ಕಡೂರು: ಸಾಲದ ಬಾದೆಗೆ ಸಿಲುಕಿ ಮನನೊಂದು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಟ್ರ್ಯಾಕ್ಟರ್ ಖರೀದಿಗಾಗಿ ಕಡೂರಿನ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ 4.01ಲಕ್ಷ ರೂಪಾಯಿಗಳಷ್ಟು ಸಾಲವನ್ನು ಮಾಡಿದ್ದು, ಎರಡು ಕಂತುಗಳನ್ನು ಮಾತ್ರ ಪಾವತಿಸಿದ್ದರು ಎನ್ನಲಾಗಿದೆ. ಆದರೆ ಈ ಬಾರಿ ಕಾಲಕ್ಕೆ ತಕ್ಕಂತೆ ಸಮರ್ಪಕವಾಗಿ ಮಳೆಬಾರದ ಹಿನ್ನೆಲೆಯಲ್ಲಿ, ಬೆಳೆ ಕೂಡ ಸರಿಯಾಗಿ ದೊರೆಯದಿದ್ದರೆ ಸಾಲವನ್ನು ಹೇಗೆ ತೀರಿಸುವುದು ಎನ್ನುವ ಚಿಂತೆಗೆ ಒಳಗಾಗಿದ್ದರು. ರೈತ ಪ್ರತಿದಿನ ರಾತ್ರಿ ತೋಟದ ಮನೆಗೆ ತೆರಳಿ, ಅಲ್ಲಿಯೇ ಮಲಗಿಕೊಂಡು ಮರುದಿನ ಬೆಳಿಗ್ಗೆ ಹಾಲು ತೆಗೆದುಕೊಂಡು ಮನೆಗೆ ಬರುತ್ತಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಆದರೆ ಮಾನಸಿಕವಾಗಿ ನೊಂದಿದ್ದ ಅವರು ಎಂದಿನಂತೆ ತೋಟದ ಮನೆಯಿಂದ ಬೆಳಗಿನಜಾವ ಹಿಂತಿರುಗದೇ ಇರುವುದರಿಂದ ಮನೆಯವರು ಮತ್ತು ಅವರ ಸಂಬಂಧಿಕರು ತೋಟದ ಕಡೆಗೆ ತೆರಳಿ ಹುಡುಕಾಟ ನಡೆಸಿದಾಗ, ರೈತ ನರಳಡುತ್ತಾ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಕಡೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗದೆ ಅವರು ಸಾವನ್ನಪ್ಪಿದ್ದಾರೆ.
•ಮೂಡಿಗೆರೆ: ಭಾರಿ ಮಳೆಗೆ ಹಾರಿ ಹೋದ ಶಾಲೆಯ ಹೆಂಚುಗಳು
ಮೂಡಿಗೆರೆ: ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಹಲವಾರು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಪ್ರಮಾಣದ ಮಳೆಯಾಗಿದ್ದು, ಮೂಡಿಗೆರೆ ತಾಲ್ಲೂಕಿನ ಜಾಣಿಗೆ ಗ್ರಾಮದಲ್ಲಿ ಇದರ ಪರಿಣಾಮವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರಾರು ಹೆಂಚುಗಳು ಹಾರಿ ಹೋಗಿರುವ ಘಟನೆ ನಡೆದಿದೆ. ಅಲ್ಲದೆ ಕೊಟ್ಟಿಗೆಹಾರ ಮತ್ತು ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಕೂಡ ಬಿರುಗಾಳಿಯೊಂದಿಗೆ ಮಳೆ ಸಂಭವಿಸುತ್ತಿರುವುದರಿಂದ ಜನ ಜೀವನದ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಬೀರುತ್ತಿದೆ ಎನ್ನಲಾಗಿದೆ.
ಬಸ್ಸಲ್ಲಿ ಕೈತಪ್ಪಿ ಹೋಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಪತ್ತೆ!
ಶಿವಮೊಗ್ಗ: ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳನ್ನು ಒಳಗೊಂಡ ಬ್ಯಾಗ್ ಅನ್ನು ಪೊಲೀಸರು ಪತ್ತೆ ಹಚ್ಚಿ, ಹಿಂತಿರುಗಿಸಿದ ಘಟನೆ ನಡೆದಿದೆ. ಶಿವಮೊಗ್ಗದಿಂದ ತರೀಕೆರೆಗೆ ಖಾಸಗಿ ಬಸ್ ಒಂದರಲ್ಲಿ ಪ್ರಯಾಣಿಸುತ್ತಿದ್ದ ಅಲಸೂರು ಗೇಟ್ ಮೂಲದ ಮಹಿಳೆಯೊಬ್ಬರು, ಇಳಿಯುವಾಗ ತಮ್ಮ ಬ್ಯಾಗ್ ಅನ್ನು ಬಸ್ ನಲ್ಲಿಯೇ ಮರೆತಿದ್ದಾರೆ. ಆ ಬ್ಯಾಗ್ ನಲ್ಲಿ ಸುಮಾರು 2ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ಚಿನ್ನಾಭರಣ, 60.000 ರೂಪಾಯಿ ನಗದು ಹಣ ಹಾಗೂ ಒಂದು ಮೊಬೈಲ್ ಇತ್ತು ಎನ್ನುವ ಮಾಹಿತಿ ಲಭಿಸಿದೆ. ತಮ್ಮ ಸ್ಥಳ ಬಂದೊಡನೆ ಬಸ್ ನಿಂದ ಕೆಳಗೆ ಇಳಿದ ಮಹಿಳೆಗೆ ಕೆಲವೇ ನಿಮಿಷಗಳಲ್ಲಿ ತಾನು ಬ್ಯಾಗ್ ಅನ್ನು ಬಸ್ ನಲ್ಲಿಯೇ ಬಿಟ್ಟು ಬಂದಿದ್ದೇನೆ ಎನ್ನುವ ಅರಿವಾಗಿದೆ. ತಕ್ಷಣ ಅವರು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಿ, ಪೊಲೀಸರ ನೆರವು ಕೋರಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ತಮ್ಮ ಸಿಬ್ಬಂದಿಯಾದ ಮಂಜಪ್ಪ ಚಂದ್ರ ನಾಯ್ಕ ಅವರ ಮೂಲಕ ಖಾಸಗಿ ಬಸ್ ಅನ್ನು ಪತ್ತೆ ಹಚ್ಚಿಸಿ, ಅದರಲ್ಲಿದ್ದ ಬ್ಯಾಗ್ ಅನ್ನು ಸುರಕ್ಷಿತವಾಗಿ ತಮ್ಮ ವಶಕ್ಕೆ ತೆಗೆದುಕೊಂಡು, ಮಹಿಳೆಗೆ ಒಪ್ಪಿಸಿದ್ದಾರೆ.
•ಶಿವಮೊಗ್ಗ: ಈಜಲು ತೆರಳಿದ್ದ ಯುವಕ ಶವವಾಗಿ ಪತ್ತೆ
ಶಿವಮೊಗ್ಗ: ಈಜಲು ತೆರಳಿದ್ದ ಯುವಕನೊಬ್ಬ ಶವವಾಗಿ ತುಂಗಾ ನದಿಯಲ್ಲಿ ಪತ್ತೆಯಾಗಿರುವ ಘಟನೆ, ಬುಧವಾರದಂದು ಪುಟ್ಟಪ್ಪನ ಕ್ಯಾಂಪ್ ನಡೆದಿದೆ. ತುಂಗಾ ನದಿಯ ತೀರದಲ್ಲಿರುವ ಪುಟ್ಟಪ್ಪನ ಕ್ಯಾಂಪ್ ಬಳಿ ಯುವಕರ ತಂಡವೊಂದು ಪಾರ್ಟಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಈ ಸನ್ನಿವೇಶ ಎದುರಾಗಿದೆ. ಪಾರ್ಟಿ ಮುಗಿಸಿದ ಬಳಿಕ ಸಮೀಪದಲ್ಲೇ ಇದ್ದ ತುಂಗಾ ನದಿಗೆ ಫೈಜಾನ್ ಮತ್ತು ಯಾಸಿನ್ ಅರಾಫತ್ ಎನ್ನುವ ಇಬ್ಬರು ಯುವಕರು ಈಜಲು ತೆರಳಿದ್ದಾರೆ. ಆಗ ಯಾಸಿನ್ ಅರಾಫತ್ ಸುರಕ್ಷಿತವಾಗಿ ಈಜಿ ದಡಕ್ಕೆ ಸೇರಿದರೆ, ಫೈಜಾನ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ರಕ್ಷಣಾ ತಂಡದ ಸಿಬ್ಬಂದಿಗಳು ನದಿಯಲ್ಲಿ ಶೋಧನಾ ಕಾರ್ಯವನ್ನು ಕೈಗೊಂಡರು. ಸತತ 8, ಗಂಟೆಗಳ ಕಾಲ ಕಾರ್ಯಾಚರಣೆಯನ್ನು ನಡೆಸಿದರೂ ಫೈಜಾನ್ ಕುರಿತು ಯಾವುದೇ ಸುಳಿವು ಲಭಿಸಿಲ್ಲ. ಬಳಿಕ ಕತ್ತಲಾವರಿಸಿದ ಹಿನ್ನೆಲೆಯಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು ಎನ್ನುವ ಮಾಹಿತಿ ಲಭಿಸಿದೆ. ಗುರುವಾರದಂದು ಬೆಳಿಗ್ಗೆ ಶೋಧನಾ ಕಾರ್ಯವನ್ನು ಮುಂದುವರಿಸಿದಾಗ ಫೈಜಾನ್ ಅವರ ಮೃತದೇಹ ಪತ್ತೆಯಾಗಿದೆ.







