ಎನ್.ಆರ್.ಪುರ: ಮಲೆನಾಡ ರೈತರ ಸಮಸ್ಯೆಗೆ ಪರಿಹಾರ ನೀಡಲು ಒತ್ತಾಯಿಸಿ ಅಕ್ಟೋಬರ್ 7ರ ಬುಧವಾರದಂದು ತಾಲ್ಲೂಕು ಕಛೇರಿ ಆವರಣದಲ್ಲಿ ಶೃಂಗೇರಿ ಕ್ಷೇತ್ರದ ರೈತ ಒಕ್ಕೂಟದ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಸರ್ಕಾರದ ಸುತ್ತೋಲೆಯಿಂದ ರೈತರ ಮನೆ, ಜಮೀನು ಹಾಗೂ ಬದುಕಿನ ಮೇಲೆ ಉಂಟಾಗಬಹುದಾದ ಪರಿಣಾಮಗಳ ವಿರುದ್ಧ ಈ ಹೋರಾಟ.
ಹಕ್ಕಿಗಾಗಿ ಹೋರಾಟ, ನೆಲಕ್ಕಾಗಿ ಹೋರಾಟ, ರೈತನ ಉಳಿವಿಗಾಗಿ ಹೋರಾಟ ಮಾಡುತ್ತಿದ್ದು ಸುತ್ತೋಲೆ ಹಿಂಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ. ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದೆ.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ ಶ್ರೀಮದಭಿನವಲಕ್ಷ್ಮೀ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಅವರು “ಕೇವಲ ರೈತರ ಕಣ್ಣೊರೆಸುವ ಪ್ರಯತ್ನವನ್ನು ಸರ್ಕಾರ ಮಾಡಬಾರದು. ಮಲೆನಾಡಿನ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಆದರೂ ಸರ್ಕಾರ ಕಂಡರೂ ಕಾಣದಂತೆ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಗುರುವಿಗೆ ಮತ್ತು ರಾಜನಿಗೆ ಗೌರವವನ್ನು ನೀಡಲಾಗುತ್ತದೆ. ಮಲೆನಾಡಿಗರು ಮುಖ್ಯಮಂತ್ರಿಗಳು ಬಂದಂತಹ ಸಂದರ್ಭದಲ್ಲಿ ಅರಮನೆಯಂತಹ ಪೆಂಡಾಲ್ ಹಾಕಿ, ಅವರನ್ನು ಸಿಂಹಾಸನದ ಮೇಲೆ ಕೂರಿಸಿ, ಗೌರವಯುತವಾಗಿ ನೋಡಿಕೊಂಡ ಬಳಿಕ, ತಮ್ಮ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಂಡಿದ್ದಾರೆ. ಆದರೆ ರಾಜನಾದವನು ತನ್ನ ಪ್ರಜೆಗಳನ್ನು ಬೀದಿಯಲ್ಲಿ ನಿಲ್ಲಿಸಬಾರದು. ಸರ್ಕಾರ ಕಷ್ಟದಲ್ಲಿದ್ದಾಗ ತೆರಿಗೆ ಕಟ್ಟುವವರು ರೈತರು. ಆದರೆ ರೈತರಿಗೇ ಕಷ್ಟ ಬಂದಾಗ ರೈತರ ಜಮೀನಿಗೆ ಹಕ್ಕುಪತ್ರ, ಸಂಬಂಧಪಟ್ಟ ಭೂದಾಖಲೆಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಮಲೆನಾಡಿನ ರೈತರು ಈಗಾಗಲೇ ಸಾಕಷ್ಟನ್ನು ಕಳೆದುಕೊಂಡಿದ್ದಾರೆ. ಬಯಲುಸೀಮೆಗೆ ನೀರನ್ನು ಒದಗಿಸಲು ಕೂಡ ತಯಾರಾಗಿದ್ದಾರೆ. ಹೀಗಿರುವಾಗ ಅವರ ಸಮಸ್ಯೆಗಳಿಗೆ ಸರ್ಕಾರವು ಸೂಕ್ತ ಪರಿಹಾರವನ್ನು ನೀಡಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ವಿಶ್ವನಾಥ ಗದ್ದೆಮನೆ ಅವರಿಂದ ಹೋರಾಟಕ್ಕೆ ಕರೆ
ಶೃಂಗೇರಿ ಕ್ಷೇತ್ರದ ರೈತ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ ಗದ್ದೆಮನೆ ಅವರು ಮಾತನಾಡಿ “ಕರ್ನಾಟಕ ಪಂಚಾಯತ್ ರಾಜ್ ಸಚಿವಾಲಯವು ಸರ್ಕಾರಿ ಜಾಗದ ಮನೆ ಕಂದಾಯವನ್ನು ವಜಾ ಮಾಡುವ ಆದೇಶವನ್ನು 30 ದಿನಗಳ ಒಳಗಾಗಿ ರದ್ದು ಮಾಡದಿದ್ದರೆ, ಪ್ರತಿ ಗ್ರಾಮ ಪಂಚಾಯಿತಿ ಕಛೇರಿಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು” ಎನ್ನುವ ಎಚ್ಚರಿಕೆಯನ್ನು ನೀಡಿದರು.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷರಾದ ಶೆಟ್ಟಿಗದ್ದೆ ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಹಂಚಿನಮನೆ ರಾಘವೇಂದ್ರ, ಮಲೆನಾಡು ರೈತ ಹಿತ ರಕ್ಷಣಾ ಸಮಿತಿಯ ಸಂಚಾಲಕರಾದ ರಂಜಿತ್, ರೈತ ಮುಖಂಡರಾದ ದಿಗಂತ್ ಬಿಂಬೈಲ್, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಾರ್ಯಾಧ್ಯಕ್ಷರಾದ ಆದ್ದಡ ಸತೀಶ್ ಮೊದಲಾದವರು ಮಲೆನಾಡಿನ ರೈತರ ಸಮಸ್ಯೆಗಳನ್ನು ಮುಕ್ತವಾಗಿ ಬಿಚ್ಚಿಟ್ಟರು. ಮಲೆನಾಡು ನಾಗರೀಕ ರೈತ ಹಿತ ರಕ್ಷಣಾ ಸಮಿತಿ, ಆಟೋ ಚಾಲಕರ ಸಂಘ, ದಲಿತ ಸಂಘರ್ಷ ಸಮಿತಿ, ವಾಲ್ಮೀಕಿ ಸಂಘ, ರೈತ ಮತ್ತು ಕಾರ್ಮಿಕ ಹಿತ ರಕ್ಷಣಾ ವೇದಿಕೆ, ಲಯನ್ಸ್ ಕ್ಲಬ್, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಪದಾಧಿಕಾರಿಗಳು ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರೈತ ಸಂಘಟನೆಗಳು, ವರ್ತಕರ ಸಂಘ ಸೇರಿ ಹತ್ತಾರು ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿವೆ.
ಜಿಲ್ಲಾಡಳಿತಕ್ಕೆ ಈ ಹೋರಾಟ ದೊಡ್ಡ ಸವಾಲಾಗಿದೆ.
ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅಹೋ ರಾತ್ರಿ ಧರಣಿ ಕೂಡ ನಡೆದಿದೆ.







