ಸಾಗರ: ಗಾಂಜಾ ಸೇವನೆ ಮಾಡುತ್ತಿದ್ದ ಯುವತಿಯು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಲಾಡ್ಜ್ ಒಂದರಲ್ಲಿ ಮಂಗಳವಾರದಂದು ನಡೆದಿದೆ. ಅಚ್ಚರಿ ಎಂದ್ರೆ ಪ್ರವಾಸಿ ತಾಣ ಸಾಗರದಲ್ಲಿ ಇಂತಹ ಘಟನೆ ವರದಿಯಾಗಿದೆ.
ಜೋಗ ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಗಾಂಜಾ ಸೇವನೆ ಮಾಡುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪಿಎಸ್ಐ ಶಾಂತರಾಜ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಈ ಸಂದರ್ಭದಲ್ಲಿ ಮೂವರು ಯುವಕರು ಮತ್ತು ಓರ್ವ ಯುವತಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರಿಂದ ಪೊಲೀಸರು ಕೊಠಡಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಮೇಜಿನ ಮೇಲೆ ಇರಿಸಿದ್ದ ಸಿಗರೇಟ್ ಗಳನ್ನು ಕತ್ತರಿಸಿ ನೋಡಿದಾಗ, ಅದರಲ್ಲಿನ ತಂಬಾಕನ್ನು ತೆಗೆದು ಗಾಂಜಾವನ್ನು ತುಂಬಿಸಿ ಸೇವಿಸುತ್ತಿರುವುದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ನಾಲ್ವರನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ನಾಲ್ವರು ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಮೂವರು ಯುವಕರು, ಗಾಂಜಾ ಪೂರೈಸಿದ ಮತ್ತೊಬ್ಬ ಯುವಕ ಹಾಗೂ ಯುವತಿಯ ವಿರುದ್ಧ ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎತ್ತ ಸಾಗುತ್ತಿದೆ ಯುವ ಸಮುದಾಯ..?!
ಇತ್ತೀಚಿಗೆ ಯುವ ಸಮುದಾಯ ಗಾಂಜಾ, ಮದ್ಯ, ಬೈಕ್, ರೀಲ್ಸ್ ಚಟಕ್ಕೆ ದಾಸರಾಗುತ್ತಿರುವುದು ಹೆಚ್ಚಾಗುತ್ತಿದೆ. ಮನೆಯಿಂದ ವಿವಿಧ ಕಾರಣ ಹೇಳಿ ಹೊರಗೆ ಹೋಗುವ ಯುವ ಜನತೆ ಹಾದಿ ತಪ್ಪುತ್ತಿದ್ದಾರೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕಿದೆ.







