ಮಂಗಳೂರು: ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗೆ ಸಂಬಂಧಿಸಿದಂತೆ ಯುವಕನೊಬ್ಬ ಎಐ ಅನ್ನು ಬಳಸಿ, ನಕಲಿ ಪ್ರವೇಶ ಪತ್ರಿಕೆಯನ್ನು ಸೃಷ್ಟಿಸಿದ ಘಟನೆ ನಡೆದಿದೆ. ನಗರದ ಮಂಗಳಾ ಕ್ರೀಡಾಂಗಣದಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ದೇಹದಾರ್ಢ್ಯ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಇದು ಕಂಡುಬಂದಿದೆ ಎನ್ನಲಾಗಿದೆ. ಆರೋಪಿಯನ್ನು ಕಡಬ ಕೋಡಿಂಬಾಳ ಬೆದ್ರಾಜೆ ನಿವಾಸಿ ಯಜ್ಞೇಶ್ ರೈ ಎಂದು ಗುರುತಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಪೊಲೀಸರು ಯಜ್ಞೇಶ್ ನನ್ನು ವಿಚಾರಣೆಗೆ ಒಳಪಡಿಸಿದಾಗ, ಆತ ಲಿಖಿತ ಪರೀಕ್ಷೆಗೆ ಹಾಜರಾಗದೆ ನಕಲಿ ಪ್ರವೇಶ ಪತ್ರದೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿ, ತಾನು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ದೇಹದಾರ್ಢ್ಯ ಪರೀಕ್ಷೆಗೆ ಪ್ರವೇಶ ಪತ್ರ ಬಂದಿದೆ ಎಂದು ಸುಳ್ಳು ಹೇಳಿ ಪರೀಕ್ಷೆಗೆ ಹಾಜರಾಗಲು ತಯಾರಿ ನಡೆಸಿದ ಎನ್ನುವುದು ಬೆಳಕಿಗೆ ಬಂದಿದೆ. ಇದಕ್ಕೂ ಮೊದಲು ಯಜ್ಞೇಶ್ ತನ್ನ ಪ್ರವೇಶ ಪತ್ರವನ್ನು ಮೊಬೈಲ್ ನಲ್ಲಿ ತೋರಿಸಿದ್ದಾನೆ. ಇದರಿಂದ ಅನುಮಾನಗೊಂಡ ಪರೀಕ್ಷಾ ಸಿಬ್ಬಂದಿಗಳು ಆತನ ತನಿಖೆ ನಡೆಸಿದ್ದಾರೆ. ನಂತರ ಮೊಬೈಲ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಪ್ರವೇಶ ಪತ್ರವನ್ನು ಎಐ ಬಳಸಿ ತಯಾರಿಸಿದ್ದು ಅದು ನಕಲಿಯಾಗಿರುವುದು ಧೃಡಪಟ್ಟಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಯಜ್ಞೇಶ್ ನನ್ನು ಬಂಧಿಸಿದ್ದು, ಆತನ ವಿರುದ್ಧ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬ್ರಹ್ಮಾವರ: ಕಾರು ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
ಬ್ರಹ್ಮಾವರ: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಇಕೋ ಕಾರೊಂದು ಢಿಕ್ಕಿ ಹೊಡೆದ ಘಟನೆ, ಕುಂಟೂರು ಬಸ್ ನಿಲ್ದಾಣದ ಬಳಿ ನಡೆದಿದೆ. ಹನೇಹಳ್ಳಿ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ 8ನೇ ತರಗತಿಯ ವಿದ್ಯಾರ್ಥಿ ಸಂಗಮೇಶ್ ಗುರುವಾರದಂದು ಹಾಸ್ಟೆಲ್ ನಿಂದ ಕೂರಾಡಿಯ ಬಿಎಮ್ಎಮ್ ಪ್ರೌಢಶಾಲೆಗೆ ಸಹಪಾಠಿಗಳಾದ ಮಿಥುನ್ ಮತ್ತು ಶರತ್ ಜೊತೆಗೆ ಬಾರ್ಕೂರು-ಕೂರಾಡಿ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಆಗಮಿಸಿದ ಇಕೋ ಕಾರು ಬಲವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮವಾಗಿ ಸಂಗಮೇಶ್ ನ ಕಾಲಿನ ಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ.
•ಸುಳ್ಯ: ಸಿಡಿಲು ಬಡಿದು ಕೊಟ್ಟಿಗೆ, ಸ್ವಿಚ್ ಬೋರ್ಡ್ ಹಾನಿ
ಸುಳ್ಯ: ಸಿಡಿಲ ಬಡಿತಕ್ಕೆ ಕೊಟ್ಟಿಗೆ ಮತ್ತು ಸ್ವಿಚ್ ಬೋರ್ಡ್ ಗಳು ಹಾನಿಗೊಳಗಾದ ಘಟನೆ, ಗುರುವಾರದಂದು ಗುತ್ತಿಗಾರಿನಲ್ಲಿ ನಡೆದಿದೆ. ಬಾಲಕೃಷ್ಣ ಬಾಕಿಲ ಎನ್ನುವವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಗುರುವಾರದಂದು ಸಂಜೆಯ ಹೊತ್ತಿಗೆ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ಅದಕ್ಕೂ ಮೊದಲು ಸಿಡಿಲು ಮತ್ತು ಗುಡುಗು ತೀವ್ರವಾಗಿ ಪರಿಣಮಿಸಿದೆ. ಇದರಿಂದಾಗಿ ನೀರಿನ ಪೈಪ್ ಲೈನ್ ಛಿದ್ರಗೊಂಡಿದ್ದು, ಕೊಟ್ಟಿಗೆ ಗೋಡೆ ಬಿರುಕು ಬಿಟ್ಟಿದೆ.
ಮಂಗಳೂರು: ಕಿನ್ನಿಗೋಳಿ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷ!
ಮಂಗಳೂರು: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾರಡ್ಕ ಬಲ್ಲಾಣ ಬಳಿ ಗುರುವಾರ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಾರಡ್ಕ ಬಲ್ಲಾಣ ನಿವಾಸಿ ಸಂತೋಷ್ ಸಲ್ಡಾನ್ಹಾ ಅವರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಸೆರೆಯಾಗಿದ್ದು, ಅವರ ಮನೆಯ ಗೇಟ್ ದಾಟಿ ಚಿರತೆ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ. ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದ ಚಿರತೆ ಇನ್ನೂ ಆ ಪ್ರದೇಶದಲ್ಲಿ ಓಡಾಡುತ್ತಿರುವುದು ಸಿಸಿಟಿವಿ ದೃಶ್ಯಗಳಿಂದ ದೃಢಪಟ್ಟಿದೆ.







