ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಅಕ್ಟೋಬರ್ 30ರ ಶುಕ್ರವಾರದಿಂದ ನವೆಂಬರ್ 2ರ ಸೋಮವಾರದವರೆಗೆ ಕೃಷಿ ಮತ್ತು ತೋಟಗಾರಿಕೆ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಸೋಮವಾರದಂದು ಶಿವಮೊಗ್ಗದ ನವುಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಂ.ವಿ.ಧನಂಜಯ ಅವರು “ಬರ ನಿರ್ವಹಣೆಗಾಗಿ ನಾವಿನ್ಯತಾ ಕೃಷಿ ಎನ್ನುವ ಧ್ಯೇಯವಾಕ್ಯದಡಿಯಲ್ಲಿ ಕೃಷಿ, ತೋಟಗಾರಿಕೆ ಮೇಳವನ್ನು ಆಯೋಜಿಸಲಾಗಿದೆ.
ಪದ್ಮಶ್ರೀ ಪುರಸ್ಕೃತರಾದ ಪ್ರಗತಿಪರ ರೈತ ಸತ್ಯನಾರಾಯಣ ಬೆಳೇರಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ, ಎಸ್. ಮಧು ಬಂಗಾರಪ್ಪ, ಎಸ್. ಎಸ್.ಮಲ್ಲಿಕಾರ್ಜುನ ಸೇರಿದಂತೆ ಆರು ಜಿಲ್ಲೆಗಳ ಜನಪ್ರತಿನಿಧಿಗಳು, ನಿಗಮ ಮಂಡಳಿಯ ಅಧ್ಯಕ್ಷರು ಭಾಗವಹಿಸಲಿದ್ದಾರೆ.
600ಕ್ಕೂ ಹೆಚ್ಚು ಮಳಿಗೆ: ಉಪಕರಣಗಳ ಪ್ರದರ್ಶನ
ಹವಾಮಾನ ವೈಪರೀತ್ಯ ಮತ್ತು ಬರಗಾಲದ ಸವಾಲುಗಳನ್ನು ಎದುರಿಸಲು ರೈತರಿಗೆ ಮಾರ್ಗದರ್ಶನವನ್ನು ನೀಡುವ ಉದ್ದೇಶದಿಂದಾಗಿ ಈ ಮೇಳವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಕೃಷಿ ಪರಿಕರಗಳು, ಬೀಜ, ರಸಗೊಬ್ಬರಗಳು, ಯಂತ್ರೋಪಕರಣಗಳು, ಸಸಿ ಮತ್ತು ಗಿಡಗಳು, ಪ್ರಾತ್ಯಕ್ಷಿಕೆಗಳಿಗಾಗಿ 600ಕ್ಕೂ ಹೆಚ್ಚಿನ ಮಳಿಗೆಗಳೊಂದಿಗೆ, 60 ಆಹಾರ ಮಳಿಗೆ, 15 ನರ್ಸರಿ, ವಿವಿಧ ಇಲಾಖೆಗಳ 80 ಬೀಜ ಮತ್ತು ಸಸಿಗಳು, 5೦ಕ್ಕೂ ಹೆಚ್ಚಿನ ವಿವಿಧ ಉಪಕರಣಗಳ ಮಳಿಗೆಗಳು ಕೂಡ ಇರಲಿವೆ.
ಹೊಸ ತಂತ್ರಜ್ಞಾನ ಅಭಿವೃದ್ಧಿ
ವಿಶ್ವವಿದ್ಯಾನಿಲಯವು ಆವಿಷ್ಕರಿಸಿದ ಬಹುಪಯೋಗಿ ಕೃಷಿ ಉಪಕರಣ ಮತ್ತು ಸೋಲಾರ್ ಮಲ್ಟಿಗ್ರೇನ್ ಕ್ಲೀನರ್ ಗೆ ಸಹಾಯಧನ ಲಭಿಸಲಿದ್ದು, ‘ಸಹ್ಯಾದ್ರಿ ಸಿಂದೂರ’ ಕೆಂಪು ಭತ್ತ ಮತ್ತು ‘ಸಹ್ಯಾದ್ರಿ ಪ್ರಗತಿ’ ಕಡಲೆ ತಳಿಗಳಿಗೆ ಕೇಂದ್ರದಿಂದ ಅನುಮೋದನೆ ದೊರೆತಿದ್ದು, ಇದೇ ಕಾರ್ಯಕ್ರಮದಲ್ಲಿ ಆಕ್ರೋಮೇಟ್ ಎಐ ವಾಟ್ಸಾಪ್ ಬಾಟ್, ಸಹ್ಯಾದ್ರಿ ಎಐ ಸಮಾಲೋಚನಾ ತಂತ್ರಾಂಶ, ಹೊಸ ಭತ್ತದ ತಳಿ ‘ಸಹ್ಯಾದ್ರಿ ಅನ್ನಪೂರ್ಣ’ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿವೆ. ಜೊತೆಗೆ ಏಳು ಸಂಸ್ಥೆಗಳೊಂದಿಗೆ ಕೃಷಿಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಡಾ.ಶ್ರೀಧರ್, ಡಾ.ವೀರಣ್ಣ, ಡಾ.ಮಾವರ್ಕರ್, ಡಾ.ಎಸ್.ಯು. ಪಾಟೀಲ್, ಡಾ. ಅವಿನಾಶ್, ಪ್ರಿಯಾಂಕ ಮತ್ತು ಡಾ.ರಾಘವೇಂದ್ರ ಮೇಸ್ತ ಉಪಸ್ಥಿತರಿದ್ದರು.







