ಕಡೂರು: ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ತಂದೆ ಮಗನ ನಡುವೆ ಕಲಹ ಮಿತಿಮೀರಿದ್ದು, ಅದು ತಂದೆಯ ಕೊಲೆಯೊಂದಿಗೆ ಅಂತ್ಯಗೊಂಡ ಘಟನೆ ಬೀರೂರು ಸಮೀಪದ ಕಲ್ಲೂರು ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಲ್ಲೂರು ಗ್ರಾಮದ ಲೋಕೇಶಪ್ಪ ಮತ್ತು ಅವರ ಮಗನಾದ ರಮೇಶ್ ಅವರ ನಡುವೆ ಆಧಾರ್ ಕಾರ್ಡ್ ವಿಚಾರವಾಗಿ ರಾತ್ರಿಯ ಹೊತ್ತಿನಲ್ಲಿ ಕಲಹ ಏರ್ಪಟ್ಟಿದೆ. ಬಳಿಕ ಅದು ತಾರಕಕ್ಕೇರಿ ರಮೇಶ್ ಮುದ್ದೆಕೋಲಿನಿಂದ ತನ್ನ ತಂದೆಯಾದ ಲೋಕೇಶಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ಲೋಕೇಶಪ್ಪ ಅವರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯಾದ ರಮೇಶ್ ನನ್ನು ಬಂಧಿಸಿದ್ದಾರೆ.
•ಸೊರಬ: ಸಿಡಿಲಿಗೆ 8 ಕುರಿಗಳ ಸಾವು
ಸೊರಬ: ತೀವ್ರವಾಗಿ ಸುರಿದ ಮಳೆ ಮತ್ತು ಸಿಡಿಲಿನ ಆರ್ಭಟಕ್ಕೆ 8 ಕುರಿಗಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳವಿ ಹೋಬಳಿಯ ಕಾನಹಳ್ಳಿಯಲ್ಲಿನ ಶೆಡ್ ನಲ್ಲಿ ನಡೆದಿದೆ. ಮಾಲೀಕ ನೋಡಿದಾಗ ಕುರಿಗಳು ಸಿಡಿಲಿನ ಬಡಿತಕ್ಕೆ ಸಿಲುಕಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಸಂಬಂಧಪಟ್ಟ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಇಲಾಖೆಯ ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿದ್ದು, ಬಳಿಕ ವೈದ್ಯರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು.
•ಭದ್ರಾವತಿ: ವಿಐಎಸ್ಎಲ್ ಡಿಜಿಎಂ ಗೋವಿಂದರಾಜು ಆತ್ಮಹತ್ಯೆ
ಭದ್ರಾವತಿ: ಕಳೆದ 1೦ ರಿಂದ 12 ವರ್ಷಗಳಿಂದ ಇಲ್ಲಿನ ವಿಐಎಸ್ಎಲ್ ಕಾರ್ಖಾನೆಯಲ್ಲಿ ಡಿಜಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದ ಗೋವಿಂದರಾಜು ಎನ್ನುವವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಸೇಲಂ ಮೂಲದ ಗೋವಿಂದರಾಜು ಅವರು ಭಾನುವಾರದಂದು ಮಧ್ಯಾಹ್ನ ತಮ್ಮ ಪತ್ನಿಯನ್ನು ರೈಲಿಗೆ ಕಳುಹಿಸಿದ್ದು, ಬಳಿಕ ರಾತ್ರಿಯ ಹೊತ್ತು ಮನೆಗೆ ಹಿಂತಿರುಗಿದ್ದಾರೆ ಎನ್ನಲಾಗಿದೆ. ಸೋಮವಾರದಂದು ಬೆಳಿಗ್ಗೆ ತಮ್ಮ ಸ್ನೇಹಿತರಿಗೆ ಸಂದೇಶವನ್ನು ಕಳುಹಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಅವರು ಕಾರ್ಖಾನೆಗೆ ತೆರಳಿ ಕೆಲವು ಕಡತಗಳಿಗೆ ಸಹಿ ಹಾಕಬೇಕಾದ ಅಗತ್ಯ ಇದ್ದುದರಿಂದ ಅಧಿಕಾರಿಗಳು ಗೋವಿಂದರಾಜು ಅವರಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ, ಎಷ್ಟೇ ಬಾರಿ ಕರೆ ಮಾಡಿದರೂ ಗೋವಿಂದರಾಜು ಅವರು ಪ್ರತಿಕ್ರಿಯಿಸದಿದ್ದಾಗ ಸಹೋದ್ಯೋಗಿಗಳಿಗೆ ಅನುಮಾನ ಉಂಟಾಗಿದ್ದು, ಮನೆಗೆ ಬಂದು ಬಾಗಿಲು ತಟ್ಟಿದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ನಂತರ ಕಾರ್ಖಾನೆಯ ಅಧಿಕಾರಿಗಳು ಮನೆಯ ಬಾಗಿಲನ್ನು ತೆರೆದು ನೋಡಿದಾಗ, ಗೋವಿಂದರಾಜು ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
•ಶಿವಮೊಗ್ಗ: ಕೊಲೆ ಪ್ರಕರಣ; ಆರೋಪಿ ಬಂಧನ
ಶಿವಮೊಗ್ಗ: ಅಕ್ಟೋಬರ್ 3ರ ಶನಿವಾರದಂದು ಅಣ್ಣಾನಗರ ಚಾನೆಲ್ ಏರಿ ರಸ್ತೆಯಲ್ಲಿ ನಡೆದಂತಹ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂದು ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿ, ಬಳಿಕ ಶವವನ್ನು ರಸ್ತೆ ಬದಿಯಲ್ಲಿ ಹಾಕಿ ಹೋಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಕಾರ್ಯಾಚರಣೆಯನ್ನು ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಅಶೋಕನಗರದ ಮೂರನೇ ತಿರುವಿನ ನಿವಾಸಿಯಾಗಿರುವ ಮತ್ತು ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಮೊಹಮ್ಮದ್ ಅಲಿ ಎಂದು ಗುರುತಿಸಲಾಗಿದ್ದು, ಸೋಮವಾರದಂದು ಆತನನ್ನು ಬಂಧಿಸಿದ ಬಳಿಕ ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನು ಮತ್ತು ಕೊಲೆಯ ಬಳಿಕ ಪರಾರಿಯಾಗಲು ಉಪಯೋಗಿಸಿದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು: ಟೈರ್ ಸ್ಫೋಟ: ಕೆರೆಗೆ ಬಿದ್ದ ಕಾರು..!
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಕೋಟೆಕೆರೆ ಬಳಿ ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆರೆಗೆ ಬಿದ್ದಿದೆ.
ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಬಳಿಕ ಕಾರು ಕೆರೆಯ ತಡೆಬೇಲಿಯನ್ನು ಮುರಿದು ಕೆರೆಗೆ ಉರುಳಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆತ್ತಿದ್ದಾರೆ.







