ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಮಂಗಳವಾರದಂದು ಕಾರ್ಕಳದ ಜೋಡುರಸ್ತೆ ಸಮೀಪದಲ್ಲಿ ನಡೆದಿದೆ. ಮಂಜುನಾಥ ಪೈ ಅವರು ದೇವಸ್ಥಾನಕ್ಕೆ ತೆರಳಿದ್ದು, ಮನೆಗೆ ಹಿಂತಿರುಗಿದ ನಂತರ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಂಜುನಾಥ ಪೈ ಅವರು ಜೋಡುರಸ್ತೆಯ ಸುತ್ತಮುತ್ತಲೂ ಹಲವಾರು ಫ್ಲಾಟ್ ಗಳನ್ನು ನಿರ್ಮಿಸುವ ಮೂಲಕ ಉದ್ಯಮಿ ಎಂದು ಗುರುತಿಸಿಕೊಂಡಂತವರಾಗಿದ್ದಾರೆ. ಮಂಜುನಾಥ್ ಪೈ ಅವರ ಆತ್ಮಹತ್ಯೆಗೆ ಕಾರಣವೇನೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯ ಮೂಲಕ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
•ಮೂಡಬಿದರೆ: ಮರಗಳ್ಳತನ; ಇಬ್ಬರ ವಿರುದ್ಧ ಪ್ರಕರಣ ದಾಖಲು
ಮೂಡಬಿದರೆ: ಸರಕಾರಿ ಜಾಗದಲ್ಲಿ ಮರಗಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಶಿರ್ತಾಡಿಯಲ್ಲಿ ನಡೆದಿದೆ. ಸರ್ಕಾರಿ ಜಾಗದಲ್ಲಿದ್ದ ಮರಗಳನ್ನು ಕಡಿದು, ದೇವಸ್ಥಾನದ ಹೆಸರಿನಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರರಾದ ಸುದತ್ತ ಜೈನ್ ಶಿರ್ತಾಡಿ ಅವರು ಇತ್ತೀಚೆಗೆ ಆರೋಪಿಸಿದ್ದರು ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಮರಗಳ್ಳತನ ಮಾಡುತ್ತಿರುವುದು ದೃಢಪಟ್ಟಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಆರೋಪಿಗಳನ್ನು ಶಿರ್ತಾಡಿಯ ಧರ್ಮರಾಜ ಪೂವಣಿ ಮತ್ತು ಪೂರ್ಣಚಂದ್ರ ಶೆಟ್ಟಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖಾಧಿಕಾರಿಗಳು ಆರೋಪಿಗಳ ವಿರುದ್ಧ ಸ್ವಯಂಪ್ರೇರಿತರಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
•ಸುಳ್ಯ: ಶಾಸಕಿ ಭಾಗೀರಥಿ ಕಾರು ಅಪಘಾತ; ಅಪಾಯದಿಂದ ಪಾರು
ಸುಳ್ಯ: ಕ್ಷೇತ್ರದ ಶಾಸಕಿಯಾದ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾದ ಘಟನೆ, ಮಂಗಳವಾರದಂದು ಕರಿಕ್ಕಳ ನಿಂತಿಕಲ್ಲಿನ ಮುಚ್ಚಿಲ ಎನ್ನುವಲ್ಲಿ ನಡೆದಿದೆ. ಎದುರಿನಿಂದ ಬರುತ್ತಿದ್ದ ಕಾರು ಇದ್ದಕ್ಕಿದ್ದ ಹಾಗೆ ಬ್ರೇಕ್ ಹಾಕಿದ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇದರಿಂದಾಗಿ ಭಾಗೀರಥಿ ಮುರುಳ್ಯ ಅವರ ಕಾರಿನ ಮುಂಭಾಗ ಜಖಂಗೊಂಡಿದ್ದು, ಕಾರಿನಲ್ಲಿದ್ದ ಶಾಸಕಿ ಮತ್ತು ಚಾಲಕರು ಯಾವುದೇ ರೀತಿಯ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.







