ಬೆಂಗಳೂರು: ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಬಿ.ವೈ. ರಾಘವೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ.
ಜನಪರ ಕಾಳಜಿ, ಅಭಿವೃದ್ಧಿಪರ ಚಿಂತನೆ ಹಾಗೂ ನಿರಂತರ ಜನಸೇವೆಗೆ ದೊರೆತ ಮತ್ತೊಂದು ಮಹತ್ವದ ಜವಾಬ್ದಾರಿ ಇದಾಗಿದೆ. ಈಗಾಗಲೇ ಅನೇಕ ಸಮಿತಿಗಳಲ್ಲಿ ಇವರು ಕೆಲಸ ಮಾಡಿದ್ದಾರೆ.
ದೇಶದ ಭದ್ರತೆ, ಆಂತರಿಕ ವ್ಯವಹಾರಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳಲ್ಲಿ ಅನುಭವ ಮತ್ತು ಕಾರ್ಯದಕ್ಷತೆಯನ್ನು ಗುರುತಿಸಿ ಈ ಹುದ್ದೆ ನೀಡಲಾಗಿದೆ.
ಹುದ್ದೆ ಬಗ್ಗೆ ರಾಘವೇಂದ್ರ ಹೇಳಿದ್ದೇನು?
ಗೃಹ ವ್ಯವಹಾರಗಳ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಮತ್ತೊಮ್ಮೆ ಅವಕಾಶ ದೊರೆತಿರುವುದು ಸಂತಸ ತಂದಿದೆ. ಗೌರವಾನ್ವಿತ ಅಧ್ಯಕ್ಷರಾದ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಜಿ ಅವರ ನೇತೃತ್ವದಲ್ಲಿ ಸಮಿತಿಯ ಕಾರ್ಯದಲ್ಲಿ ಮುಂದುವರಿಯಲು ಅವಕಾಶ ಸಿಕ್ಕಿರುವುದು ಸಂತೋಷದ ವಿಚಾರ.
ಸಮಿತಿಯ ಸಭೆಗಳು ಹಾಗೂ ಅಧ್ಯಯನ ಪ್ರವಾಸಗಳ ಮೂಲಕ ಸೈಬರ್ ಭದ್ರತೆ, ಗಡಿ ಭದ್ರತೆ, ಮಕ್ಕಳ ಕಳ್ಳಸಾಗಣೆ, ಆಂತರಿಕ ಭದ್ರತೆ, ವಿಪತ್ತು ನಿರ್ವಹಣೆ ಸೇರಿದಂತೆ ದೇಶದ ಪ್ರಮುಖ ವಿಚಾರಗಳ ಕುರಿತು ಚರ್ಚಿಸುವ ಅವಕಾಶ ದೊರೆತಿದೆ. ಈ ಸಂದರ್ಭದಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ನನ್ನ ಸಲಹೆ-ಸೂಚನೆಗಳನ್ನು ನೀಡಲು ಸಹ ಅವಕಾಶ ಸಿಕ್ಕಿದೆ.
ಮುಂದೆಯೂ ಈ ಜವಾಬ್ದಾರಿಯನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸುತ್ತಾ, ದೇಶದ ಭದ್ರತೆ ಮತ್ತು ಉತ್ತಮ ಆಡಳಿತಕ್ಕೆ ನನ್ನ ಕೈಲಾದ ಕೊಡುಗೆ ನೀಡಲು ಬದ್ಧನಾಗಿದ್ದೇನೆ ಎಂದು ರಾಘವೇಂದ್ರ ಹೇಳಿದ್ದಾರೆ.







