದೆ. ಈಗಾಗಲೇ ಚುನಾವಣಾ ಟಿಕೆಟ್ ನ ಆಕಾಂಕ್ಷಿಗಳು ತೆರೆಮರೆಯಲ್ಲಿಯೇ ಲಾಬಿ ನಡೆಸಲು ಆರಂಭಿಸಿದ್ದಾರೆ.







