Categories
Uncategorized

ರಾಜ್ಯದಲ್ಲಿ ಈಗ ಚೀನಾ ಅಡಿಕೆ ಹುಷಾರ್! – ರಾಜಧಾನಿ ಬಳಿ ವಿಷಕಾರಿ ಚೀನಾ ನಕಲಿ ಅಡಿಕೆ ವಶ – ಅಡಿಕೆ ಮಾನ ತೆಗೆಯುತ್ತಿರುವ ಹೊರ ವ್ಯಾಪಾರಿಗಳು!

ಕೋಲಾರ/ಶಿವಮೊಗ್ಗ: ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುವಂತಹ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಕೃತಕ ಅಡಿಕೆಗಳನ್ನು ವಶಪಡಿಸಿಕೊಂಡ ಘಟನೆ, ಮುಳಬಾಗಿಲು ತಾಲ್ಲೂಕಿನ ಗಡಿಭಾಗದಲ್ಲಿ ನಡೆದಿದೆ. ಇದೀಗ ಚೀನಾ ಅಡಿಕೆಯು ಅಡಿಕೆಯ ಮಾನ ತೆಗೆಯುತ್ತಿದೆ.
ಕೋಲ್ಕತ್ತಾದಿಂದ ಬೆಂಗಳೂರಿಗೆ ಹತ್ತು ಟನ್ ನಷ್ಟು ಕೃತಕ ಅಡಿಕೆಗಳನ್ನು ಸಾಗಿಸುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ಯಾಂಟರ್ ಅನ್ನು ಅಡ್ಡಗಟ್ಟಿ ಪರಿಶೀಲನೆಯನ್ನು ನಡೆಸಿದಾಗ, ಸುಮಾರು 96 ಮೂಟೆಗಳಷ್ಟು ನಕಲಿ ಅಡಿಕೆ ಕಂಡುಬಂದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕ್ಯಾಂಟರ್ ನ ಚಾಲಕ ಮತ್ತು ಕ್ಲೀನರ್ ಅನ್ನು ಬಂಧಿಸಿದ್ದು, ಈ ಸಂದರ್ಭದಲ್ಲಿ ನಕಲಿ ಅಡಿಕೆಗಳ ಮೂಟೆಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಕ್ಯಾಂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಕಲಿ ಅಡಿಕೆಯಿಂದ ಶುದ್ಧ ಅಡಿಕೆ ಮರ್ಯಾದೆ ಹೋಯ್ತು!

ಸಾಮಾನ್ಯ ಅಡಿಕೆಗಳನ್ನು ಕೊಯ್ದು, ಹಂಡೆಯಲ್ಲಿ ಬೇಯಿಸಿ ನೈಸರ್ಗಿಕವಾಗಿ ತಯಾರಿಸಲಾಗುತ್ತದೆ. ಆದರೆ ನಕಲಿ ಅಡಿಕೆಗಳನ್ನು ತಾಳೆ ಬೀಜಗಳು, ಮರದ ರೆಂಬೆ ಅಥವಾ ಕಾಂಡದ ತಿರುಳುಗಳು ಮತ್ತು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ. ಅಲ್ಲದೆ ಇದಕ್ಕೆ ಬಣ್ಣವನ್ನು ನೀಡುವ ಸಲುವಾಗಿ ನೀಲಿ, ಕೆಂಪು ಮತ್ತು ಹಳದಿ ಬಣ್ಣದ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರು “ಕೋಲಾರದಲ್ಲಿ ನಕಲಿ ಅಡಿಕೆಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ಅಡಿಕೆಯ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನು ಎರಡು ವಾರಗಳಲ್ಲಿ ಪರೀಕ್ಷೆಯ ವರದಿ ಲಭ್ಯವಾಗಲಿದ್ದು, ಕಳಪೆ ಗುಣಮಟ್ಟದ ಅಡಿಕೆಯ ಕುರಿತು ಸ್ಪಷ್ಟನೆ ದೊರೆಯಲಿದೆ” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.