ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಹರಳಿಮಠ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ ಶತಮಾನೋತ್ಸವ ಸಂಭ್ರಮ!.
ಅ.31, ನ.1ಕ್ಕೆ ಹರಳಿಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಅದ಼್ಧೂರಿ ಶತಮಾನೋತ್ಸವಕ್ಕೆ ಶತಮಾನೋತ್ಸವ ಆಚರಣಾ ಸಮಿತಿ ಸಿದ್ಧತೆ ನಡೆಸಿದೆ. ಇದೇ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕೂಡ ನಡೆಯಲಿದ್ದು, ಸಮಸ್ತ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಪೋಷಕರು, ಜನತೆಗೆ ಹಾಗೂ ಸರ್ವರಿಗೂ ಸ್ವಾಗತ ಕೋರಲಾಗಿದೆ.
ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಶಾಲೆ
1925ರಲ್ಲಿ ಆರಂಭಗೊಂಡು ಗ್ರಾಮದ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದು, ಇದೀಗ ಸಾರ್ಥಕ ನೂರು ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಶಾಲೆಯ ಶತಮಾನೋತ್ಸವವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಗ್ರಾಮಸ್ಥರು ಅಕ್ಟೋಬರ್ 31 ಮತ್ತು ನವೆಂಬರ್ 1ರ ಶನಿವಾರ ಮತ್ತು ಭಾನುವಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಶತಮಾನೋತ್ಸವ ಸಭಾ ಕಾರ್ಯಕ್ರಮವನ್ನು ಅಕ್ಟೋಬರ್ 31ರ ಶನಿವಾರ ಬೆಳಿಗ್ಗೆ ಹತ್ತು ಗಂಟೆಗೆ ಹಮ್ಮಿಕೊಂಡಿದ್ದು ಗ್ರಾಮದ ಪ್ರಗತಿಪರ ಕೃಷಿಕ ಕೃಷ್ಣಕುಮಾರ್ ಉದ್ಘಾಟಿಸಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡರು, ನಿಕಟಪೂರ್ವ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ಜಿ್ಲ್ಲಾ ರಕ್ಷಣಾಧಿಕಾರಿಗಳಾದ ನಿಖಿಲ್ ಬಿ ಮತ್ತು ವಿವಿಧ ಜನಪ್ರತಿನಿಧಿಗಳು, ತಾಲ್ಲೂಕಿನ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಹೇಮರಾಜ್ ಸಿ.ಟಿ, ಅಧ್ಯಕ್ಷರಾದ ರಮೇಶ್ ಎಚ್.ಎಸ್ ಉಪಸ್ಥಿತರಲಿದ್ದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಡಿ.ಆರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನದ ಗೌರವ
ಶತಮಾನೋತ್ಸವ ಸಭಾ ಕಾರ್ಯಕ್ರಮದಲ್ಲಿ ಈ ಶಾಲೆಯಲ್ಲಿ ಇದುವರೆಗೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಗಣ್ಯರು ಸನ್ಮಾನಿಸಲಿದ್ದಾರೆ.ಮದ್ಯಾಹ್ನ 2 ಗಂಟೆಯಿಂದ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ಆಟೋಟದ ಸ್ಪರ್ಧೆ ನಡೆಯಲಿದೆ. ಸಂಜೆ 5.30 ಗಂಟೆಗೆ “ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪಡೆದ ರತ್ನಕುಮಾರಿ ಅವರನ್ನು ಸನ್ಮಾನಿಸಲಾಗುತ್ತದೆ. ರಾತ್ರಿ 7 ಗಂಟೆಗೆ ಶಿವಮೊಗ್ಗದ ಸುಮುಖ ಕಲಾ ತಂಡದಿಂದ “ಭೂಕೈಲಾಸ” ಯಕ್ಷಗಾನ ಪ್ರದರ್ಶನವಿರುತ್ತದೆ.
ನ.1ಕ್ಕೆ ಕನ್ನಡ ರಾಜ್ಯೋತ್ಸವ: ಮೂರು ಮುತ್ತು ತಂಡದ ನಾಟಕ
ನ.1ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಗ್ರಾಮದ ಶ್ರೀ ಕಲಾನಾಥೇಶ್ವರ ದೇವಸ್ಥಾನದ ಆವರಣದಿಂದ ಶಾಲೆಯವರೆಗೆ ಬೈಕ್ ರ್ಯಾಲಿ ನಡೆಯಲಿದೆ. ನಂತರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಿದೆ. ಬೆಳಿಗ್ಗ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದೆ. ಮಧ್ಯಾಹ್ನ 2 ರಿಂದ 5 ಗಂಟೆಯವರಿಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ 5.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ 7 ಗಂಟೆಗೆ ಕುಂದಾಪುರದ ರೂಪಕಲಾ ಕುಳ್ಳಪ್ಪು ಕಲಾತಂಡದಿಂದ ನಗೆನಾಟಕ “ಗಿರಾಕಿಯೇ ಇಲ್ಲ ಮಾರಾಯ” ನಡೆಯಲಿದೆ.





