ಶಿವಮೊಗ್ಗ: 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮರಣ ಪತ್ರವನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಭಾನುವಾರದಂದು ಗೋಪಿಶೆಟ್ಟಿಕೊಪ್ಪದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಸೃಷ್ಟಿ ಎಂದು ಗುರುತಿಸಲಾಗಿದೆ. ರಾಘವೇಂದ್ರ ಸ್ವಾಮಿಗಳ ಆರಾಧನೆ ಇದ್ದ ಹಿನ್ನೆಲೆಯಲ್ಲಿ ಸೃಷ್ಟಿಯ ಪೋಷಕರು ರಾಯರ ಮಠಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಸೃಷ್ಟಿ ಮರಣ ಪತ್ರವನ್ನು ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೃಷ್ಟಿಯ ಪೋಷಕರು ಪೂಜೆಯನ್ನು ಮುಗಿಸಿಕೊಂಡು ಮನೆಗೆ ಹಿಂತಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ ಮಾಹಿತಿ ಮತ್ತು ಮರಣ ಪತ್ರದ ಆಧಾರದ ಮೇಲೆ ಪೋಷಕರು ಆಕೆಗೆ ಓದು ಓದು ಎಂದು ಒತ್ತಡ ಹಾಕುತ್ತಿದ್ದುದೆ ಸೃಷ್ಟಿಯ ಆತ್ಮಹತ್ಯೆಗೆ ಕಾರಣವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ನಿಖರವಾದ ಕಾರಣ ಏನೆಂಬುದು ತನಿಖೆಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ. ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡೂರು: ವಾಹನ ಢಿಕ್ಕಿ; ಬೈಕ್ ಸವಾರ ಸಾವು
ಕಡೂರು: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಯುವಕ ಸಾವನ್ನಪ್ಪಿರುವ ಘಟನೆ, ಸೋಮವಾರದಂದು ಸರಸ್ವತಿಪುರ- ಗೋವಿಂದಪುರ ರಸ್ತೆಯಲ್ಲಿ ನಡೆದಿದೆ. ಮೃತ ಯುವಕನನ್ನು ಗೋವಿಂದಪುರ ಗ್ರಾಮದ ವೈಂಡಿಂಗ್ ಕೆಲಸ ಮಾಡಿಕೊಂಡಿದ್ದ ಯಶವಂತ್ ನಾಯ್ಕ ಎಂದು ಗುರುತಿಸಲಾಗಿದೆ. ಯಶವಂತ್ ಅವರು ಕೆಲಸ ಮುಗಿಸಿಕೊಂಡು ಸಖರಾಯಪಟ್ಟಣದಿಂದ ತನ್ನ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಅತಿವೇಗ ಮತ್ತು ಚಾಲಕನ ಅಜಾಗರೂಕತೆಯಿಂದ ಬಂದ ವಾಹನವು ಯಶವಂತ್ ಅವರ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಯಶವಂತ್ ಅವರಿಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅಷ್ಟೇ ಅಲ್ಲದೆ ಚಾಲಕ ವಾಹನವನ್ನು ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಯಶವಂತ್ ಅವರ ತಾಯಿ ಸುಮಿತ್ರಾ ಬಾಯಿ ಅವರು ಪೊಲೀಸರಿಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಸಾಗರ: ಮಹಿಳೆ ಮೇಲೆ ಹಲ್ಲೆ; ಚಿನ್ನದ ಸರ ಕಳುವು
ಸಾಗರ: ಮನೆಯಲ್ಲಿ ಮಹಿಳೆಯೊಬ್ಬರೇ ಇದ್ದ ಸಂದರ್ಭದಲ್ಲಿ ಖದೀಮರು ಆಕೆಯ ಮೇಲೆ ಹಲ್ಲೆ ನಡೆಸಿ, ಚಿನ್ನದ ಸರವನ್ನು ಲಪಟಾಯಿಸಿರುವ ಘಟನೆ, ಭಾನುವಾರದಂದು ಖಂಡಿಕಾ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾದ ಗೀತಾ ಅವರು ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ಅಕ್ರಮವಾಗಿ ಆಕೆಯ ಮನೆಯನ್ನು ಪ್ರವೇಶಿಸಿರುವುದಷ್ಟೇ ಅಲ್ಲದೆ, ಗೀತಾ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಕತ್ತಿನಲ್ಲಿ ಧರಿಸಿದ್ದ ಚಿನ್ನದ ಸರವನ್ನು ಕೂಡ ದೋಚಿಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಗಾಯಗೊಂಡ ಗೀತಾ ಅವರನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಶಿರಾಳಕೊಪ್ಪ: ಮೆಕ್ಕೆಜೋಳ ಹೊಲದಲ್ಲಿ ಯುವಕನ ಶವ ಪತ್ತೆ
ಶಿರಾಳಕೊಪ್ಪ: ಮೆಕ್ಕೆಜೋಳ ಹೊಲದಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ, ಮಳವಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮಳವಳ್ಳಿ ಗ್ರಾಮದ ನಿವಾಸಿ ವಡಕೇಶಪ್ಪ ಎಂದು ಗುರುತಿಸಲಾಗಿದೆ. ವಡಕೇಶಪ್ಪ ಅವರು ಶನಿವಾರದಂದು ಸಂಜೆ ಮೆಕ್ಕೆಜೋಳದ ಹೊಲಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿ, ಅಲ್ಲಿಂದ ತೆರಳಿದ್ದು ಬಳಿಕ ಮನೆಗೆ ಹಿಂತಿರುಗಿ ಬರಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಕುಟುಂಬಸ್ಥರು ಭಾನುವಾರ ಬೆಳಿಗ್ಗೆಯಿಂದ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ವಡಕೇಶಪ್ಪ ಅವರ ಮೃತದೇಹ ಕೈಕಾಲು ಕಟ್ಟಿದ ಭಂಗಿಯಲ್ಲಿ ಅದೇ ಮೆಕ್ಕೆಜೋಳ ಹೊಲದಲ್ಲಿ ಕಂಡುಬಂದಿದೆ. ವಡಕೇಶಪ್ಪ ಅವರ ಮೃತದೇಹದಲ್ಲಿ ಬಾಯಿಯ ಭಾಗದಲ್ಲಿ ವಿಷ ಪದಾರ್ಥ ಇಟ್ಟಿರುವಂತೆ ಕಂಡುಬಂದಿದ್ದು, ಸಾವಿನ ಕುರಿತು ಹಲವು ಬಗೆಯ ಅನುಮಾನದ ಹುತ್ತ ಬೆಳೆದಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಎಸ್ ಪಿಎಜೆ ಕಾರ್ಯಪ್ಪ ಮತ್ತು ಪಿಎಸ್ಐ ಪ್ರಶಾಂತ್ ಕುಮಾರ್ ಅವರು ಪರಿಶೀಲನೆಯನ್ನು ನಡೆಸಿದರು. ತನಿಖೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳದಲ್ಲಿ ಅನೇಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







