ಮೂಡಿಗೆರೆ: ಹಸುವೊಂದರ ಕೊರಳಿಗೆ ಹಗ್ಗವನ್ನು ಕಟ್ಟಿ, ದುಷ್ಕರ್ಮಿಗಳು ದರದರನೆ ಎಳೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ತಾಯಿ ಹಸು ಹಿಂದಿನಿಂದ ಓಡಿ ಬಂದ ಮನಮಿಡಿಯುವ ಘಟನೆ, ರಾಷ್ಟ್ರೀಯ ಹೆದ್ದಾರಿ 173ರ ಬಿಳಗುಳ ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗೋಕಳ್ಳತನದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ರಾತ್ರಿಯ ಸಮಯದಲ್ಲಿ ಮನೆಯ ಸಮೀಪ ಮತ್ತು ರಸ್ತೆ ಬದಿಯಲ್ಲಿ ಕಟ್ಟಿರುವಂತಹ ಗೋವುಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಿಸಿಟಿವಿ ಕ್ಯಾಮೆರಾಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳುವ ಮೂಲಕ ಗೋಕಳ್ಳತನವನ್ನು ನಿಯಂತ್ರಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಕಳಸ: ಕಾಡುಕೋಣ ದಾಳಿ; ಕೃಷಿಕನಿಗೆ ಗಂಭೀರ ಗಾಯ
ಕಳಸ: ಕಾಡುಕೋಣ ದಾಳಿಯಿಂದ ಕೃಷಿಕರೊಬ್ಬರು ಗಾಯಗೊಂಡಿರುವ ಘಟನೆ, ಭಾನುವಾರದಂದು ಮರಸಣಿಗೆ ಪಂಚಾಯಿತಿ ವ್ಯಾಪ್ತಿಯ ಗಾಳಿಗಂಡಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಸುಂದರ ಮೊಯಿಲ ಎಂದು ಗುರುತಿಸಲಾಗಿದೆ. ಸುಂದರ ಮೊಯಿಲ ಅವರು ತಮ್ಮ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಡುಕೋಣವೊಂದು ಇದ್ದಕ್ಕಿದ್ದ ಹಾಗೆ ನುಗ್ಗಿ ಬಂದು, ಅವರಿಗೆ ಗುದ್ದಿದೆ ಎನ್ನಲಾಗಿದೆ.
ಕಾಡುಕೋಣ ಗುದ್ದಿದ ರಭಸಕ್ಕೆ ಸುಂದರ ಮೊಯಿಲ ಅವರು ಚರಂಡಿಗೆ ಬಿದ್ದಿದ್ದು, ಪರಿಣಾಮವಾಗಿ ಅವರ ಸೊಂಟ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿವೆ ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಸುಂದರ ಮೊಯಿಲ ಅವರನ್ನು ಕಳಸದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
•ಭದ್ರಾವತಿ: ಯುವ ರಂಗ ಕಲಾವಿದ ಹರ್ಷ ನಿಧನ
ಭದ್ರಾವತಿ: ಬೈಕ್ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ, ಶನಿವಾರದಂದು ಹೊನ್ನಟ್ಟಿ ಹೊಸೂರು ಸಮೀಪದಲ್ಲಿ ನಡೆದಿದೆ. ಮೃತ ಯುವಕನನ್ನು ಯುವ ರಂಗ ಕಲಾವಿದ ಹರ್ಷ ಎಂದು ಗುರುತಿಸಲಾಗಿದೆ. ಹರ್ಷ ಅವರು ಸಂಬಂಧಿಕರೊಬ್ಬರನ್ನು ಭದ್ರಾವತಿಗೆ ಬಿಟ್ಟು ಬರಲು ತೆರಳುತ್ತಿದ್ದ ಸಂದರ್ಭದಲ್ಲಿ, ಬೈಕ್ ಹರ್ಷ ಅವರ ನಿಯಂತ್ರಣ ತಪ್ಪಿ, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಹರ್ಷ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
•ಹೊಸನಗರ: ಚಿರತೆ ದಾಳಿ; ಕರು ಬಲಿ!
ಹೊಸನಗರ: ಚಿರತೆಯ ದಾಳಿಗೆ 2ವರ್ಷದ ಕರುವೊಂದು ಮೃತಪಟ್ಟಿರುವ ಘಟನೆ, ಶನಿವಾರದಂದು ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆ ಗ್ರಾಮದಲ್ಲಿ ನಡೆದಿದೆ. ಶ್ರೀಮತಿ ಎನ್ನುವ ಮಹಿಳೆಗೆ ಸೇರಿದ ಕರುವನ್ನು ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿದ್ದು, ಕರುವಿನ ಗಂಟಲಿನ ಭಾಗಕ್ಕೆ ಬಾಯಿ ಹಾಕಿ ಅದನ್ನು ಘಾಸಿಗೊಳಿಸಿದೆ ಎನ್ನಲಾಗಿದೆ. ಆದರೂ ಕರು ಚಿರತೆಯ ದಾಳಿಯಿಂದ ಹೇಗೋ ತಪ್ಪಿಸಿಕೊಂಡು ಮನೆಗೆ ಬಂದು ಸೇರಿದರೂ ಕೂಡ ಗಂಟಲಿನ ಭಾಗಕ್ಕೆ ತೀವ್ರತರವಾಗಿ ಗಾಯವಾಗಿದ್ದರಿಂದ ಮನೆಗೆ ಬಂದ ಕೆಲವೇ ಸಮಯದಲ್ಲಿ ಅದು ಮೃತಪಟ್ಟಿತು ಎನ್ನುವ ಮಾಹಿತಿ ಲಭಿಸಿದೆ. ಕಳೆದ ಕೆಲವು ದಿನಗಳಿಂದ ಹಿಂಡ್ಲೆಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯು ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಇದೀಗ ಚಿರತೆಯ ದಾಳಿಯಿಂದ ಕರುವಿನ ಸಾವು ಸಂಭವಿಸಿರುವುದು ಆತಂಕದ ಮಟ್ಟವನ್ನು ಮತ್ತಷ್ಟು ಹೆಚ್ಚಳಗೊಳಿಸಿದೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆಯವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನಗಳನ್ನು ಪರಿಶೀಲಿಸಿ, ಅದನ್ನು ಸೆರೆ ಹಿಡಿದು ಗ್ರಾಮಸ್ಥರಲ್ಲಿ ಉಂಟಾಗಿರುವಂತಹ ಆತಂಕವನ್ನು ದೂರ ಮಾಡಬೇಕೆಂದು ಜನರು ಆಗ್ರಹಪಡಿಸಿದ್ದಾರೆ.







