Categories
Uncategorized

ಶಾಸಕರನ್ನು ಹೊತ್ತು ಕುಣಿದ ಪೊಲೀಸರಿಗೆ ವರ್ಗಾವಣೆ ಶಿಕ್ಷೆ! •ಕಡೂರು: ಅಕ್ರಮ ಮದ್ಯ ಮಾರಾಟ; ವೃದ್ಧ ಅರೆಸ್ಟ್! •ಹೊಸನಗರ: ಕಾಡಾನೆಗಳ ಹಾವಳಿ; ರೈತರಿಗೆ ನಷ್ಟ •ಶಿವಮೊಗ್ಗ: ಅಡಿಕೆ ಬೇಯಿಸುವಾಗ ಹಂಡೆಯೊಳಗೆ ಬಿದ್ದು ವ್ಯಕ್ತಿ ಸಾವು •ತೀರ್ಥಹಳ್ಳಿ: ಹಳ್ಳಕ್ಕೆ ಬಿದ್ದ ಕಾರು; ತಾಯಿ ಮಗುವಿನ ರಕ್ಷಣೆ

ಶಿವಮೊಗ್ಗ: ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಶಾಸಕರನ್ನೇ ಹೊತ್ತು ಕುಣಿದ ಪೊಲೀಸ್ ಸಿಬ್ಬಂದಿಯನ್ನ ಶಿಸ್ತುಕ್ರಮದ ಭಾಗವಾಗಿ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಈ‌ ಆದೇಶ ಹೊರಡಿಸಿದ್ದಾರೆ. ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದ ಬಳಿ ಸಾಗುತ್ತಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕ ಚನ್ನಬಸಪ್ಪ ಅವರು ಭಾಗಿಯಾಗಿದ್ದರು. ಈ ವೇಳೆ ಶಾಸಕರನ್ನ ಹೊತ್ತು ಕುಣಿದ ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಗಣೇಶ್ ಹಾಗೂ ಪ್ರಕಾಶ್.ಎ.ಕೆ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.
ಗಣೇಶ್ ರನ್ನ ತೀರ್ಥಹಳ್ಳಿಯ ಆಗುಂಬೆ ಪೊಲೀಸ್ ಠಾಣೆಗೆ, ಪ್ರಕಾಶ್.ಎ.ಕೆ ರನ್ನ ಸೊರಬದ ಆನವಟ್ಟಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲು ಎಸ್ಪಿ ಬಿ.ನಿಖಿಲ್ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗಣಪತಿಯನ್ನ ಪ್ರತಿಷ್ಟಾಪಿಸಲಾಗಿತ್ತು. ಪೂಜೆಯ ಬಳಿಕ ಅದೇ ದಿನ ಸಂಜೆ ಠಾಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆಗೆ ಮೆರವಣಿಗೆ ನಡೆಸಲಾಗಿತ್ತು.

•ಕಡೂರು: ಅಕ್ರಮ ಮದ್ಯ ಮಾರಾಟ; ವೃದ್ಧ ಅರೆಸ್ಟ್!

ಕಡೂರು: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೃದ್ಧನನ್ನು ಪೊಲೀಸರು ಬಂಧಿಸಿದ ಘಟನೆ, ರಾಷ್ಟ್ರೀಯ ಹೆದ್ದಾರಿ 173ರ ಕಂಸಾಗರ ಗೇಟ್ ಬಳಿ ನಡೆದಿದೆ. ಲಾಭವನ್ನು ಗಳಿಸುವ ಉದ್ದೇಶದಿಂದ ಪರವಾನಿಗೆ ರಹಿತವಾಗಿ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ದಾಳಿ ನಡೆಸಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಸರಸ್ವತಿಪುರ ಗ್ರಾಮದ 71 ವರ್ಷದ ಎಸ್.ಸಿ.ಪರಮೇಶ್ವರಪ್ಪ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ 53 ರಾಜಾ ವಿಸ್ಕಿ ಪೌಚ್ ಗಳು, ನಾಲ್ಕು ಪವರ್ ಕೂಲ್ ಬಿಯರ್ ಟಿನ್ ಗಳು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

•ಹೊಸನಗರ: ಕಾಡಾನೆಗಳ ಹಾವಳಿ; ರೈತರಿಗೆ ನಷ್ಟ

ಹೊಸನಗರ: ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಘಟನೆ, ರಿಪ್ಪನ್ ಪೇಟೆ ಸಮೀಪದ ಅರಸಾಳಿನಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟುಮಾಡಿದೆ. ಸುತ್ತಮುತ್ತಲಿನ ಪ್ರದೇಶಗಳಾದ ತಮ್ಮಡಿಕೊಪ್ಪ ಮತ್ತು ಬಟಾಣಿ ಜಡ್ಡುಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಮೂರ್ತಿ ಆಚಾರ್ ಮತ್ತು ಮಂಜಪ್ಪ ಎನ್ನುವವರ ತೋಟಗಳಿಗೆ ನುಗ್ಗಿ ಅಡಿಕೆ ಮತ್ತು ಬಾಳೆಗಿಡಗಳನ್ನು ನಾಶ ಮಾಡಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಪರಿಣಾಮವಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿರಿಗೆರೆ ವಲಯ ಅರಣ್ಯಾಧಿಕಾರಿಗಳಾದ ವಿನಯ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶೀಲನೆಯನ್ನು ನಡೆಸಿದರು ಎನ್ನಲಾಗಿದೆ. ಬಳಿಕ ಆಲುವಳ್ಳಿ, ಗಾಳಿಬೈಲು ಮತ್ತು ಕೆಂಚನಾಳ ಭಾಗದ ಜನರು ರಾತ್ರಿಯ ಸಮಯ ಮತ್ತು ಒಬ್ಬಂಟಿಗಳಾಗಿ ಅರಣ್ಯದ ಅಂಚಿನಲ್ಲಿರುವಂತಹ ಜಮೀನುಗಳ ಕಡೆಗೆ ತೆರಳದಂತೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಿದ್ದಾರೆ.

•ಶಿವಮೊಗ್ಗ: ಅಡಿಕೆ ಬೇಯಿಸುವಾಗ ಹಂಡೆಯೊಳಗೆ ಬಿದ್ದು ವ್ಯಕ್ತಿ ಸಾವು

ಶಿವಮೊಗ್ಗ: ಅಡಿಕೆ ಬೇಯಿಸುವ ಸಮಯದಲ್ಲಿ ವ್ಯಕ್ತಿಯೊಬ್ಬರು ಅದರ ಹಂಡೆಯೊಳಗೆ ಬಿದ್ದು ಸಾವನ್ನಪ್ಪಿರುವ ಧಾರಣ ಘಟನೆ, ವಡ್ಡಿನಕೊಪ್ಪ ಎನ್ನುವಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾದ ಜೇನುಕುಮಾರ್ ಎನ್ನುವವರು ಕಳೆದ ವಾರ ತಮ್ಮ ಮನೆಯ ಬಳಿಯಲ್ಲಿರುವ ಶೆಡ್ ನಲ್ಲಿ ಅಡಿಕೆಯನ್ನು ಬೇಯಿಸುತ್ತಿದ್ದರು. ಬೆಂದ ಅಡಿಕೆಯನ್ನು ಹೊರತೆಗೆದ ಬಳಿಕ, ಹಂಡೆಯೊಳಗಿದ್ದ ಅಡಿಕೆಯ ಚೊಗರನ್ನು ತೆಗೆಯಲು ಹಂಡೆಯ ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ನಿಂತ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹಂಡೆಯೊಳಗೆ ಬಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಅಕ್ಕಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಮೂವರು ವ್ಯಕ್ತಿಗಳು ಕೂಡಲೇ ಜೇನುಕುಮಾರ್ ಅವರನ್ನು ಮೇಲಕೆತ್ತಿದ್ದಾರೆ. ಬಳಿಕ ಜೇನುಕುಮಾರ್ ಅವರು ಶೆಡ್ ನಿಂದ ಹೊರಗೆ ಬಂದು, ಶರ್ಟ್ ಅನ್ನು ತೆಗೆದಿಟ್ಟು ಪುನಃ ಶೆಡ್ ಗೆ ಹೋದಾಗ, ಅವರ ದೇಹದ ಬಹುತೇಕ ಭಾಗ ಸುಟ್ಟುಹೋಗಿತ್ತು ಎನ್ನುವ ಮಾಹಿತಿ ಲಭಿಸಿದೆ. ಆಗ ಮನೆಯವರು ತಕ್ಷಣ ಜೇನುಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಬಳಿಕ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರದಂದು ಅವರು ಸಾವನ್ನಪ್ಪಿದ್ದಾರೆ.

•ತೀರ್ಥಹಳ್ಳಿ: ಹಳ್ಳಕ್ಕೆ ಬಿದ್ದ ಕಾರು; ತಾಯಿ ಮಗುವಿನ ರಕ್ಷಣೆ

ತೀರ್ಥಹಳ್ಳಿ: ಚಾಲಕಿಯ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯಲ್ಲಿದ್ದ ಹಳ್ಳಕ್ಕೆ ಬಿದ್ದಿರುವ ಘಟನೆ, ಬುಧವಾರದಂದು ಬೆಳ್ಳಂಬೆಳಗ್ಗೆ ಗುಡ್ಡೇಕೊಪ್ಪ ಸಮೀಪದಲ್ಲಿ ನಡೆದಿದೆ. ದಾವಣಗೆರೆಯಿಂದ ಮಣಿಪಾಲ್ ನತ್ತ ತಾಯಿ ಮತ್ತು ಮಗು ಪ್ರಯಾಣ ಬೆಳೆಸಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮಹಿಳೆಯು ಕಾರನ್ನು ಚಲಾಯಿಸುತ್ತಿದ್ದಾಗ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಮಗು ತಾಯಿಯನ್ನು ಕರೆದಿದೆ. ಆಗ ಮಹಿಳೆಯು ಹಿಂತಿರುಗಿ ಮಗುವಿನತ್ತ ನೋಡುವಾಗ ಕಾರು ಆಕೆಯ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ಹಳ್ಳಕ್ಕೆ ಬಿದ್ದಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಮಹಿಳೆಯ ಸಹಾಯಕ್ಕೆ ಬಂದಿದ್ದು, ಹಳ್ಳಕ್ಕೆ ಬಿದ್ದಿದ್ದ ಕಾರಿನಿಂದ ಮಹಿಳೆ ಮತ್ತು ಆಕೆಯ ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತಂದಿದ್ದಾರೆ, ತಾಯಿ ಮತ್ತು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.