ಶಿವಮೊಗ್ಗ: ಎನ್ಎಸ್ ಯುಐ ಮಧುಸೂದನ್ ಎಂದೇ ಖ್ಯಾತಿ ಪಡೆದಿರುವಂತಹ ಕಾಂಗ್ರೆಸ್ ನಾಯಕರಾದ ಮಧುಸೂಧನ್ ಸಿ.ಜೆ. ಅವರು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಧಿಕಾರ ಸ್ವೀಕಾರ ಮಾಡಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿರುವ ಮಧುಸೂದನ್, ಎನ್ಎಸ್ ಯುಐ ಮತ್ತು ಯುವ ಕಾಂಗ್ರೆಸ್ ನ ವಿವಿಧ ಹಂತಗಳಲ್ಲಿ ಸುದೀರ್ಘ ಕಾಲ ಸೇವೆಯನ್ನು ಸಲ್ಲಿಸಿದ ಅನುಭವ ಉಳ್ಳವರಾಗಿದ್ದಾರೆ.
ಎಸ್ಎಸ್ಎಲ್ ಸಿ ವ್ಯಾಸಂಗದ ಸಮಯದಲ್ಲಿಯೇ ದೇವೇಂದ್ರಪ್ಪನವರ ಪ್ರಭಾವದಿಂದ ಎನ್ಎಸ್ ಯುಐ ಗೆ ಮಧುಸೂದನ್ ಅವರು ಸೇರ್ಪಡೆಗೊಂಡರು. ಬಳಿಕ ಶಿವಮೊಗ್ಗದಲ್ಲಿ ಹಲವಾರು ವಿದ್ಯಾರ್ಥಿಗಳ ಸಂಘಟನೆಗಳನ್ನು ಪ್ರಬಲಗೊಳಿಸುವ ಮೂಲಕ ಎನ್ಎಸ್ ಯುಐ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಹೀಗೆ ಸಾಮಾನ್ಯ ವಿದ್ಯಾರ್ಥಿಯಾಗಿ ಸಂಘಟನೆಗೆ ಪದಾರ್ಪಣೆ ಮಾಡಿದ ಮಧುಸೂದನ್ ಅವರು ಎನ್ಎಸ್ ಯುಐ ನ ರಾಜ್ಯ ಮಟ್ಟದ ನಾಯಕರಾಗಿ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರು ಹಾಗೂ ರಾಜ್ಯ ಸಂಯೋಜಕರಾಗಿ ನಿರಂತರ ಸೇವೆಯನ್ನು ಸಲ್ಲಿಸಿದರ ಫಲವಾಗಿ ಇಂದು ಸೂಡಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಮತ್ತೊಂದು ಆಡಳಿತಾತ್ಮಕ ಜವಾಬ್ದಾರಿಯತ್ತ ಮುಖ ಮಾಡಿದ್ದಾರೆ.
ಮಧು ಸೂಧನ್ ಅವರಿಗೆ ಪಕ್ಷದ ಪ್ರಮುಖರು, ಯುವ ಮುಖಂಡರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.







