ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತಾಲೂಕಿನ ಯಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ತೀರ್ಥಹಳ್ಳಿ ಹಾಗೂ ದಾನಿಗಳ ಸಹಯೋಗದಲ್ಲಿ ನೂತನ ತಂತ್ರಜ್ಞಾನದ ಸುಸಜ್ಜಿತ ಧ್ವನಿವರ್ಧಕ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಲಾಯಿತು.
ಆಗಸ್ಟ್ 25ರಂದು ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ದಾನಿ ಶ್ರೀ ನಂಜೇಗೌಡರು ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಸುಮಾರು 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆಗೆ ಧ್ವನಿವರ್ಧಕ ವ್ಯವಸ್ಥೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ಸುಮಾರು 117 ವರ್ಷಗಳ ಇತಿಹಾಸ ಹೊಂದಿರುವ ಯಡೂರು ಶಾಲೆ ಈ ಭಾಗದ ಅನೇಕ ಮಹನೀಯರಿಗೆ ವಿದ್ಯಾಭ್ಯಾಸ ನೀಡಿದೆ. ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ಆಗಮಿಸಿ ಶಿಕ್ಷಣ ಪಡೆಯುತ್ತಿದ್ದ ಕಾಲವಿತ್ತು. ನಂತರ ಸುತ್ತಮುತ್ತಲಿನ ಪ್ರದೇಶಗಳು ಮುಳುಗಡೆಯಾಗಿ ಜನಸಂಖ್ಯೆ ವಿರಳವಾದರೂ, ಶಾಲೆಯು ತನ್ನ ಸ್ವಂತ ಶ್ರಮ ಹಾಗೂ ಸ್ಥಳೀಯರ ಸಹಕಾರದಿಂದ ಮುನ್ನಡೆಯುತ್ತಾ ಬಂದಿದೆ.
ರೋಟರಿ ಕ್ಲಬ್ ತೀರ್ಥಹಳ್ಳಿ ವತಿಯಿಂದ ಶಾಲೆಗೆ ಹಲವು ಬಾರಿ ನೋಟ್ಬುಕ್ಗಳು ಹಾಗೂ ವಿವಿಧ ಶಾಲಾ ಪರಿಕರಗಳನ್ನು ನೀಡಲಾಗಿದೆ. ಸಭೆ-ಸಮಾರಂಭಗಳ ಸಂದರ್ಭದಲ್ಲಿ ಧ್ವನಿವರ್ಧಕ ವ್ಯವಸ್ಥೆ ಕಲ್ಪಿಸುವುದು ಶಾಲಾ ಸಮಿತಿಗೆ ಕಷ್ಟಕರವಾಗಿದ್ದ ಹಿನ್ನೆಲೆಯಲ್ಲಿ, ಈ ಸಮಸ್ಯೆಯನ್ನು ಮನಗಂಡು ದಾನಿ ನಂಜೇಗೌಡರು ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ನೂತನ ಧ್ವನಿವರ್ಧಕ ವ್ಯವಸ್ಥೆಯನ್ನು ಒದಗಿಸಲಾಗಿದೆ. ರೋಟರಿ ಸಂಸ್ಥೆಯ ಜಿಲ್ಲಾ ಚೇರ್ಮನ್ ರೊ. ಕೆ.ಪಿ.ಎಸ್. ಸ್ವಾಮಿ ಮಾತನಾಡಿ, ಧ್ವನಿವರ್ಧಕ ವ್ಯವಸ್ಥೆಯನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಇತರ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ವ್ಯವಸ್ಥೆ ಒದಗಿಸುವ ಭರವಸೆ ನೀಡಿದ್ದ ದಾನಿ ನಂಜೇಗೌಡರು ಅತಿ ಶೀಘ್ರದಲ್ಲಿ ಅದನ್ನು ಶಾಲೆಗೆ ತಂದುಕೊಟ್ಟಿರುವುದು ಶ್ಲಾಘನೀಯ ಎಂದರು. ಶಾಲೆಯ ಹಳೆಯ ವಿದ್ಯಾರ್ಥಿ ವೆಂಕಟೇಶ್ ಹೆಗಡೆ, ಯಡೂರು ಮಾತನಾಡಿದರು. ರೋಟರಿ ಕ್ಲಬ್ ತೀರ್ಥಹಳ್ಳಿ ಅಧ್ಯಕ್ಷ ರೊ. ಎನ್.ಎಚ್.ಸಿ. ರಮೇಶ್ ಮಾತನಾಡಿ, ದಾನಿಗಳು ಹಾಗೂ ರೋಟರಿ ಸಂಸ್ಥೆಯ ನೆರವಿನಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲಾ ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ತೀರ್ಥಹಳ್ಳಿಯಲ್ಲಿ ಜೆಸಿಐ ಸೇವಾ ಯೋಜನೆಗೆ ಚಾಲನೆ
ಆಗಸ್ಟ್ 28ರ ಸಂಜೆ ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಆರ್.ಪಿ.ಪಿ. ಭರತ್ ಆಚಾರ್ಯ ಆಗಮನ
ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಆರ್.ಪಿ.ಪಿ. ಭರತ್ ಆಚಾರ್ಯ ಅವರು ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಭೇಟಿಯ ಅಂಗವಾಗಿ ಆಗಸ್ಟ್ 28ರ ಶುಕ್ರವಾರ ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ತೀರ್ಥಹಳ್ಳಿಗೆ ಆಗಮಿಸಲಿರುವ ಅವರು, ಡಾ. ಯು.ಆರ್. ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಜೆಸಿಐ ತೀರ್ಥಹಳ್ಳಿ ಸಂಸ್ಥೆಯು ನ್ಯಾಷನಲ್ ಸಂಸ್ಥೆ ಸಹಕಾರದೊಂದಿಗೆ ಒದಗಿಸಿರುವ ಸ್ಮಾರ್ಟ್ ಕ್ಲಾಸ್ನ್ನು ಉದ್ಘಾಟಿಸಲಿದ್ದಾರೆ. ಬಳಿಕ ಜಯಚಾಮರಾಜೇಂದ್ರ ಆಸ್ಪತ್ರೆಗೆ ಭೇಟಿ ನೀಡಲಿರುವ ಅವರು, ಅಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ಅಗತ್ಯ ಸಲಕರಣೆಗಳನ್ನು ಹಸ್ತಾಂತರಿಸಲಿದ್ದಾರೆ.
ಸಂಜೆ 4.15ಕ್ಕೆ ಬಾಳೇಬೈಲಿನ ರವೀಂದ್ರ ಶೆಟ್ಟಿ ಉದ್ಯಾನವನದಲ್ಲಿ ಜೆಸಿಐ ತೀರ್ಥಹಳ್ಳಿ ಸಂಸ್ಥೆಯು ನ್ಯಾಷನಲ್ ಇನ್ಫ್ರಾಸ್ಟ್ರಕ್ಷರ್ಸ್ ಸಂಸ್ಥೆ ಸಹಕಾರದೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಒದಗಿಸಿರುವ ಆಟದ ಸಲಕರಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ನಂತರ ಮಲ್ನಾಡ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ಮಲ್ಟಿ ಲಾಮ್ ಎನ್.ಪಿ. ವಿಸಿಟ್ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಇಡಿ ಟು ಎನ್.ಪಿ. ಜೆಎಫ್ಎಸ್ ಅನುಷ್ ಗೌಡ, ವಲಯಾಧ್ಯಕ್ಷ ಜೆಎಫ್ಎಸ್ ಮಧುಸೂದನ್ ನಾವಡ, ವಲಯ ಉಪಾಧ್ಯಕ್ಷ ಜೆಎಫ್ಎಂ ಅಭಿಜಿತ್ ಹಿರಿಯ ಹಾಗೂ ಜೆಸಿಐ ತೀರ್ಥಹಳ್ಳಿ ಅಧ್ಯಕ್ಷ ಜೆಎಫ್ಎಂ ನಟೇಶ್ ಕಾಮತ್ ಸೇರಿದಂತೆ ಜೆಸಿಐ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.







