ಮಂಗಳೂರು: ಕೇರಳ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನ ಬಂದಿದೆ. ಅದನ್ನು ಪಡೆದುಕೊಳ್ಳಲು ತೆರಿಗೆ ಹಣ ಕಟ್ಟಬೇಕು ಎಂದು ನಂಬಿಸಿ ಅಪರಿಚಿತರು 3 ಲಕ್ಷದ 81 ಸಾವಿರ ರೂ.ಹಣ ವರ್ಗಾಯಿಸಲು ತಿಳಿಸಿ ವಂಚನೆ ಮಾಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
42 ವರ್ಷದ ದೂರುದಾರರಿಗೆ ಆ.14ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಕೇರಳ ಲಾಟರಿಯಲ್ಲಿ 8 ಲಕ್ಷ ರೂ. ಬಂದಿದೆ ಎಂದು ನಂಬಿಸಿ ಹಣವನ್ನು ಪಡೆಯಲು ತೆರಿಗೆ ಕಟ್ಟಬೇಕು ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ದೂರುದಾರರು ಅಪರಿಚಿತ ವ್ಯಕ್ತಿ ಕಳುಹಿಸಿದ ಗೂಗಲ್ ಪೇ, ಫೋನ್ ಪೇ ಸ್ಕ್ಯಾನರ್ ಗಳಿಗೆ ಆ.15ರಿಂದ 26ರ ವರೆಗೆ ಹಂತ ಹಂತವಾಗಿ 3,81,300 ರೂ. ವರ್ಗಾಯಿಸಿದ್ದಾರೆ.
ಮತ್ತೆ ಕರೆ ಮಾಡಿದ ಅಪರಿಚಿತ ಲಾಟರಿ ಹಣ ಡಬಲ್ ಆಗಿದ್ದು, ಪುನಃ ಟ್ಯಾಕ್ಸ್ ಕಟ್ಟಬೇಕು ಎಂದು ಒತ್ತಾಯಿಸಿದ್ದಾನೆ. ಆಗ ದೂರುದಾರರಿಗೆ ಅದೊಂದು ಮೋಸದ ಜಾಲ ಎಂದು ಗೊತ್ತಾಗಿ ಸೈಬರ್ ಹೆಲ್ಪ್ ಲೈನ್ ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ
•ಕುಂದಾಪುರ: ಯುವತಿ ನಾಪತ್ತೆ
ಕುಂದಾಪುರ: ಮಂಗಳೂರಿನ ಕೂಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈಶ್ವರಿ ಎನ್ನುವ ಯುವತಿಯು ನಾಪತ್ತೆಯಾಗಿರುವ ಘಟನೆ, ಕಳೆದ ಕೆಲವು ದಿನಗಳ ಹಿಂದೆ ನಡೆದಿದೆ. ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಯುವತಿಗೆ ಸ್ಥಳ ಬದಲಾವಣೆ ಮಾಡಿದರೆ ಸರಿಯಾಗಬಹುದೆಂದು ಆಲೋಚಿಸಿ ಈಶ್ವರಿಯ ಪೋಷಕರು ಆಕೆಯನ್ನು ಆಗಸ್ಟ್ 25ರಂದು ಕೂಳೂರಿನಿಂದ ಕುಕ್ಕಿಕಟ್ಟೆಗೆ ಕರೆದುಕೊಂಡು ಹೋಗಲೆಂದು ಬಸ್ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ, ಈಶ್ವರಿ ವಾಶ್ ರೂಂ ಗೆ ಹೋಗಿ ಬರುವುದಾಗಿ ಪೋಷಕರಿಗೆ ತಿಳಿಸಿ ತೆರಳಿದವಳು ಮರಳಿಬಾರದೆ ನಾಪತ್ತೆಯಾಗಿದ್ದಾಳೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಕಾರ್ಕಳ: ರಬ್ಬರ್ ಟ್ಯಾಪಿಂಗ್ ಕೆಲಸಗಾರ ಸಾವು
ಕಾರ್ಕಳ: ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ, ಮಾಳ ಅಳಪಳ್ಳಿ ದೇವಸ್ಥಾನದ ಬಳಿಯ ತೋಟವೊಂದರಲ್ಲಿ ನಡೆದಿದೆ. ಶೆಡ್ ನಿಂದ ಶೀಟ್ ಟ್ರೇ ತೆಗೆಯುತ್ತಿದ್ದ ಸಮಯದಲ್ಲಿ ಅವರಿಗೆ ಯಾವುದೋ ಒಂದು ಜಂತು ಕಚ್ಚಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ಸುರೇಂದ್ರ ಪಿ.ಎ ಎಂದು ಗುರುತಿಸಲಾಗಿದೆ. ಜಂತು ಕಡಿದ ತಕ್ಷಣ ಸುರೇಂದ್ರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತಾದರೂ, ಅದು ಫಲಕಾರಿಯಾಗದೆ ಸಾವನ್ನಪ್ಪಿದರು ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಮೂಡಬಿದರೆ: ವಾರೆಂಟ್ ಆರೋಪಿಯ ಬಂಧನ
ಮೂಡಬಿದರೆ: ಆರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಅಬೂಬಕರ್ ಅಲಿಯಾಸ್ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ. ಆಗಸ್ಟ್ 28ರ ಶುಕ್ರವಾರದಂದು ಮೂಡಬಿದರೆ ಪೊಲೀಸ್ ಠಾಣೆಯ ವಾರೆಂಟ್ ಜಾರಿ ಕರ್ತವ್ಯದ ಎಚ್.ಸಿ.ರವೀಂದ್ರ, ಪಿಸಿ ಲಿಂಗೇಶ್ ಮತ್ತು ನ್ಯಾಯಾಲಯದ ಪಿಸಿ ರಮೇಶ್ ಅವರು ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ಮೂಡಬಿದರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ಸೆಪ್ಟೆಂಬರ್ 15ರ ಮಂಗಳವಾರದವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.
•ಕಡಬ: ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಸಾವು
ಕಡಬ: ರಸ್ತೆ ಅಪಘಾತದಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ, ಸೋಮವಾರದಂದು ಕಳಾರದಲ್ಲಿ ನಡೆದಿದೆ. ಉಪ್ಪಿನಂಗಡಿ- ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಸ್ತೆ ಪಕ್ಕದಲ್ಲಿ ವೃದ್ಧೆಯು ನಿಂತಿದ್ದ ಸಂದರ್ಭದಲ್ಲಿ, ಕಡಬ ಕಡೆಯಿಂದ ಆಗಮಿಸಿದ ಬೈಕ್ ವೃದ್ಧೆಗೆ ಢಿಕ್ಕಿ ಹೊಡೆದಿದೆ. ತಕ್ಷಣ ಆಕೆಯನ್ನು ಸ್ಥಳೀಯರು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರದಂದು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಮೃತ ದುರ್ದೈವಿಯನ್ನು ಕಳಾರ ಪೆರ್ಲದಕೆರೆ ನಿವಾಸಿ ವಾರಿಜ ಎಂದು ಗುರುತಿಸಲಾಗಿದೆ. ವಾರಿಜ ಅವರು ಪೆರ್ಲದಕೆರೆಯಲ್ಲಿ ತಮ್ಮ ಅಕ್ಕನ ಮನೆಯ ಪಕ್ಕದಲ್ಲಿ ವಾಸವಾಗಿದ್ದು, ಅಕ್ಕನ ಮಗನಾದ ಧನಂಜಯ ಅವರೇ ವಾರಿಜ ಅವರನ್ನು ನೋಡಿಕೊಳ್ಳುತ್ತಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ.







