ಕಾಪು: ಇನ್ನೋವಾ ಕಾರೊಂದು ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ, ಬುಧವಾರದಂದು ಪೈಯ್ಯಾರು ಮಲೆ ಜುಮಾದಿ ಸಾನದ ಬಳಿ ನಡೆದಿದೆ. ಅಲ್ಲದೆ ಇನ್ನೋವಾ ಕಾರಿನ ಎಡ ಮತ್ತು ಬಲಭಾಗಗಳು ನುಜ್ಜುಗುಜ್ಜಾಗಿದ್ದು, ಕಾರಿನ ಗಾಜುಗಳು ಕೂಡ ಒಡೆದು ಹೋಗಿರುವುದು ಹಾಗೂ ಕಾರಿನ ಮುಂಭಾಗ ಮತ್ತು ಹಿಂಭಾಗದ ನಂಬರ್ ಪ್ಲೇಟ್ ಗಳನ್ನು ಕಳಚಿಡಲಾಗಿದ್ದು, ಢಿಕ್ಕಿಯಲ್ಲಿ ಹೊನ್ನಾವರ ಹಾಗೂ ಮಧ್ಯಭಾಗದ ಸೀಟಿನಲ್ಲಿ ಸಾಗರದ ನೋಂದಣಿಯನ್ನು ಹೊಂದಿರುವಂತಹ ನಂಬರ್ ಪ್ಲೇಟ್ ಗಳು ದೊರಕಿರುವುದು ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ದನಗಳ್ಳತನಕ್ಕೆ ಸಂಬಂಧಿಸಿದಂತೆ ಸುಳಿವು ಬಂದ ಹಿನ್ನೆಲೆಯಲ್ಲಿ ಪೊಲೀಸರು ಶಿರೂರು ಟೋಲ್ ಬಳಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಅವರನ್ನು ತಪ್ಪಿಸಿಕೊಂಡು ಇನ್ನೋವಾ ಕಾರೊಂದು ಮಂಗಳವಾರ ತಡರಾತ್ರಿ ಪರಾರಿಯಾಗಿತ್ತು. ನಿನ್ನೆ ದೊರೆತಿರುವ ಇನ್ನೋವಾ ಕಾರು ಇದೇ ಆಗಿದೆ. ಅಂದರೆ ದನಗಳ್ಳತನ ಮಾಡುತ್ತಿರುವ ಆರೋಪಿಗಳು ಪೈಯ್ಯಾರು, ಬೆಳಪು ಗ್ರಾಮದವರಾಗಿದ್ದಾರೆ. ಆದರೆ, ಶಿರೂರಿನಿಂದ 100 ಕಿಲೋಮೀಟರ್ ಇರುವ ಪೈಯ್ಯಾರಿಗೆ ಹೋಗಲು ಈ ಮಾರ್ಗವನ್ನು ಸೂಚಿಸಿದವರು ಯಾರು ಎನ್ನುವ ಪ್ರಶ್ನೆ ಎದುರಾಗಿದ್ದು, ಸ್ಥಳೀಯರ ಸಹಕಾರವಿಲ್ಲದೆ ಈ ಜಾಗದಲ್ಲಿ ಕಾರನ್ನು ನಿಲ್ಲಿಸಿ ಪರಾರಿಯಾಗಲು ಸಾಧ್ಯವಿಲ್ಲ ಎಂದು ಪೊಲೀಸರು ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕಳತ್ತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ್ ಶೆಟ್ಟಿ ಪೈಯ್ಯಾರು, ಮಾಜಿ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಗುರ್ಮೆ, ರಾಜೇಶ್ ಕುಲಾಲ್, ರಾಜ್ ಕಿರಣ್ ಶೆಟ್ಟಿ, ಸಂತೋಷ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದರು ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಕಾರಿನ ಎಡಭಾಗದ ಹಿಂಬದಿಯ ಚಕ್ರಕ್ಕೆ ಮಾತ್ರ ಸಗಣಿ ತಾಗಿರುವುದು ಇದನ್ನು ದನಗಳ್ಳತನಕ್ಕೆ ಬಳಸಿದ ಕಾರು ಎನ್ನುವುದನ್ನು ಸ್ಪಷ್ಟಪಡಿಸಿದ. ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬಂಟ್ವಾಳ: ಅಕ್ರಮ ಕೆಂಪುಕಲ್ಲು ಸಾಗಾಟ; ಪ್ರಕರಣ ದಾಖಲು
ಬಂಟ್ವಾಳ: ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ, ಕರೋಪಾಡಿ ಎನ್ನುವಲ್ಲಿ ನಡೆದಿದೆ. ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪುಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ವಿಟ್ಲ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ಅವರ ನೇತೃತ್ವದಲ್ಲಿ ಪೊಲೀಸರ ತಂಡವು ಕರೋಪಾಡಿ ಗ್ರಾಮದ ನೆಲ್ಲಿಕಟ್ಟೆ ಜಂಕ್ಷನ್ ಬಳಿ ಕೇರಳ ಕಡೆಯಿಂದ ಕನ್ಯಾನ ಕಡೆಗೆ ತೆರಳುತ್ತಿದ್ದ ಲಾರಿಯನ್ನು ತಡೆಗಟ್ಟಿದ್ದಾರೆ. ಪರಿಶೀಲನೆಯನ್ನು ನಡೆಸಿದಾಗ ಪರವಾನಿಗೆ ಇಲ್ಲದೆ ಕೆಂಪುಕಲ್ಲುಗಳನ್ನು ಸಾಗಾಟ ಮಾಡುತ್ತಿರುವುದು ದೃಢಪಟ್ಟಿದೆ.
•ಕುಂದಾಪುರ: ಯುವತಿ ಆತ್ಮಹತ್ಯೆ
ಕುಂದಾಪುರ: ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ಬುಧವಾರದಂದು ವಕ್ವಾಡಿ ಗ್ರಾಮದ ತೆಂಕಬೆಟ್ಟು ಎನ್ನುವಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸವಿತಾ ಎಂದು ಗುರುತಿಸಲಾಗಿದೆ. ಸವಿತಾ ಅವರು ಕಳೆದ ಹತ್ತು ವರ್ಷಗಳಿಂದ ಬೆನ್ನುನೋವು ಮತ್ತು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರೂ ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ ಎನ್ನಲಾಗಿದೆ. ಅನಾರೋಗ್ಯದ ಕಾರಣದಿಂದಾಗಿ ಬೇಸತ್ತ ಸವಿತಾ ಅವರು ಸೆಪ್ಟೆಂಬರ್ 15ರ ನಡುರಾತ್ರಿಯಲ್ಲಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಬುಧವಾರದಂದು ಸವಿತಾ ಅವರು ಎಲ್ಲಿಯೂ ಕಾಣಿಸದಿದ್ದಾಗ ಅವರ ಕುಟುಂಬದವರು ಮನೆಯ ತುಂಬಾ ಹುಡುಕಾಟ ನಡೆಸಿದಾಗ ಮಹಡಿಯ ಕೋಣೆಯೊಂದರಲ್ಲಿ ಮಲಗಿರುವ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸವಿತಾ ಅವರ ಬಾಯಿ ಮತ್ತು ಮೂಗಿನಿಂದ ನೊರೆ ಮಿಶ್ರಿತ ದ್ರವ ಹೊರಬರುತ್ತಿತ್ತು ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಅವರ ಪಕ್ಕದಲ್ಲಿ ವಿಷದ ಬಾಟಲಿ ಇರುವುದನ್ನು ಗಮನಿಸಿದ ಮನೆಯವರು, ಸವಿತಾ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ದೃಢಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸವಿತಾ ಅವರ ತಂದೆ ಮಂಜಯ್ಯ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದು. ಅದರ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಪುತ್ತೂರು: ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿ; ಗಂಭೀರ ಗಾಯ
ಪುತ್ತೂರು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಘಟನೆ, ಕಬಕ ಗ್ರಾಮದ ಮುರದ ಬಳಿ ನಡೆದಿದೆ. ವ್ಯಕ್ತಿಯನ್ನು ಸಂಪ್ಯ ನಿವಾಸಿ ಶುಭಕರ ನಾಯಕ್ ಎಂದು ಗುರುತಿಸಲಾಗಿದೆ. ಶುಭಕರ ಅವರು ರಸ್ತೆಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಶೇಖರ್ ಎನ್ನುವ ವ್ಯಕ್ತಿಯು ತನ್ನ ಬೈಕ್ ನಲ್ಲಿ ಕಬಕ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದಾಗ ಅವರಿಗೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಶುಭಕರ ಅವರನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರು ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಶುಭಕರ ಅವರ ಪುತ್ರ ವಿಜಯ್ ನಾಯಕ್ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







