ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಗಾಂಧಿಚೌಕದಲ್ಲಿ ಮತ್ತೆ ಮರು ಸ್ಥಾಪನೆಯಾಗಿದೆ. ಪಟ್ಟಣ ಪಂಚಾಯತ್ ಅಧ್ಯಕ್ಷ ರತ್ನಾಕರ್ ಶೆಟ್ಟಿ ನೇತೃತ್ವದಲ್ಲಿ ಕಪ್ಪುಶಿಲೆಯಲ್ಲಿ ಕೆತ್ತಲಾದ ಅಶೋಕ ಸ್ತಂಭವನ್ನು ಸೋಮವಾರ ಸಂಜೆ ಗಣ್ಯರ ಸಮ್ಮುಖದಲ್ಲಿ ಸ್ಥಾಪಿಸಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ತೀರ್ಥಹಳ್ಳಿಗೆ ಭೇಟಿ ನೀಡಿ, 100 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಸದಸ್ಯರು, ಅಧಿಕಾರಿಗಳು ಈ ಮಹತ್ವದ ಕೆಲಸ ಮಾಡಿದ್ದಾರೆ.
ಅಶೋಕ ಸ್ತಂಭವನ್ನು ಅನಾವರಣಗೊಳಿಸಿ ಮಾತನಾಡಿದ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರು “ಹಿಂದೆ ಹಿರಿಯರು ನಮಗೆ ಜಾತ್ರೆಯಾಗಲಿ ಅಥವಾ ಇತರೆ ಯಾವುದೇ ಸಮಯದಲ್ಲಿ ಕಳೆದು ಹೋದರೂ ಸಹ ಗಾಂಧಿಚೌಕದಲ್ಲೇ ಇರು ಎಂದು ಹೇಳುತ್ತಿದ್ದರು.. ಇದೊಂದು ವಿಶೇಷ ಜಾಗ. ಮತ್ತೊಮ್ಮೆ ನಿರ್ಮಾಣಗೊಂಡಿದೆ. ಅಷ್ಟೇ ಅಲ್ಲದೆ ಇದಕ್ಕೆ ರಾಷ್ಟ್ರೀಯ ಲಾಂಛನ ಇರುವುದು ಮತ್ತಷ್ಟು ಮೆರಗನ್ನು ನೀಡುತ್ತಿದೆ. ಸ್ಮಾರಕ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ ಗೌಡ “ಗಾಂಧಿಚೌಕದಲ್ಲಿ ಅಶೋಕ ಸ್ತಂಭವನ್ನು ಮತ್ತೊಮ್ಮೆ ನಿರ್ಮಾಣ ಮಾಡಿರುವುದು ಒಳ್ಳೆಯ ವಿಚಾರ. ಪಟ್ಟಣ ಪಂಚಾಯಿತಿ ಅವಧಿ ಇನ್ನೇನು 15 ದಿನಗಳಲ್ಲೇ ಮುಗಿಯಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿಯವರು ಇಲ್ಲಿಗೆ ಬಂದು ಹೋರಾಟ ಮಾಡಿದ್ದರು. ಅದರ ಸವಿನೆನಪಿಗಾಗಿ ಈ ಅಶೋಕ ಸ್ತಂಭವನ್ನು ನಿರ್ಮಾಣಗೊಳಿಸಲಾಗಿದೆ. ಇದೊಂದು ಹೋರಾಟದ ಜಾಗ ಆಗಲಿದೆ ಎಂದರು. ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಮುಖ್ಯ ಅಧಿಕಾರಿಗಳಾದ ನಾಗರಾಜ್, ಪಟ್ಟಣ ಪಂಚಾಯತ್ ಎಲ್ಲಾ ಸದಸ್ಯರು ಹಾಜರಿದ್ದರು.
ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣಕ್ಕೆ ಬಸ್ ಪ್ರವೇಶ ಇಲ್ಲ
ತೀರ್ಥಹಳ್ಳಿಯಿಂದ ಶಿವಮೊಗ್ಗ ಹೆದ್ದಾರಿ ನಿರ್ಮಾಣ ಕಾರಣ ಮುಖ್ಯ ಬಸ್ ನಿಲ್ದಾಣಕ್ಕೆ ಈಗ ಬಸ್ ಬರುವುದನ್ನು ನಿಷೇಧ ಮಾಡಲಾಗಿದೆ. ರಸ್ತೆಯಲ್ಲಿ ಬಸ್ ನಿಲ್ಲಿಸಲಾಗುತ್ತಿದ್ದು ಭಾರೀ ಕಿರಿಕಿರಿ ಉಂಟಾಗಿದೆ.
ತೀರ್ಥಹಳ್ಳಿ ಅರಣ್ಯ ಇಲಾಖೆ ಜಾಗದಲ್ಲಿ ಬಸ್ ನಿಲ್ದಾಣ ಮಾಡುವ ಚರ್ಚೆ ಜೋರಾಗಿದೆ.







