ಹೊಸ ನಗರ: ಕಸ್ತೂರಿ ರಂಗನ್ ವರದಿ ಜಾರಿ ನೀತಿಯನ್ನು ವಿರೋಧಿಸಿ ಸಹಕಾರ ನಾಯಕರು ಆದ ಡಾ.ಆರ್ ಎಂ ಮಂಜುನಾಥಗೌಡ ನೇತೃತ್ವದಲ್ಲಿ ಕಾರಣಗಿರಿಯಿಂದ ಹೊಸನಗರದವರೆಗೆ ಪಾದಯಾತ್ರೆಗೆ ಭಾರೀ ಜನ ಸ್ಪಂದನೆ ವ್ಯಕ್ತವಾಗಿದೆ.
ಪ್ರತಿಭಟನೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ,ಎಂಎಡಿಬಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ ಹಲವಾರು ನಾಯಕರು ಭಾಗಿಯಾದರು. ಮಲೆನಾಡಿನ ಈ ಜ್ವಲoತ ಸಮಸ್ಯೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.
ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿ ಸೂಚನೆಯನ್ನು ಕುರಿತು ವಿರೋಧ ವ್ಯಕ್ತಪಡಿಸಿ ಹೊಸನಗರ ತಾಲ್ಲೂಕು ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಈ ಪ್ರತಿಭಟನೆಗೆ ಕರೆ ನೀಡಿತ್ತು. ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಶಿವಮೊಗ್ಗದ ಅಧ್ಯಕ್ಷರಾದ ಆರ್.ಎಂ. ಮಂಜುನಾಥಗೌಡ ಮತ್ತು ಸಂಚಾಲಕರಾದ ಬಿ.ಆರ್. ಜಯಂತ್ ಅವರ ನೇತೃತ್ವದಲ್ಲಿ ಮಲೆನಾಡು ಪ್ರದೇಶ ಮತ್ತು ರೈತರ ರಕ್ಷಣೆಯನ್ನು ಒಳಗೊಂಡಂತೆ ಹಲವಾರು ಅಂಶಗಳನ್ನು ಆಧರಿಸಿ ಕಾರಣಗಿರಿ ಶ್ರೀಸಿದ್ಧಿವಿನಾಯಕ ದೇವಸ್ಥಾನದಿಂದ ಪಾದಯಾತ್ರೆ ಮತ್ತು ಬಹಿರಂಗ ಸಭೆ ನಡೆಯಿತು. ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿ, ಕಸ್ತೂರಿ ರಂಗನ್ ವರದಿ ಜಾರಿಯಿಂದ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಗಟ್ಟಿ, ಮಲೆನಾಡಿನ ಹಿತರಕ್ಷಣೆಯನ್ನು ಕಾಪಾಡಬೇಕೆಂದು ಕರೆ ನೀಡಲಾಯಿತು
ಪ್ರಮುಖರಾದ ಕಲಗೋಡು ರತ್ನಾಕರ್, ವಿದ್ಯಾಧರ ಗುರುಶಕ್ತಿ, ಚಂದ್ರ ಮೌಳಿ, ಶ್ವೇತಾ ಬಂಡಿ, ಸುಬ್ರಮಣ್ಯ ಮಾಸ್ತಿಕಟ್ಟೆ, ಮುರಳಿಧರ್ ಸೇರಿ ಅನೇಕರು ಹಾಜರಿದ್ದರು.
ವಿಜಯೇಂದ್ರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಪ್ರಮುಖರ ಸಭೆ
ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಕರಡು ಜಾರಿ ಹಾಗೂ ಅದರಿಂದ ಮಲೆನಾಡು ಭಾಗದ ಜನರ ಮೇಲಾಗುವ ಪರಿಣಾಮಗಳ ಕುರಿತು, ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಶಿವಮೊಗ್ಗ ವಿಭಾಗ ಮಟ್ಟದ (ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳು) ಪಕ್ಷದ ಪ್ರಮುಖರ ವಿಶೇಷ ಸಭೆ ನಡೆಯಿತು.
ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಜೊತೆಗೆ ಮಲೆನಾಡಿನ ಜನರ ಜೀವನೋಪಾಯ, ಮೂಲಭೂತ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ಕಾಯುವುದು ನಮ್ಮ ಮೊದಲ ಆದ್ಯತೆಯಾಗಿದೆ. ಪರಿಸರ ರಕ್ಷಣೆ ಮತ್ತು ಜನರ ಕಲ್ಯಾಣ — ಎರಡಕ್ಕೂ ಸಮತೋಲನದ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಕ್ಷ ಬದ್ಧವಾಗಿದೆ ಎಂದು ನಾಯಕರು ಹೇಳಿದ್ದಾರೆ







