•ಬೆಳ್ತಂಗಡಿ: ಸಮುದ್ರದಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವು
ಬೆಳ್ತಂಗಡಿ: ಸಮುದ್ರದಲ್ಲಿ ಈಜಲು ತೆರಳಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ, ಭಾನುವಾರದಂದು ಪಣಂಬೂರು ಸಮುದ್ರ ತೀರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಬೆಳ್ತಂಗಡಿ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ, ರೆಂಕೆದಗುತ್ತು ನಿವಾಸಿ ಶ್ರೇಯಸ್ ಎಂದು ಗುರುತಿಸಲಾಗಿದೆ.
•ಉಡುಪಿ: ಅಂಗಡಿ ಮಾಲೀಕನ ಚಿನ್ನದ ಸರ ಸುಲಿಗೆ
ಉಡುಪಿ: ಅಂಗಡಿಗೆ ಗ್ರಾಹಕರಂತೆ ಆಗಮಿಸಿದ ಅಪರಿಚಿತ ವ್ಯಕ್ತಿಗಳು, ಅದರ ಮಾಲೀಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಲಪಟಾಯಿಸಿರುವ ಘಟನೆ, ಭಾನುವಾರದಂದು ಮಲ್ಪೆಯ ಕಡುವಿನ ಬಾಗಿಲ ವಿಠೋಭ ರುಖುಮಾಯಿ ಭಜನಾ ಮಂದಿರದ ಹತ್ತಿರದಲ್ಲಿ ನಡೆದಿದೆ. ವಿಠಲ ಸುವರ್ಣ ಎನ್ನುವವರ ಅಂಗಡಿಗೆ ಬೈಕ್ ನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಆಗಮಿಸಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಬೈಕ್ ನಿಂದ ಇಳಿದು ವಿಠಲ ಸುವರ್ಣ ಅವರ ಅಂಗಡಿಯನ್ನು ಪ್ರವೇಶಿಸಿ, ವಿಮಲ್ ನೀಡುವಂತೆ ಕೇಳಿದ್ದಾನೆ. ಬಳಿಕ ವಿಠಲ ಸುವರ್ಣ ಅವರ ಕತ್ತನ್ನು ಒತ್ತಿ ಹಿಡಿದು, ಕುತ್ತಿಗೆಯಲ್ಲಿದ್ದ ಒಂದೂವರೆ ಪವನ್ ಚಿನ್ನದ ಸರವನ್ನು ಎಳೆದುಕೊಂಡು ಹೋಗಿ ಬೈಕ್ ನಲ್ಲಿ ಕುಳಿತಿದ್ದು ಕೂಡಲೇ ಮತ್ತೊಬ್ಬ ವ್ಯಕ್ತಿ ಬೈಕ್ ಅನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಕಾರ್ಕಳ: 9ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಕಾರ್ಕಳ: ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ಕು ಪ್ರಕರಣಗಳ ವಾರೆಂಟ್ ಆರೋಪಿಯಾಗಿದ್ದ ಶಿವಮೊಗ್ಗ ವೆಂಕಟೇಶ್ ಎನ್ನುವ ವ್ಯಕ್ತಿಯು 20೦9ರಲ್ಲಿ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದನು ಎನ್ನಲಾಗಿದೆ. ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವೆಂಕಟೇಶ್ ನನ್ನು 2017ರಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಎನ್ನುವ ಮಾಹಿತಿ ಲಭಿಸಿದೆ. ಅಲ್ಲಿಂದ ಮತ್ತೆ ಜಾಮೀನಿನ ಮೂಲಕ ಬಿಡುಗಡೆ ಹೊಂದಿದ ವೆಂಕಟೇಶ್ ಪುನಃ 9 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರಿಸಿಕೊಂಡಿದ್ದನು ಎನ್ನುವ ಸಂಗತಿ ತಿಳಿದುಬಂದಿದೆ. ಇದೀಗ ಅಕ್ಟೋಬರ್ 3ರ ಶನಿವಾರದಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿದ್ದ ವೆಂಕಟೇಶ್ ನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿ, ಅಕ್ಟೋಬರ್ 4ರ ಭಾನುವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯವು ಆತನಿಗೆ ಅಕ್ಟೋಬರ್ 17ರ ವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸುವಂತೆ ಆದೇಶವನ್ನು ಹೊರಡಿಸಿದೆ.
•ಮುಲ್ಕಿ: ಹಾಡಹಗಲಲ್ಲೇ ಚಿನ್ನಾಭರಣ, ನಗದು ಕಳುವು
ಮುಲ್ಕಿ: ಹಾಡಹಗಲೇ ಚಿನ್ನಾಭರಣ ಮತ್ತು ನಗದು ಕಳುವಾಗಿರುವ ಘಟನೆ, ಕಿಲ್ಪಾಡಿ ಗ್ರಾಮದ ತಿರುಮಲ ಗುತ್ತು ಬಳಿಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಶಕೀಲಾ ಪೂಜಾರಿ ಅವರು ತಮ್ಮ ಪತಿ ಮತ್ತು ಅವರ ಮೇಲಿನ ಮನೆಯಲ್ಲಿ ಬಾಡಿಗೆಗಿದ್ದ ಯುವತಿಯೊಂದಿಗೆ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಈ ಸನ್ನಿವೇಶ ಎದುರಾಗಿದೆ. ಶಕೀಲಾ ಅವರ ಮನೆಗಿದ್ದ ಭಾರವಾದ ಕಬ್ಬಿಣದ ಬಾಗಿಲನ್ನು ಕಳ್ಳರು ಭಾರವಾದ ಸಾಧನದಿಂದ ತುಂಡು ಮಾಡಿ, ಒಳಗೆ ತೆರಳಿದ್ದಾರೆ ಎನ್ನಲಾಗಿದೆ. ಬಳಿಕ ಮನೆಯನ್ನು ಜಾಲಾಡಿದ ಖದೀಮರು ಬಟ್ಟೆಯೊಳಗೆ ಅಡಗಿಸಿಟ್ಟ ಬೀರುವಿನ ಬೀಗದ ಕೈಯನ್ನು ತೆಗೆದುಕೊಂಡು, ಅದನ್ನು ಬಳಸಿ ಬೀರುವಿನ ಬಾಗಿಲು ತೆರೆದು, 321ಗ್ರಾಂ ತೂಕದ ಸುಮಾರು 40.56.000 ರೂಪಾಯಿ ಮೌಲ್ಯದ ಚಿನ್ನಾಭರಣ, 10.000 ರೂಪಾಯಿ ನಗದು ಹಣ ಮತ್ತು 2000 ರೂಪಾಯಿ ನಾಣ್ಯಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳ ಜೊತೆಗೆ ಶಕೀಲಾ ಅವರ ಮಗಳ ಬಟ್ಟೆಗಳನ್ನು ಸಹ ಕಳ್ಳತನ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕಳ್ಳರು ಪರಾರಿಯಾಗುವ ಸಂದರ್ಭದಲ್ಲಿ ಒಂದು ಕರಿಮಣಿ ಸರವನ್ನು ಮನೆಯಲ್ಲಿಯೇ ಬೀಳಿಸಿಕೊಂಡು ಹೋಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಗ್ರಾಮೀಣ ಭಾಗದಲ್ಲಿ ಹಾಡಹಗಲೇ ಈ ರೀತಿ ಕಳ್ಳತನ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶ್ವಾನದಳ, ಬೆರಳಚ್ಚು ತಜ್ಞರು, ಮೂಲ್ಕಿ ಠಾಣೆಯ ಇನ್ಸ್ಪೆಕ್ಟರ್ ಶ್ರೀಕಾಂತ್, ಸಾಮಾಜಿಕ ಕಾರ್ಯಕರ್ತರಾದ ಭೀಮಶಂಕರ್, ಕಾರ್ನಾಡ್ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಕಿರಣ್ ಶಿಮಂತೂರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಶಕೀಲಾ ಅವರು ಹಿಂದಿನ ದಿನ ರಾತ್ರಿ ಅನುಮಾನಾಸ್ಪದವಾಗಿ ವ್ಯಕ್ತಿಗಳು ಮನೆಯ ಸುತ್ತಮುತ್ತ ಓಡಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಅಕ್ಕಪಕ್ಕದಲ್ಲಿ ಯಾವುದೇ ಮನೆಗಳಿಲ್ಲದಿರುವುದು ಮತ್ತು ದಾರಿದೀಪದ ಅವ್ಯವಸ್ಥೆಯಿಂದಾಗಿ ಈ ರೀತಿಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.







