ಬೆಳ್ತಂಗಡಿ: ಯುವತಿಗೆ ಹಣದ ಆಮೀಷವೊಡ್ಡಿ, ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಯುವತಿಯು ವೇಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದೆರಡು ದಿನಗಳ ಹಿಂದೆ ಯುವತಿಯು ಕೆಲಸ ಮಾಡುವ ಸ್ಥಳಕ್ಕೆ ದ್ವಿಚಕ್ರವಾಹನದಲ್ಲಿ ಆಗಮಿಸಿದ ವ್ಯಕ್ತಿಯು, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ, ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವತಿಯು ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯನ್ನು ವೇಣೂರು ನಿವಾಸಿ ಇಸಾಕ್ ಎಂದು ಗುರುತಿಸಲಾಗಿದೆ. ಯುವತಿಯು ನೀಡಿದ ದೂರಿನ ಆಧಾರದ ಮೇಲೆ ಇಸಾಕ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 75(1) ರೋಮನ್ ಸಂಖ್ಯೆ ಎರಡು, 75(1) ರೋಮನ್ ಸಂಖ್ಯೆ ನಾಲ್ಕು, 79 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015ರ ಸಂಬಂಧಿತ ಕಲಂಗಳ ಅಡಿಯಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಪುತ್ತೂರು: ವಿಷಪದಾರ್ಥ ಸೇವಿಸಿ ನವ ವಿವಾಹಿತೆ ಸಾವು
ಪುತ್ತೂರು: ನವ ವಿವಾಹಿತೆಯೊಬ್ಬರು ವಿಷಪದಾರ್ಥ ಸೇವಿಸಿ, ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ, ಭಾನುವಾರದಂದು ನಡೆದಿದೆ. ಮೃತ ಮಹಿಳೆಯನ್ನು ವೀರಮಂಗಲದ ನಿವಾಸಿ 32 ವರ್ಷದ ಮಮತಾ ಎಂದು ಗುರುತಿಸಲಾಗಿದೆ. ಶನಿವಾರದಂದು ಮಮತಾ ಅವರು ವಿಷಪದಾರ್ಥವನ್ನು ಸೇವಿಸಿ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಮಮತಾ ಅವರು ಭಾನುವಾರದಂದು ಮೃತಪಟ್ಟರು ಎನ್ನುವ ಮಾಹಿತಿ ಲಭಿಸಿದೆ. ಮಮತಾ ಅವರು ಅಸ್ವಸ್ಥಗೊಂಡ ಸಂದರ್ಭದಲ್ಲಿ ತಾನು ಈ ನಿರ್ಧಾರವನ್ನು ಕೈಗೊಳ್ಳಲು ಕಾರಣವೇನು ಎನ್ನುವುದನ್ನು ತಿಳಿಸಿ, ಇಬ್ಬರ ವಿರುದ್ಧ ದೂರು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಉಳ್ಳಾಲ: ಅಮಾನವೀಯ ರ಼್ಯಾಗಿಂಗ್; ಪ್ರಕರಣ ದಾಖಲು
ಉಳ್ಳಾಲ: ವೈದ್ಯಕೀಯ ಕಾಲೇಜಿನ ಕ್ಯಾಂಪಸ್ ಆವರಣದಲ್ಲಿ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಸೀನಿಯರ್ ವಿದ್ಯಾರ್ಥಿಗಳು ರ಼್ಯಾಗಿಂಗ್ ನಡೆಸಿದ ಘಟನೆ, ದೇರಳಕಟ್ಟೆಯಲ್ಲಿರುವ ಕಣಚೂರಿನಲ್ಲಿ ನಡೆದಿದೆ. ಜೂನಿಯರ್ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಕೂಡಿಹಾಕಿ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುವ ಕುರಿತು ಮಾಹಿತಿ ಲಭಿಸಿದೆ. ಕೇರಳದ ಕೊಟ್ಟಾರಕ್ಕರ್ ಮೂಲದ ಅಕ್ಷಯ್ ವಿ ಎಸ್ ಮತ್ತು ಅವರ ಸ್ನೇಹಿತರಾದ ಝಾಹಿದ್, ಶಹಜಾದ್, ಹುಸೈರ್, ರೋವನ್, ಅಲ್ಫಾಝ್, ಅಧೀರ್ ಎನ್ನುವವರು ಕಣಚೂರು ಕಾಲೇಜಿನಲ್ಲಿ ಬಿಎಸ್ ಸಿ ನ್ಯೂರೋ ಸೈನ್ಸ್ ಟೆಕ್ನಾಲಜಿ ಕೋರ್ಸ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿದ್ದು, ಅದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳಾದ ಆಶಬ್ ಹಾಗೂ ಅಸ್ಫಕ್ ಎನ್ನುವವರು ಹಂತಹಂತವಾಗಿ ರ಼್ಯಾಗಿಂಗ್ ಮಾಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರ಼್ಯಾಗಿಂಗ್ ಮತ್ತು ಕೊಲೆ ಬೆದರಿಕೆಯಿಂದ ತೀವ್ರವಾಗಿ ಭಯಭೀತರಾಗಿದ್ದ ವಿದ್ಯಾರ್ಥಿಗಳು ಇದೀಗ ಧೈರ್ಯತಾಳಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ.
•ಕಾಪು: ಕಾರು ಮತ್ತು ಬೈಕ್ ನ ನಡುವೆ ಅಪಘಾತ; ಸಹಸವಾರ ಸಾವು
ಕಾಪು: ಕಾರು ಮತ್ತು ಬೈಕ್ ನ ನಡುವೆ ರಸ್ತೆ ಅಪಘಾತ ಸಂಭವಿಸಿರುವ ಘಟನೆ, ಭಾನುವಾರದಂದು ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಬಳಿಯಲ್ಲಿ ನಡೆದಿದೆ. ಅನಂತಪದ್ಮನಾಭ ಭಟ್ ಎನ್ನುವವರು ತಮ್ಮ ಸ್ನೇಹಿತರಾದ ವಿಜಯಪುರ ಮೂಲದ ಸುನೀಲ್ ಪಾಟೀಲ್ ಎನ್ನುವವರೊಂದಿಗೆ ಬೈಕ್ ನಲ್ಲಿ ಕಟಪಾಡಿ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಸಂದರ್ಭದಲ್ಲಿ, ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಬಂದ ಕಾರೊಂದು ಬೈಕ್ ನ ಹಿಂಬದಿಗೆ ಬಲವಾಗಿ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಬಲಬದಿಯಲ್ಲಿದ್ದ ಡಿವೈಡರ್ ಗೆ ಢಿಕ್ಕಿ ಹೊಡೆದಿದ್ದು, ಸಹಸವಾರರಾದ ಸುನೀಲ್ ಪಾಟೀಲ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಜ್ಞಾಹೀನರಾಗಿ ರಸ್ತೆಯಲ್ಲಿ ಬಿದ್ದಿದ್ದ ಅನಂತಪದ್ಮನಾಭ ಭಟ್ ಅವರನ್ನು ಸ್ಥಳೀಯರು ಉಡುಪಿಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅನಂತಪದ್ಮನಾಭ ಭಟ್ ಅವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







