ತೀರ್ಥಹಳ್ಳಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 19ರಂದು ತೀರ್ಥಹಳ್ಳಿಗೆ ಆಗಮಿಸುತ್ತಿದ್ದು ಕಸ್ತೂರಿ ರಂಗನ್ ವರದಿ ಬಗ್ಗೆ ರೈತರ ಜತೆ ಸಭೆ ನಡೆಸಲಿದ್ದಾರೆ. ಈ ಸಭೆಗಾಗಿ ಈಗಾಗಲೇ ಭಾರೀ ಸಿದ್ಧತೆ ನಡೆದಿದೆ.
ಮುಖ್ಯಮಂತ್ರಿ ಆದ ಬಳಿಕ ಮೊದಲ ಭೇಟಿ ಇದಾಗಿದ್ದು ಜಿಲ್ಲಾ ಆಡಳಿತದ ವತಿಯಿಂದ ಯು.ಆರ್.ಅನಂತಮೂರ್ತಿ ಶಾಲಾ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಗೆ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಸ್ತೂರಿ ರಂಗನ್ ವರದಿ ಸೇರಿದಂತೆ ಮಲೆನಾಡಿನ ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳು ಸಂವಾದ ನಡೆಸಲಿದ್ದಾರೆ. ಈಗಾಗಲೇ ಸರ್ಕಾರಿ ಡಿಗ್ರಿ ಕಾಲೇಜು ಮೈದಾನದಲ್ಲಿ ಹೆಲಿ ಪ್ಯಾಡ್ ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಡಿಗ್ರಿ ಕಾಲೇಜು, ಸರ್ಕಾರಿ ಪಿಯು, ಅನಂತಮೂರ್ತಿ ಪ್ರೌಢ ಶಾಲೆಗೆ ರಜೆ ನೀಡಲಾಗಿದೆ.
ತಯಾರಿಯಲ್ಲಿ ಆರಗ, ಕಿಮ್ಮನೆ, ಮಂಜುನಾಥ ಗೌಡರ ರೇಸ್
ಕಾರ್ಯಕ್ರಮದ ಸಿದ್ಧತೆಗಳು, ಸಾರ್ವಜನಿಕರ ಆಸನ ವ್ಯವಸ್ಥೆ, ಮುಖ್ಯಮಂತ್ರಿಗಳ ಭೇಟಿ ಹಾಗೂ ಸಭೆಯ ರೂಪುರೇಷೆಗಳ ಕುರಿತು ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರ ನಾಯಕ ಡಾ. ಆರ್.ಎಂ. ಮಂಜುನಾಥ್ ಗೌಡ ಸೇರಿ ಪ್ರಮುಖ ನಾಯಕರು ವಿವಿಧ ಸಭೆ ನಡೆಸಿ ಪರಿಶೀಲನೆ ನಡೆಸಿ ಸಿದ್ಧತೆ ಮಾಡಿದ್ದಾರೆ.
ಜಿಲ್ಲಾಧಿಕಾರಿ, ಎಸ್ಪಿ ಸೇರಿ ಅಧಿಕಾರಿಗಳ ಪರಿಶೀಲನೆ
ಸಿಎಂ ಡಿಕೆ ಶಿವಕುಮಾರ್ ತೀರ್ಥಹಳ್ಳಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಹಾಗೂ ಎಸ್ ಪಿ ನಿಖಿಲ್ ಬಿ ಐಪಿಎಸ್ ತೀರ್ಥಹಳ್ಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಯಿತು. ಜಿಲ್ಲಾಧಿಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಸಿಎಂ ಭೇಟಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳು, ಭದ್ರತಾ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳ ಕುರಿತು ಚರ್ಚೆ ಮಾಡಲಾಯಿತು.
ಹೊಸನಗರ ತಾಲೂಕಿನಿಂದ 5000 ಮಂದಿ ರೈತರು
ಹೊಸನಗರ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಕುರಿತು ಸ್ಥಳೀಯ ರೈತರು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 19ರಂದು ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಮನವಿ ಮೇರೆಗೆ ಈ ಸಭೆ ನಡೆಯುತ್ತಿದ್ದು, ಹೊಸನಗರ ತಾಲೂಕಿಗೆ ಮಾರಕವಾಗಿರುವ ಈ ವರದಿಯನ್ನು ವಿರೋಧಿಸಿ ಶಾಸಕರ ನೇತೃತ್ವದಲ್ಲಿ ತಾಲೂಕಿನಿಂದ ಸುಮಾರು 5,000ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ತಿಳಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನಿಂದ ಪಕ್ಷಾತೀತವಾಗಿ ಬನ್ನಿ: ಆರಗ ಕರೆ
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ತಾಲೂಕಿನ ಅತಿ ಹೆಚ್ಚು ಗ್ರಾಮ ಕಸ್ತೂರಿ ರಂಗನ್ ವರದಿಯಲ್ಲಿ
ಸೇರ್ಪಡೆಯಾಗಿರುವುದರಿಂದ ಈ ಸಭೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಭೇಟಿ ನೀಡುತ್ತಿದ್ದು ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಲಿದೆ ದಯವಿಟ್ಟು ಪ್ರತಿಯೊಬ್ಬ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು







