ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋಗಿ ಮೂವರು ಮಕ್ಕಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರದಂದು ಮರ್ಲೆ ಗ್ರಾಮದ ಚಿಕ್ಕಕೆರೆಯಲ್ಲಿ ನಡೆದಿದೆ. ಪರೀಕ್ಷೆಗಳು ಮುಗಿದು, ದಸರ ಪ್ರಯುಕ್ತ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ಈಜಲು ತೆರಳಿದ್ದ ಸಂದರ್ಭದಲ್ಲಿ, ನೀರಿನಲ್ಲಿ ಮುಳುಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೃತ ವಿದ್ಯಾರ್ಥಿಗಳನ್ನು ತರುಣ್, ಭುವನ್ ಮತ್ತು ಲಿಖಿತ್ ಎಂದು ಗುರುತಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದರು ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಹೊಸನಗರ: ದೇವಸ್ಥಾನಕ್ಕೆ ತೆರಳುತ್ತಿದ್ದ ಅರ್ಚಕರ ಸ್ಕೂಟಿ ಪಲ್ಟಿ; ಸಾವು
ಹೊಸನಗರ: ಸ್ಕೂಟಿ ಪಲ್ಟಿ ಹೊಡೆದು ಅರ್ಚಕರೊಬ್ಬರು ಸಾವನ್ನಪ್ಪಿರುವ ಘಟನೆ, ಯಡೂರು ಸಮೀಪದ ಕರಿಗಲ್ಲು ಗ್ರಾಮದಲ್ಲಿ ಸೋಮವಾರದಂದು ನಡೆದಿದೆ. ನವರಾತ್ರಿ ಉತ್ಸವದ ಸಿದ್ಧತೆಗಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ, ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ಉಳ್ತಿಗಾ ಗ್ರಾಮದ ಮೇಲುಸುಂಕ ನಿವಾಸಿ ಶೇಷಾಚಲ ಭಟ್ ಎಂದು ಗುರುತಿಸಲಾಗಿದೆ. ಮಳೆಯು ಸುರಿದ ಪರಿಣಾಮವಾಗಿ ಸ್ಕೂಟಿ ಜಾರಿದೆ. ಪರಿಣಾಮವಾಗಿ ಶೇಷಾಚಲ ಭಟ್ ಅವರು ಕೆಳಗೆ ಬಿದ್ದಿದ್ದು, ತಲೆಗೆ ಬಲವಾಗಿ ಪೆಟ್ಟಾದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







