ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಅಕ್ಟೋಬರ್ 2 ಭಾರತೀಯರ ಪಾಲಿಗೆ ಎರಡು ಅತ್ಯಂತ ಮಹತ್ವದ ದಿನವಾಗಿದೆ. ಮೊದಲನೆಯದು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ.
ಮೋಹನದಾಸ ಕರಮಚಂದ ಗಾಂಧಿ ಅವರು 1869ರ ಅಕ್ಟೋಬರ್ 2ರಂದು ಗುಜರಾತ್ ರಾಜ್ಯದ ಪೋರಬಂದರಿನಲ್ಲಿ ಕರಮಚಂದ ಗಾಂಧಿ ಮತ್ತು ಪುತಲೀಬಾಯಿ ಅವರ ಮಗನಾಗಿ ಜನಿಸಿದರು.ವಕೀಲರಾಗಿ ಇಡೀ ದೇಶ ಸುತ್ತಿದರು…!
ವೃತ್ತಿಯಲ್ಲಿ ವಕೀಲರಾಗಿದ್ದು, ತಮ್ಮ ವಿದ್ಯಾಭ್ಯಾಸ ಮತ್ತು ವೃತ್ತಿಗೆ ಸಂಬಂಧಿಸಿದ ತರಬೇತಿಗಳನ್ನು ಮುಗಿಸಿ ತಾಯ್ನಾಡಿಗೆ ಹಿಂತಿರುಗಿದ ಬಳಿಕ, ತನ್ನವರು ಗುಲಾಮಗಿರಿಗೆ ಒಳಗಾಗಿ ಸಂಕಟಪಡುತ್ತಿರುವುದನ್ನು ಕಂಡು, ಎಲ್ಲವನ್ನು ತ್ಯಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಬಿಳಿ ಬಣ್ಣದ ಖಾದಿ ತುಂಡುಡುಗೆ, ಸತ್ಯ ಮತ್ತು ಅಹಿಂಸೆ ಇವರ ಸ್ವಾತಂತ್ರ್ಯ ಹೋರಾಟದ ಅಸ್ತ್ರವಾಯಿತು. ‘ಮಾಡು ಇಲ್ಲವೇ ಮಡಿ’ ಎನ್ನುವಂತಹ ಅದ್ಭುತವಾದ ಆತ್ಮಾಭಿಮಾನದ ಕರೆಯನ್ನು ನೀಡಿ, ಭಾರತೀಯರು ತಮ್ಮ ನೆಲಕ್ಕಾಗಿ ಹೋರಾಡುವಂತೆ ಪ್ರೇರಣೆ ನೀಡಿದರು. ಫಲವಾಗಿ 1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷರಿಂದ ಮುಕ್ತಿ ಪಡೆದುಕೊಂಡು ಸ್ವತಂತ್ರವಾಯಿತು.
ಇಡೀ ವಿಶ್ವಕ್ಕೆ ಮಾದರಿಯಾದಂತವರು ಗಾಂಧಿ!
ಮಹಾತ್ಮ ಗಾಂಧೀಜಿಯವರು ಕೇವಲ ಭಾರತೀಯರಿಗೆ ಅಷ್ಟೇ ಅಲ್ಲದೆ ತಮ್ಮ ಸತ್ಯ, ಶಾಂತಿ ಮತ್ತು ಅಹಿಂಸಾ ತತ್ವದ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾದಂತವರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2 ಅಂದರೆ ಮಹಾತ್ಮ ಗಾಂಧಿಯವರ ಜಯಂತಿಯನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದು ಘೋಷಿಸಿ ಆಚರಿಸಲಾಗುತ್ತಿದೆ. ಅಂದು ಶಾಲಾ ಕಾಲೇಜು ಸೇರಿದಂತೆ ಸರ್ಕಾರಿ ಸಂಸ್ಥೆಗಳಲ್ಲಿ ಶ್ರಮಾದಾನವನ್ನು ಮಾಡುವ ಮೂಲಕ ಮಹಾತ್ಮ ಗಾಂಧೀಜಿಯವರನ್ನು ಸ್ಮರಿಸಲಾಗುತ್ತದೆ.
ಸ್ವಾತಂತ್ರ್ಯಗೊಂಡ ಕೇವಲ ಐದೇ ತಿಂಗಳಿನಲ್ಲಿ ಗುಂಡೇಟಿಗೆ ಬಲಿ
1948ರ ಜನವರಿ 30ರಂದು ಸಬರಮತಿ ಆಶ್ರಮದಲ್ಲಿ ನಾಥೋರಾಮ್ ಗೋಡ್ಸೆ ಗುಂಡೇಟಿಗೆ ಬಲಿಯಾಗಿ ಮಹಾತ್ಮ ಗಾಂಧೀಜಿಯವರು ಪ್ರಾಣವನ್ನು ತ್ಯಜಿಸಿದ್ದು, ಭಾರತವು ಸ್ವಾತಂತ್ರ್ಯಗೊಂಡ ಕೇವಲ ಐದೇ ತಿಂಗಳಿನಲ್ಲಿ ಈ ರೀತಿಯ ದುರಂತ ನಡೆದಿದ್ದು ವಿಪರ್ಯಾಸವೇ ಸರಿ. ಜನವರಿ 30 ಅನ್ನು ಕೂಡ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ. ಮೋಹನದಾಸ ಕರಮಚಂದ ಗಾಂಧಿ ಅವರನ್ನು ರವೀಂದ್ರನಾಥ್ ಟಾಗೋರ್ ಅವರು ಮಹಾತ್ಮ ಗಾಂಧಿ ಎಂದು ಕರೆದರೆ ಸುಭಾಷ್ ಚಂದ್ರ ಬೋಸ್ ಅವರು ರಾಷ್ಟ್ರಪಿತ ಎಂದರು.
ಸರಳ ಪ್ರಾಮಾಣಿಕ ನಾಯಕ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮ ದಿನ
ಭಾರತ ದೇಶದ ಎರಡನೇ ಪ್ರಧಾನಮಂತ್ರಿಯಾಗಿ ತಮ್ಮ ಸರಳ ಜೀವನ ಮತ್ತು ಪ್ರಾಮಾಣಿಕತೆಯಿಂದ ರಾಜಕೀಯ ವ್ಯಕ್ತಿಗಳಿಗೆ ಮಾದರಿಯಾದ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಕೂಡ ಆಗಿದೆ.
ಲಾಲ್ ಬಹುದ್ದೂರ್ ಶಾಸ್ತ್ರಿಯವರು 1904ರ ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮುಘಲ್ಸರಾಯ್ ಎನ್ನುವಲ್ಲಿ ಶಾರದಾ ಪ್ರಸಾದ್ ಶ್ರೀವಾಸ್ತವ್ ಮತ್ತು ರಾಮದುಲಾರಿದೇವಿ ಅವರ ಪುತ್ರರಾಗಿ ಜನಿಸಿದರು.
1921ರಲ್ಲಿ ನಡೆದ ಅಸಹಕಾರ ಚಳುವಳಿಯಲ್ಲಿ ಗಾಂಧೀಜಿಯವರ ಕರೆಗೆ ಓಗೊಟ್ಟು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಪರಿಣಾಮವಾಗಿ 9 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಮತ್ತು ಭಾರತದಲ್ಲಿ ಬರಗಾಲ ಎದುರಾದಂತಹ ಸಂದರ್ಭದಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಸೋಮವಾರದಂದು ರಾತ್ರಿ ಒಂದು ಹೊತ್ತು ಊಟವನ್ನು ಬಿಡುವ ಮೂಲಕ ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸಿದರು. ಜೊತೆಗೆ ಸಾರ್ವಜನಿಕರಿಗೂ ಈ ರೀತಿ ಅನುಸರಿಸುವಂತೆ ಕರೆ ನೀಡಿದರು. ಅಂದರೆ ನಮ್ಮ ಒಂದು ಹೊತ್ತಿನ ಊಟವನ್ನು ಬಿಡುವುದರಿಂದ ಹಲವಾರು ದಿನಗಳಿಂದ ಉಪವಾಸವಿದ್ದು, ಹಸಿವಿನಿಂದ ನರಳುತ್ತಿರುವವರಿಗೆ ಆಹಾರ ಲಭಿಸಿದಂತಾಗುತ್ತದೆ ಎನ್ನುವುದು ಇವರ ಉದ್ದೇಶವಾಗಿತ್ತು.
1926ರಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿಯವರು ಕಾಶಿಯ ವಿದ್ಯಾಪೀಠದಿಂದ ಶಾಸ್ತ್ರಿ ಎನ್ನುವ ಬಿರುದನ್ನು ಪಡೆದುಕೊಂಡರು.
1964ರಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿಯವರು ಸ್ವತಂತ್ರ ಭಾರತದ ಎರಡನೇ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ಅದಕ್ಕೂ ಮೊದಲು ಇವರು ಸ್ವತಂತ್ರ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ, ಗೃಹ ಸಚಿವರಾಗಿ ಮತ್ತು ರೈಲ್ವೆ ಸಚಿವರಾಗಿ ಕೂಡ ಕಾರ್ಯನಿರ್ವಹಿಸಿದ್ದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು 1966ರ ಜನವರಿ 11ರಂದು ಉಜೆಕಿಸ್ತಾನದಲ್ಲಿ ಮರಣ ಹೊಂದಿದರು. 1966ರ ಜನವರಿ 10ರಂದು ಟಾಶ್ಕೆಂಟ್ ಒಪ್ಪಂದ ನಡೆದು, ಪ್ರಧಾನಮಂತ್ರಿಗಳಾಗಿ ಅವರು ಸಹಿ ಹಾಕಿದ್ದರು. ಅದರ ಮರುದಿನವೇ ಅವರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿತು. ಇಂದಿಗೂ ಅವರಿಗೆ ವಿಷಪ್ರಾಷನ ಮಾಡಿಸಿ ಪಾಕಿಸ್ತಾನದವರು ಕೊಂದರೆಂಬ ಅಭಿಪ್ರಾಯಗಳಿವೆ.
ದೇಶದ ಪ್ರಮುಖ ಆಧಾರ ಸ್ತಂಬಗಳು ಸೈನಿಕ ಮತ್ತು ರೈತ ಎನ್ನುವುದನ್ನು ಸೂಚಿಸುವುದಕ್ಕಾಗಿ ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷವಾಕ್ಯವನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತೀಯರಿಗೆ ನೀಡಿದರು. ಹಲವಾರು ವರ್ಷಗಳ ಹಿಂದೆ ಘೋಷಿಸಿದ ಈ ವಾಕ್ಯವು ಇಂದಿಗೂ ಪ್ರಸ್ತುತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎನ್ನುವ ದಾಖಲೆ ಕೂಡ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರಿನಲ್ಲಿದೆ.
ಹೀಗೆ ಭಾರತಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಇಬ್ಬರು ಮಹನೀಯರು ಒಂದೇ ದಿನಾಂಕದಂದು ಜನ್ಮತಾಳಿದ್ದು, ಭಾರತ ದೇಶದ ಪ್ರಜೆಗಳಿಗೆ ಒಂದೇ ದಿನದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳನ್ನು ಸ್ಮರಿಸುವ ಉತ್ತಮ ಅವಕಾಶ ದೊರಕಿರುವುದು ಒಂದು ಹೆಮ್ಮೆಯ ಸಂಗತಿಯಾಗಿದೆ. ಈ ಇಬ್ಬರು ಪ್ರೇರಣಾದಾಯಕ ವ್ಯಕ್ತಿತ್ವಗಳನ್ನು ಕೇವಲ ಒಂದು ದಿನ ಮಾತ್ರವಲ್ಲದೆ ಸದಾ ಸ್ಮರಿಸುತ್ತಾ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು, ದೇಶದ ಪ್ರಜೆಗಳಾದ ನಾವು ಉತ್ತಮ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ದೇಶಕ್ಕೆ ಕಿಂಚಿತ್ತು ಸೇವೆಯನ್ನು ಸಲ್ಲಿಸಿ, ಅವರ ಶ್ರಮ ಮತ್ತು ತ್ಯಾಗಕ್ಕೆ ಗೌರವವನ್ನು ಅರ್ಪಿಸೋಣ.







