ಸ್ಸುಳ್ಯ: ಕಂಟೈನರ್ ಲಾರಿ ಮತ್ತು ಸ್ಕೂಟರ್ ನಡುವೆ ರಸ್ತೆ ಅಪಘಾತ ಸಂಭವಿಸಿದ ಘಟನೆ, ಬೊಳುಬೈಲ್ ಬಳಿ ನಡೆದಿದೆ. ಪರಿಣಾಮವಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುವನ್ನು ಆಲಂಕಲ್ಯ ರಾಮಕೃಷ್ಣ ಎಂದು ಗುರುತಿಸಲಾಗಿದೆ. ರಾಮಕೃಷ್ಣ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
•ಕುಂದಾಪುರ: ಲೋಕಾಯುಕ್ತ ದಾಳಿ
ಕುಂದಾಪುರ: ಲೋಕಾಯುಕ್ತರು ಗ್ರಾಮ ಪಂಚಾಯಿತಿ ಕಛೇರಿಯ ಮೇಲೆ ದಿಢೀರ್ ದಾಳಿ ನಡೆಸಿದ ಘಟನೆ, ಬೇಳೂರಿನಲ್ಲಿ ನಡೆದಿದೆ. ಕಟ್ಟಡ ಪರವಾನಿಗೆಗಳನ್ನು ನೀಡುವಲ್ಲಿ ವಿಳಂಬ ಮಾಡಿರುವುದು ಸೇರಿದಂತೆ ಹಲವಾರು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಈ ಕ್ರಮವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಡಿವೈಎಸ್ ಪಿ ಹಾಲಮೂರ್ತಿ ರಾವ್ ಮತ್ತು ಇನ್ಸ್ಪೆಕ್ಟರ್ ಮಂಜುನಾಥ್ ಅವರ ನೇತೃತ್ವದ ತಂಡವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ, ಮಾಹಿತಿಗಳನ್ನು ಕಲೆಹಾಕಿದರು ಎನ್ನುವ ಸಂಗತಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸರ್ಕಾರಿ ಸೌಲಭ್ಯ ಒದಗಿಸುವುದಾಗಿ ಪಿಡಿಒ ಅವರು ಸುಮಾರು 400 ಅರ್ಜಿಗಳನ್ನು ಪಡೆದುಕೊಂಡಿದ್ದಾರೆ ಎನ್ನುವುದು ಕೂಡ ಬೆಳಕಿಗೆ ಬಂದಿದೆ. ಸಾರ್ವಜನಿಕರ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ತಂಡವು ಗ್ರಾಮ ಪಂಚಾಯಿತಿ ಮತ್ತು ಕಲ್ಲುಕೋರೆಗಳಿಗೂ ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ವಿವಿಧ ದಾಖಲೆಗಳನ್ನು ಪತ್ತೆಹಚ್ಚಿ ಮಾಹಿತಿಗಳನ್ನು ಸಂಗ್ರಹಿಸಿದರು ಎನ್ನುವ ಮಾಹಿತಿ ಲಭಿಸಿದೆ.
•ಉಳ್ಳಾಲ: ನಿಯಂತ್ರಣ ತಪ್ಪಿ ಉರುಳಿದ ಕಾರು
ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿ, ಕಾರೊಂದು ಉರುಳಿದ ಘಟನೆ, ಗುರುವಾರದಂದು ನಾಟೆಕಲ್ ಬಳಿಯ ಪನೀರು ಚರ್ಚ್ ಸಮೀಪದ ತಿರುವಿನಲ್ಲಿ ನಡೆದಿದೆ. ದೇರಳಕಟ್ಟೆಯಿಂದ ಪನೀರ್ ಮಾರ್ಗವಾಗಿ ಬೀರಿ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರು ಸಮೀಪದ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಒರಗಿ ನಿಂತಿದೆ ಎನ್ನುವ ಮಾಹಿತಿ ಲಭಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿದರು. ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ.
•ಮಂಗಳೂರು: ಮೆದುಳು ನಿಷ್ಕ್ರಿಯ; ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ
ಮಂಗಳೂರು: ಸೆಪ್ಟೆಂಬರ್ 14ರ ಸೋಮವಾರದಂದು ಅಂದರೆ ಗಣೇಶ ಚತುರ್ಥಿಯ ದಿನದಂದು ಬೈಕ್ ಮತ್ತು ಸ್ಕೂಟರ್ ಅಪಘಾತ ನಡೆದಿದ್ದು, ಪರಿಣಾಮವಾಗಿ ಯುವಕನ ಮೆದುಳು ನಿಷ್ಕ್ರಿಯಗೊಂಡಿದೆ ಎನ್ನಲಾಗಿದೆ. ಯುವಕನನ್ನು ಕುತ್ತಾರುವಿನ ಆಯೆರೆಬೆಟ್ಟು ನಿವಾಸಿಯಾದ 24 ವರ್ಷದ ವರ್ಷಿತ್ ಕುಲಾಲ್ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಗಂಭೀರವಾಗಿ ಗಾಯಗೊಂಡಿದ್ದ ವರ್ಷಿತ್ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವರ್ಷಿತ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ವೈದ್ಯರ ಸಲಹೆಯ ಮೇರೆಗೆ ಈಗಾಗಲೇ ಬೇಡಿಕೆ ಇರುವಂತಹ ವರ್ಷಿತ್ ಅವರ ಮೂತ್ರಪಿಂಡ, ಯಕೃತ್ತು, ಹೃದಯ ಮತ್ತು ಶ್ವಾಸಕೋಶಗಳನ್ನು ದಾನ ಮಾಡಲು ಮುಂದಾಗಿದ್ದು, ಮಗನನ್ನು ಕಳೆದುಕೊಳ್ಳುತ್ತಿರುವ ನೋವಿನ ಸಂದರ್ಭದಲ್ಲಿಯೂ ಇತರ ಜೀವಗಳ ಬಗ್ಗೆ ಆಲೋಚಿಸಿ, ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿರುವ ವರ್ಷಿತ್ ಅವರ ಕುಟುಂಬಸ್ಥರ ಈ ಉತ್ತಮ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ವರ್ಷಿತ್ ಅವರ ಅಂಗಾಂಗಗಳನ್ನು ಚಿಕಿತ್ಸೆಯನ್ನು ಪಡೆಯುತ್ತಿರುವ ರೋಗಿಗಳಿಗೆ ಅಳವಡಿಸುವ ಸಲುವಾಗಿ ಝೀರೋ ಟ್ರಾಫಿಕ್ ಮೂಲಕ ಸಂಬಂಧಿತ ಆಸ್ಪತ್ರೆಗಳಿಗೆ ರವಾನಿಸುವ ಪ್ರಕ್ರಿಯೆಯನ್ನು ಕೂಡ ಕೈಗೊಳ್ಳಲಾಯಿತು.







