ಬೆಂಗಳೂರು: ಸೌಮ್ಯ ನಟನೆ, ಹಾಸ್ಯದೊಂದಿಗೆ ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದ್ದು, ಕನ್ನಡಕ್ಕೆ ಇದು ದೊಡ್ಡ ಮನ್ನಣೆಯಾಗಿದೆ.
ಸೆಪ್ಟೆಂಬರ್ 16ರ ಬುಧವಾರದಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲೇ ಚಿತ್ರರಂಗದ ಅನುಭವ, ವಿಭಿನ್ನ ಶೈಲಿಯ ಅಭಿನಯ ಮತ್ತು ಅವರ ಕಲಾಸೇವೆಯನ್ನು ಗುರುತಿಸಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಬೇಕೆಂಬ ಆಗ್ರಹ ಹಲವಾರು ಕಡೆಯಿಂದ ಕೇಳಿಬಂದಿತ್ತು. ಇದಕ್ಕೆ ಪ್ರತಿಫಲವಾಗಿ ಇತ್ತೀಚೆಗೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಒಲಿದಿತ್ತು. ಇದೀಗ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಕೂಡ ಅನಂತನಾಗ್ ಅವರಿಗೆ ಸಂದಿರುವುದು ಅವರ ಅಭಿಮಾನಗಳಿಗೆ, ಚಿತ್ರರಸಿಕರಿಗೆ ಅದರಲ್ಲೂ ಕನ್ನಡಿಗರಿಗೆ ಸಂತೋಷವನ್ನುಂಟು ಮಾಡಿದೆ.
1995ರಲ್ಲಿ ವರನಟ, ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ ಈ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇದಾದ 31 ವರ್ಷಗಳ ಬಳಿಕ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿಯು ಒಲಿಯುವ ಮೂಲಕ ಕನ್ನಡಿಗರಲ್ಲಿ ಮತ್ತೊಮ್ಮೆ ಹೆಮ್ಮೆಯನ್ನುಂಟು ಮಾಡಿದೆ. ಇದೇ ತಿಂಗಳ 4ರಂದು ಅವರು ತಮ್ಮ 78ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಗೌರಿ ಗಣೇಶ, ಗಣೇಶನ ಮದುವೆ, ಗಣೇಶ ಸುಬ್ರಹ್ಮಣ್ಯದಂತಹ ಗಣೇಶ ಸರಣಿಯ ಚಿತ್ರಗಳ ನಾಯಕನಟರಾಗಿರುವ ಅನಂತ್ ನಾಗ್ ಅವರಿಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿಯೇ ಅವರ ಕಲಾಸೇವೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದು ಬಂದಿರುವುದು ಕಾಕತಾಳೀಯವಾಗಿದೆ. ಮುಂಬೈನ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಅನಂತ್ ನಾಗ್ ಅವರು ಮೊದಲಿಗೆ ಹಿಂದಿ, ಮರಾಠಿ ನಾಟಕಗಳಲ್ಲಿ ಅಭಿನಯಿಸಿದರು. 1973ರಲ್ಲಿ ಬಿಡುಗಡೆಯಾದ ‘ಸಂಕಲ್ಪ’ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕ ನಟರಾಗಿ ಚಂದನವನವನ್ನು ಪ್ರವೇಶಿಸಿದರು. ಕನ್ನಡ ಅಷ್ಟೇ ಅಲ್ಲದೆ ಹಿಂದಿ ಚಿತ್ರರಂಗದಲ್ಲೂ ತಮ್ಮನ್ನು ಗುರುತಿಸಿಕೊಂಡ ಅನಂತ್ ನಾಗ್ ಅವರು ಶ್ಯಾಮ್ ಬೆನಗಲ್, ಶಬಾನಾ ಆಜ್ಮಿ ಸೇರಿದಂತೆ ಹಲವು ದಿಗ್ಗಜ ನಿರ್ದೇಶಕರೊಟ್ಟಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರದು. ಅವರ ಮೊದಲ ಹಿಂದಿ ಸಿನಿಮಾ ‘ಅಂಕುರ್’ ಗೆ ಮೂರು ರಾಷ್ಟ್ರ ಪ್ರಶಸ್ತಿಗಳು ಲಭಿಸಿತು. ಅನಂತ್ ನಾಗ್ ಅವರು ಕೇವಲ ನಟರಾಗಿ ಅಷ್ಟೇ ಅಲ್ಲದೆ ರಾಜಕಾರಣಿಯಾಗಿ ಕೂಡ ಗುರುತಿಸಿಕೊಂಡಿದ್ದು, 1988ರಿಂದ 1994ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ನಾಮನಿರ್ದೇಶಕ ಸದಸ್ಯರಾಗಿ ಕೂಡ ಗುರುತಿಸಿಕೊಂಡಂತವರು. 1994ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಜಯಗಳಿಸುವ ಮೂಲಕ ವಿಧಾನಸಭೆಯನ್ನು ಪ್ರವೇಶಿಸಿದರು. ಬಳಿಕ ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ಸಚಿವರಾಗಿ ಕೂಡ ಕಾರ್ಯನಿರ್ವಹಿಸಿದರು. ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಕೋಟ್ಯಂತರ ಅಭಿಮಾನಿಗಳನ್ನು ಅನಂತನಾಗ್ ಅವರು ಹೊಂದಿದ್ದಾರೆ.







