ಕೊಪ್ಪ: ಚಿರತೆಯೊಂದು ದಾರಿ ತಪ್ಪಿ ಮನೆಯ ಅಂಗಳಕ್ಕೆ ಬಂದ ಘಟನೆ ಕೊಪ್ಪ ತಾಲೂಕು ಹುಲಿಗರಡಿ ಗ್ರಾಮದಲ್ಲಿ ಬುಧವಾರ ರಾತ್ರಿ
ನಡೆದಿದೆ. ರಾಘವೇಂದ್ರ ಎನ್ನುವವರ ಮನೆಯ ಅಂಗಳಕ್ಕೆ ಆಗಮಿಸಿದ ಚಿರತೆಯ ಚಲನವಲನವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
•ಸಾಗರ: ಖಾಸಗಿ ಬಸ್ ನಲ್ಲಿ ಬೆಂಕಿ: ಅಪಾಯದಿಂದ ಪಾರು!
ಸಾಗರ: ಖಾಸಗಿ ಬಸ್ ವೊಂದರಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ಬೆಳಗಿನ ಜಾವ ಆನಂದಪುರ ಸಮೀಪದಲ್ಲಿ ನಡೆದಿದೆ. ಬೆಂಗಳೂರಿನಿಂದ ಸಾಗರದತ್ತ ತೆರಳುತ್ತಿದ್ದ ಬಸ್ ಆನಂದಪುರ ಸಮೀಪದ ಮುಂಬಾಳು ರೈಲ್ವೆ ಗೇಟ್ ಸಮೀಪ ಆಗಮಿಸುತ್ತಿದ್ದಂತೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಬಸ್ ಚಾಲಕ ಮತ್ತು ನಿರ್ವಾಹಕರು ವಾಹನವನ್ನು ನಿಲ್ಲಿಸಿದ್ದಾರೆ. ಬಳಿಕ ಬಸ್ ನಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿರುವುದರಿಂದ ಚಾಲಕ, ನಿರ್ವಾಹಕ ಮತ್ತು ಇಬ್ಬರು ಪ್ರಯಾಣಿಕರು ಯಾವುದೇ ಅಪಾಯಕ್ಕೆ ಸಿಲುಕದೆ ಸುರಕ್ಷಿತವಾಗಿ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅವರು ಬಸ್ ನಿಂದ ಕೆಳಗಿಳಿದ ಇಳಿದ ಕೆಲವೇ ಕ್ಷಣಗಳಲ್ಲಿ ಅದು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ, ಸುತ್ತಮುತ್ತಲು ವ್ಯಾಪಿಸುವುದನ್ನು ತಡೆಗಟ್ಟಿದ್ದಾರೆ ಎನ್ನಲಾಗಿದೆ.
•ಶಿವಮೊಗ್ಗ: ತಾಯಿ ಮಗ ನಾಪತ್ತೆ
ಶಿವಮೊಗ್ಗ: ಮಹಿಳೆ ಮತ್ತು ಆಕೆಯ ಮಗ ಕಾಣೆಯಾಗಿರುವ ಘಟನೆ, ಕಳೆದೆರಡು ದಿನಗಳ ಹಿಂದೆ ಮಂಜುನಾಥ ಬಡಾವಣೆಯ ಮೊದಲನೇ ತಿರುವಿನಲ್ಲಿ ನಡೆದಿದೆ. ಫಾರೀದಾ ಖಾನಂ ಎನ್ನುವ ಮಹಿಳೆಯರು ಅಕ್ಟೋಬರ್ 5ರ ಸೋಮವಾರದಂದು ಮಗನನ್ನು ಕರೆದುಕೊಂಡು ಬರಲೆಂದು ಶಾಲೆಗೆ ತೆರಳಿದವರು ನಾಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲದೆ ಫಾರೀದಾ ಖಾನಂ ಅವರ ಮಗ 4 ವರ್ಷದ ಉಮೇರ್ ಕೂಡ ಕಾಣೆಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
•ಹೊಸನಗರ: ಕನ್ನಡ ಸಂಘಟಕ ಕೆಸಿನಮನೆ ನಾ. ರತ್ನಾಕರ್ ನಿಧನ
ಹೊಸನಗರ: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಕೆಸಿನಮನೆ ನಾ.ರತ್ನಾಕರ್ ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ದಸರ ಸಂದರ್ಭದಲ್ಲಿ, ಶಾಲೆಯ ಕೆಲಸವನ್ನು ಮುಗಿಸಿಕೊಂಡು, ತಾವು ನೆಲೆಸಿರುವ ಹೊಸನಗರಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಕೆಸಿನಮನೆ ರತ್ನಾಕರ್ ಅವರು, ನಂತರದ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೂ ಕೂಡ ರಿಪ್ಪನ್ ಪೇಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಉಪಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದೆರಡು ತಿಂಗಳಿನಿಂದ ಅನಾರೋಗ್ಯ ಮತ್ತಷ್ಟು ಉಲ್ಬಣಗೊಂಡ ಪರಿಣಾಮವಾಗಿ ಅಕ್ಟೋಬರ್ 7ರ ಬುಧವಾರದಂದು ಇಹಲೋಕವನ್ನು ತ್ಯಜಿಸಿದ್ದಾರೆ. ಮೃತರು ಪತ್ನಿ ಮತ್ತು ಓರ್ವ ಪುತ್ರನನ್ನು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ರಿಪ್ಪನ್ ಪೇಟೆ ಪ್ರೌಢಶಾಲಾ ಸಮಿತಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸೇರಿದಂತೆ ಹಲವರು ಕೆಸಿನಮನೆ ನಾ. ರತ್ನಾಕರ್ ಅವರ ಅಂತಿಮ ದರ್ಶನವನ್ನು ಪಡೆದುಕೊಂಡರು.







