ನವದೆಹಲಿ: ಇನ್ನು ಮುಂದೆ ವಾರಕ್ಕೆ ಐದು ದಿನ ಮಾತ್ರ ಎಲ್ಲಾ ಬ್ಯಾಂಕ್ ಗಳು ಕಾರ್ಯ ನಿರ್ವಹಿಸಲಿದ್ದು, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರದ ಬದಲು ಪ್ರತಿ ಶನಿವಾರ ರಜೆ ಇರುತ್ತದೆ, ಹಾಗಾಗಿ ಸೋಮವಾರದಿಂದ ಶುಕ್ರವಾರ ಸಂಜೆ 5:೦0ಗಂಟೆಯ ಒಳಗಾಗಿ ತಮ್ಮ ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳಬೇಕು ಎನ್ನುವಂತಹ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.
ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯು ಹೊರಡಿಸಿದೆ ಎನ್ನಲಾಗಿರುವಂತಹ ಗೆಜೆಟ್ ಅಧಿಸೂಚನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದೇ ಇದಕ್ಕೆ ಮೂಲ ಕಾರಣವಾಗಿದೆ. ಅಲ್ಲದೆ ಆ ಅಧಿಸೂಚನೆಯ ಪ್ರಕಾರ ಕೇಂದ್ರ ಸರ್ಕಾರವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯಕ್ಕೆ ಸಂಬಂಧಿಸಿದಂತಹ ಬ್ಯಾಂಕ್ ಗಳಿಗೆ ಪ್ರತಿ ಶನಿವಾರ ಸಾರ್ವಜನಿಕ ರಜೆಯನ್ನು ಘೋಷಿಸಿದೆ ಎನ್ನುವಂತಹ ಬರಹವನ್ನು ಕೂಡ ಅಳವಡಿಸಿದೆ. ಆದರೆ ಇದು ನಿಜವಲ್ಲ, ಇಂತಹ ಯಾವುದೇ ಅಧಿಸೂಚನೆಯನ್ನೂ ಹಣಕಾಸು ಸಚಿವಾಲಯವು ಹೊರಡಿಸಿಲ್ಲ. ಹಾಗಾಗಿ ವಾರಕ್ಕೆ ಐದು ದಿನ ಮಾತ್ರ ಬ್ಯಾಂಕ್ ಗಳು ಸೇವೆಯನ್ನು ನೀಡಬೇಕು ಎನ್ನುವ ಪ್ರಸ್ತಾಪ ಇನ್ನೂ ಚರ್ಚೆಯ ಹಂತದಲ್ಲಿದೆ ಎನ್ನುವುದನ್ನು ಅಧಿಕೃತ ಮೂಲಗಳು ಸಾರ್ವಜನಿಕರಿಗೆ ಸ್ಪಷ್ಟಪಡಿಸಿದೆ.
ಸಧ್ಯಕ್ಕೆ ಎಂದಿನಂತೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಮಾತ್ರ ಬ್ಯಾಂಕ್ ಗಳಿಗೆ ರಜೆ ಮುಂದುವರಿಯಲಿದ್ದು, ಉಳಿದ ಶನಿವಾರಗಳಂದು ಬ್ಯಾಂಕ್ ಗಳು ಕಾರ್ಯನಿರ್ವಹಿಸಲಿದೆ ಎನ್ನುವುದು ತಿಳಿದುಬಂದಿದೆ. ಹೀಗಾಗಿ ಗ್ರಾಹಕರು ತಮ್ಮ ಬ್ಯಾಂಕ್ ಕೆಲಸಗಳಿಗೆ ಸಂಬಂಧಿಸಿದಂತೆ ಶಾಖೆಗಳಿಗೆ ಹೋಗುವ ಮೊದಲು ಈ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಚಿತ್ರಗಳು ಮತ್ತು ತಪ್ಪು ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಈ ಮೂಲಕ ಕೋರಲಾಗಿದೆ.







