ಉಡುಪಿಯ 1 ವರ್ಷದ ಮಗು ಸೂಪರ್ ಟ್ಯಾಲೆಂಟೆಡ್!
– ಕಮಲಶಿಲೆ ಸುಧಾಕರ್, ಸುಚೇತ ದಂಪತಿ ಪುತ್ರಿ ರಿತನ್ಯಾ
– ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಎಂಬ ಪ್ರತಿಷ್ಠಿತ ಬಿರುದು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಕನ್ನಡದ ಪ್ರಸಿದ್ಧ ಗಾದೆಯೊಂದಿದೆ. ಇದನ್ನು ಸಾಮಾನ್ಯವಾಗಿ ಮಕ್ಕಳ ಮತ್ತು ದೈಹಿಕವಾಗಿ ಸಾಮಾನ್ಯರಂತೆ ಇಲ್ಲದೆ ತಮ್ಮ ಮಾನಸಿಕ ಸ್ಥೈರ್ಯದಿಂದ ಗೆದ್ದವರ ವಿಚಾರದಲ್ಲಿ ಈ ಮಾತನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದೀಗ ಈ ಗಾದೆಯನ್ನು ಅರ್ಥಪೂರ್ಣಗೊಳಿಸಿರುವ ಸಾಲಿಗೆ ರಿತನ್ಯಾ ಸೇರ್ಪಡೆಗೊಂಡಿದ್ದಾಳೆ.
ಕಮಲಶಿಲೆ ಎಂಬ ಪುಟ್ಟ ಗ್ರಾಮದ ಸುಧಾಕರ್ ಮತ್ತು ಸುಚೇತ ಅವರ ಮಗಳೇ ರಿತನ್ಯಾ. ವಯಸ್ಸು ಕೇವಲ ಒಂದು ವರ್ಷ ನಾಲ್ಕು ತಿಂಗಳು. ತನ್ನ ವಯಸ್ಸಿಗೂ ಮೀರಿದ ಭೌದ್ಧಿಕ ಸಾಮರ್ಥ್ಯ ಮತ್ತು ಮನೆಯಲ್ಲಿ ಬಳಸುವ ಎಲ್ಲಾ ವಸ್ತುಗಳ ಕುರಿತು ಅರಿವನ್ನು ಮೂಡಿಸಿಕೊಂಡು, ಅವುಗಳನ್ನು ಹೇಳುವ ಮುಖಾಂತರ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ. ಅಂದರೆ 21 ಜಾತಿಯ ಪಕ್ಷಿಗಳು, 28 ಪ್ರಾಣಿಗಳು, 15 ಮಾನವನ ದೇಹದ ಭಾಗಗಳು, 20 ಹಣ್ಣುಗಳು, 10 ಜಲಚರಗಳು, 6 ಕೀಟಗಳು, 23 ತರಕಾರಿಗಳು ಮತ್ತು 65ಕ್ಕೂ ಹೆಚ್ಚು ಗೃಹೋಪಯೋಗಿ ವಸ್ತುಗಳನ್ನು ಗುರುತಿಸುವಷ್ಟು ಚತುರೆಯಾಗಿದ್ದಾಳೆ.
ಈ ಹಿನ್ನೆಲೆಯಲ್ಲಿ ಅಂತರ್ ರಾಷ್ಟ್ರೀಯ ದಾಖಲೆಗಳ ಪುಸ್ತಕವು ರಿತನ್ಯಾಳಿಗೆ ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಎಂಬ ಪ್ರತಿಷ್ಠಿತ ಬಿರುದನ್ನು ನೀಡಿದ್ದಲ್ಲದೆ, ‘ಒಂದು ಮಿಲಿಯನ್ ನಲ್ಲಿ ಒಂದು’ ಎನ್ನುವ ಹೆಸರಿನ ಪ್ರಶಸ್ತಿಯನ್ನು ನೀಡಿ, ದಾಖಲೆ ಪುಸ್ತಕದಲ್ಲಿ ಈಕೆಯ ಹೆಸರನ್ನು ನಮೂದಿಸಿದೆ.








