ಚಿಕ್ಕಮಗಳೂರು: ಶಾಂತಿಯುತವಾಗಿ ನಡೆಯಬೇಕಿದ್ದ ಸಭೆಯಲ್ಲಿ ಇದ್ದಕ್ಕಿದ್ದ ಹಾಗೆ ಕಲಹ ಏರ್ಪಟ್ಟ ಘಟನೆ, ಹಂಗರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಸಭೆಯಲ್ಲಿ ಅಧ್ಯಕ್ಷರು ಮತ್ತು ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಂತಿಮವಾಗಿ ಅದು ಕೈ ಕೈ ಮಿಲಾಯಿಸುವ ಹಂತವನ್ನು ತಲುಪಿದೆ. ಕಣತಿ ಸಮೀಪದಲ್ಲಿರುವ ಸರ್ಕಾರಿ ಜಾಗದ ಬಳಕೆಯ ವಿಚಾರವೇ ಇಬ್ಬರ ನಡುವಿನ ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ. ಸರ್ಕಾರದಿಂದ ಸಂಘದ ಹೆಸರಿನಲ್ಲಿ ಜಾಗವನ್ನು ಮಂಜೂರು ಮಾಡಿಸಿಕೊಂಡಿದ್ದು, ಇದೀಗ ಆ ಸ್ಥಳದಲ್ಲಿ ವಾಣಿಜ್ಯ ಮಳಿಗೆಗಳನ್ನು ಮತ್ತು ಪೆಟ್ರೋಲ್ ಬಂಕ್ ಗಳನ್ನು ನಿರ್ಮಿಸಲು ಸಂಘದ ಅಧ್ಯಕ್ಷರಾದ ಅರುಣ್ ಮತ್ತು ನಿರ್ದೇಶಕರಾದ ದಿಲೀಪ್ ಅವರು ಮುಂದಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಮತ್ತೋರ್ವ ನಿರ್ದೇಶಕರಾದ ಬೈಗೂರು ನಾಗೇಶ್ ಅವರು ಆ ಜಾಗದಲ್ಲಿ ಬಡ ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಮುಖಂಡರು ಕೂಡ ರಂಪಾಟಕ್ಕೆ ಇಳಿದಿದ್ದು, ಕೆಲಕಾಲ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು ಎನ್ನುವ ಸಂಗತಿ ತಿಳಿದುಬಂದಿದೆ.
•ಶಿವಮೊಗ್ಗ: ಮಾಲು ಸಹಿತ ಆರೋಪಿಗಳ ಬಂಧನ
ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಅಣ್ಣಾನಗರದಲ್ಲಿ ನಡೆದಿದೆ. ಇಲ್ಲಿನ ಚಾನಲ್ ರಸ್ತೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಏಕಾಏಕಿ ದಾಳಿ ನಡೆಸಿದ್ದಾರೆ. ಅಹಮದ್ ಮತ್ತು ಸೈಯ್ಯದ್ ಅಪ್ಪರ್ ಎನ್ನುವ ಇಬ್ಬರು ಆರೋಪಿಗಳು ಪೊಲೀಸರಿಗೆ ಸೆರೆ ಸಿಕ್ಕಿದ್ದು, ಈ ಸಂದರ್ಭದಲ್ಲಿ ಆರೋಪಿಗಳ ಬಳಿಯಿದ್ದ 1ಕೆಜಿ 420 ಗ್ರಾಂ ತೂಕದ ಸುಮಾರು 70.000 ಮೌಲ್ಯದ ಗಾಂಜಾವನ್ನು, ಕೃತ್ಯಕ್ಕೆ ಬಳಸಿದ 3.00.000 ಮೌಲ್ಯದ ಕಾರು ಮತ್ತು 300 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಸಾಗರ: ಹಳಿಯ ಮೇಲೆ ಉರುಳಿ ಬಿದ್ದ ಮರ; ತಾಳಗುಪ್ಪ- ಬೆಂಗಳೂರು ರೈಲು ಮಾರ್ಗಮಧ್ಯೆ ಸ್ಥಗಿತ
ಸಾಗರ: ಬೃಹತ್ ಮರವೊಂದು ರೈಲ್ವೆ ಹಳಿಯ ಮೇಲೆ ಉರುಳಿ ಬಿದ್ದ ಘಟನೆ, ಮಂಗಳವಾರದಂದು ಅರಸಾಳು ಸಮೀಪದಲ್ಲಿ ನಡೆದಿದೆ. ಪರಿಣಾಮವಾಗಿ ಬೆಳಗಿನ ಜಾವ 5:20ಕ್ಕೆ ತಾಳಗುಪ್ಪದಿಂದ ಹೊರಟ ಎಕ್ಸ್ ಪ್ರೆಸ್ ರೈಲು 7:೦0ಗಂಟೆಗೆ ಗೆ ಶಿವಮೊಗ್ಗ ಮತ್ತು ಮಧ್ಯಾಹ್ನ 12:೦೦ ಗಂಟೆಗೆ ಬೆಂಗಳೂರು ತಲುಪುವ ಬದಲಾಗಿ ಸುಮಾರು ಐದೂವರೆ ಗಂಟೆಗಳ ಕಾಲ ತಡವಾಗಿ ತಲುಪಿದೆ ಎನ್ನುವ ಮಾಹಿತಿ ಲಭಿಸಿದೆ. ರೈಲು ಚಾಲಕರು ಮತ್ತು ಸಂಬಂಧಿತ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಆನೆಕೆರೆ ಮತ್ತು ನೆವಟೂರು ಗ್ರಾಮಗಳ ನಡುವಿನ ಭಾಗದಲ್ಲಿ ರೈಲನ್ನು ನಿಲ್ಲಿಸುವ ಮೂಲಕ ಎದುರಾಗಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದಂತಾಗಿದೆ. ಗೌರಿ-ಗಣೇಶ ಹಬ್ಬದ ಸಾಲು ಸಾಲು ರಜೆಗಳನ್ನು ಮುಗಿಸಿ, ತಮ್ಮ ಮೂಲ ಊರಿನಿಂದ ಉದ್ಯೋಗ ಮತ್ತು ವಿದ್ಯಾಭ್ಯಾಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರುವ ಸ್ಥಳೀಯರು ಮಂಗಳವಾರ ಬೆಳಿಗ್ಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ಏಕಾಏಕಿ ರೈಲು ನಿಂತಿರುವುದನ್ನು ಕಂಡು ಸಂಕಷ್ಟಕ್ಕೆ ಸಿಲುಕಿದರು ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಮರವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿದರು ಎನ್ನುವ ಸಂಗತಿ ತಿಳಿದುಬಂದಿದೆ.
•ಶಿವಮೊಗ್ಗ: ಕೊಳೆತ ಹಣ್ಣುಗಳಿಂದ ಜ್ಯೂಸ್ ತಯಾರಿ
ಶಿವಮೊಗ್ಗ: ಆಹಾರ ಸುರಕ್ಷತಾ ಅಧಿಕಾರಿಗಳು ಡಾ.ಮೈತ್ರಿ ಅವರ ನೇತೃತ್ವದಲ್ಲಿ ಹೊಟೇಲ್ ಮತ್ತು ಜ್ಯೂಸ್ ಸೆಂಟರ್ ಗಳ ಮೇಲೆ ದಿಢೀರ್ ದಾಳಿ ನಡೆಸಿದ ಘಟನೆ, ದುರ್ಗಿಗುಡಿ ಸಮೀಪದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಕೊಳೆತ ಹಣ್ಣುಗಳನ್ನು ಬಳಸಿಕೊಂಡು ಜ್ಯೂಸ್ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಅಂಗಡಿಯನ್ನು ಸೀಜ್ ಮಾಡಿ, ಅಂಗಡಿಯನ್ನು ಬಂದ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕೇವಲ ಜ್ಯೂಸ್ ಸೆಂಟರ್ ಗಳಷ್ಟೇ ಅಲ್ಲದೆ, ಸುಮಾರು 15ಕ್ಕೂ ಹೆಚ್ಚು ಹೊಟೇಲ್ ಮತ್ತು ಆಹಾರ ಕೇಂದ್ರಗಳಿಗೆ ಅಧಿಕಾರಿಗಳ ತಂಡ ಇದ್ದಕ್ಕಿದ್ದ ಹಾಗೆ ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಬಹುತೇಕ ಆಹಾರ ಮಳಿಗೆಗಳಲ್ಲಿ ಅಡುಗೆ ಕೋಣೆ, ಪಾತ್ರೆ ತೊಳೆಯುವ ಸ್ಥಳ ಮಾಲಿನ್ಯದಿಂದ ಕೂಡಿದ್ದು, ಹೊಟೇಲ್ ಗಳಲ್ಲೂ ಜಿರಲೆಗಳ ಕಾಟ ಕೂಡ ಕಂಡುಬಂದಿದೆ. ಅಷ್ಟೇ ಅಲ್ಲದೆ ರೆಸ್ಟೋರೆಂಟ್ ಒಂದರಲ್ಲಿ ಅವಧಿ ಮುಗಿದಿದ್ದ ತಂಪಾದ ಪಾನೀಯಗಳು ಪತ್ತೆಯಾಗಿದ್ದು, ಕತ್ತರಿಸಿಟ್ಟ ಈರುಳ್ಳಿ, ತರಕಾರಿಗಳನ್ನು ದಿನಗಟ್ಟಲೆ ಫ್ರಿಡ್ಜ್ ನಲ್ಲಿ ಇಟ್ಟಿರುವುದನ್ನು ಮತ್ತು ಬೋಂಡಾ ಹಾಗೂ ಬಜ್ಜಿಗಳನ್ನು ಪ್ರಿಂಟೆಡ್ ಹಾಳೆಗಳಲ್ಲಿ ಸುತ್ತಿ ಕೊಡುವುದನ್ನು ಗಮನಿಸಿ, ಈ ಕ್ಷಣದಿಂದಲೇ ಇವುಗಳನ್ನು ನಿಲ್ಲಿಸಬೇಕೆಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ದಾಳಿ ನಡೆಸಿದ ಅಂಗಡಿ ಮತ್ತು ಹೊಟೇಲ್ ಗಳಿಗೆ ತಮ್ಮ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಕಾಲ ಸಮಯಾವಕಾಶ ನೀಡಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಾ.ಮೈತ್ರಿ ಅವರು “ನಗರದ ರಸ್ತೆ ಬದಿಯ ಸ್ಟ್ರೀಟ್ ಫುಡ್ ಸೆಂಟರ್ ಗಳು, ಚಾಟ್ ಮತ್ತು ಪಾನಿಪುರಿ ಮಳಿಗೆಗಳ ಮೇಲೂ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ತಂಡವು ನಿರಂತರ ನಿಗಾ ವಹಿಸಿದೆ. ಆಹಾರದಲ್ಲಿ ಕೃತಕ ಬಣ್ಣಗಳು, ಟೇಸ್ಟಿಂಗ್ ಪೌಡರ್ ಗಳ ಅತಿಯಾದ ಬಳಕೆ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು. 15 ದಿನಗಳ ನಂತರ ಮತ್ತೆ ಫಾಲೋ ಅಪ್ ಕಾರ್ಯಾಚರಣೆ ನಡೆಯಲಿದ್ದು, ಆಗಲೂ ಲೋಪಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಪರವಾನಿಗೆಯನ್ನು ರದ್ದುಪಡಿಸಲಾಗುವುದು” ಎಂದು ಖಡಾಖಂಡಿತವಾಗಿ ತಿಳಿಸಿದ್ದಾರೆ.







