ಬೆಂಗಳೂರು: ಬ್ಯಾಂಕ್ ಗೆ ಸಂಬಂಧಿಸಿದಂತಹ ಕೆಲಸಗಳಿದ್ದರೆ ಗ್ರಾಹಕರು ಸೆಪ್ಟೆಂಬರ್ ತಿಂಗಳ ದಿನಾಂಕಗಳನ್ನು ಪರಿಶೀಲಿಸಿಕೊಂಡು ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಬೇಕಿದೆ.
ಏಕೆಂದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ಹಬ್ಬಗಳು, ಪ್ರಾದೇಶಿಕ ರಜೆಗಳು ಮತ್ತು ವಾರದ ರಜೆಗಳು ಸೇರಿದಂತೆ ಸಾಲು ಸಾಲು ರಜೆಗಳಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಿರುವ ಕ್ಯಾಲೆಂಡರ್ ಅನ್ವಯ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳ ಶಾಖೆಗಳಿಗೆ ಆಯಾ ರಾಜ್ಯ ಮತ್ತು ನಗರಗಳಿಗೆ ಅನುಗುಣವಾಗಿ ರಜೆಗಳು ಅನ್ವಯಗೊಳ್ಳಲಿದೆ.
ಯಾವತ್ತು ಯಾವತ್ತು ರಜೆ?
ಸೆಪ್ಟೆಂಬರ್ 12ರ ಎರಡನೇ ಶನಿವಾರ ಮತ್ತು ಸೆಪ್ಟೆಂಬರ್ 26ರ ನಾಲ್ಕನೇ ಶನಿವಾರ ಹಾಗೂ ಎಂದಿನಂತೆ ಭಾನುವಾರಗಳು ಬ್ಯಾಂಕ್ ಗಳಿಗೆ ಸಾಮಾನ್ಯವಾಗಿ ರಜೆ ಇರುತ್ತದೆ. ಇದರೊಂದಿಗೆ ಸೆಪ್ಟೆಂಬರ್ 4ರ ಶುಕ್ರವಾರದಂದು ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೆಲವು ನಗರಗಳ ಬ್ಯಾಂಕ್ ಗಳಿಗೆ ಅಂದು ರಜೆ ಇರುತ್ತದೆ. ಮತ್ತು ಸೆಪ್ಟೆಂಬರ್ 14ರ ಸೋಮವಾರದಂದು ಗಣೇಶ ಚತುರ್ಥಿಯ ಪ್ರಯುಕ್ತ ಬೆಂಗಳೂರು, ಮುಂಬೈ ಮತ್ತು ಚೆನ್ನೈ ಸೇರಿದಂತೆ ಕೆಲವು ಪ್ರಮುಖ ನಗರಗಳ ಬ್ಯಾಂಕ್ ಶಾಖೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಸೆಪ್ಟೆಂಬರ್ 15ರ ಮಂಗಳವಾರದಂದು ಸಂವತ್ಸರಿ ಅಥವಾ ನುಖೈ ಹಬ್ಬ, ಸೆಪ್ಟೆಂಬರ್ 21ರ ಸೋಮವಾರದಂದು ಶ್ರೀನಾರಾಯಣ ಗುರು ಜಯಂತಿ, ಸೆಪ್ಟೆಂಬರ್ 22ರ ಮಂಗಳವಾರದಂದು ಕರ್ಮ ಪೂಜೆ ಮತ್ತು ಸೆಪ್ಟೆಂಬರ್ 23ರ ಬುಧವಾರದಂದು ಮಹಾರಾಜ ಹರಿ ಸಿಂಗ್ ಜನ್ಮದಿನದ ಹಿನ್ನೆಲೆಯಲ್ಲಿ ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಇರಲಿವೆ ಎಂದು ತಿಳಿಸಲಾಗಿದೆ.
ಇಂಟರ್ನೆಟ್ ಬ್ಯಾಂಕ್, ಯುಪಿಐ ಇರುತ್ತೆ!
ರಜೆಗಳಿದ್ದರೂ ಸಹ ಯುಪಿಐ ಪಾವತಿ, ಮೊಬೈಲ್ ಬ್ಯಾಂಕಿಂಗ್, ಇಂಟರ್ ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ಲಭ್ಯವಿರುವುದರಿಂದ ಗ್ರಾಹಕರು ಸಣ್ಣಪುಟ್ಟ ವ್ಯವಹಾರಗಳನ್ನು ಆನ್ ಲೈನ್ ಮೂಲಕ ಮುಗಿಸಿಕೊಳ್ಳಲು ಮತ್ತು ಚೆಕ್ ಕ್ಲಿಯರೆನ್ಸ್, ನಗದು ವ್ಯವಹಾರ, ಖಾತೆ ಸಂಬಂಧಿತ ದಾಖಲೆಗಳು ಸೇರಿದಂತೆ ಇನ್ನಿತರ ವ್ಯವಹಾರಗಳಿಗೆ ಸಂಬಂಧಿಸಿದಂತಹ ಅನಿವಾರ್ಯತೆಗಳಿದ್ದಲ್ಲಿ ಅಂತಹ ಕೆಲಸಗಳನ್ನು ನೇರವಾಗಿ ಬ್ಯಾಂಕ್ ಶಾಖೆಗಳಿಗೆ ತೆರಳಿ ರಜಾ ದಿನಗಳ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಪೂರೈಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ







