ಬೆಳ್ತಂಗಡಿ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ, ಸೋಮವಾರದಂದು ಗಣೇಶ ಚತುರ್ಥಿ ಹಬ್ಬದಂದು ನೇತ್ರಾವತಿಯ ಸರ್ವಿಸ್ ಸ್ಟೇಷನ್ ತಿರುವಿನಲ್ಲಿ ಸಂಭವಿಸಿದೆ. ಧರ್ಮಸ್ಥಳದಿಂದ ಉಜಿರೆಯತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕೋಲಾರ ಜಿಲ್ಲೆಯಿಂದ ನಾಲ್ಕು ಸದಸ್ಯರನ್ನು ಒಳಗೊಂಡ ಕುಟುಂಬವು ಟೊಯೊಟಾ ಈಟಿಯಾಸ್ ಕಾರಿನಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿ ಬಳಿಕ ಉಜಿರೆಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮವಾಗಿ ಕಾರು ಚಾಲಕ ಶಶಿಕುಮಾರ್ ಸಹಿತ ಮೂವರು ಪ್ರಯಾಣಿಕರ ಕಾಲು ಮತ್ತು ಕೈಗಳಿಗೆ ಗಾಯವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದರು ಎನ್ನುವ ಸಂಗತಿ ತಿಳಿದುಬಂದಿದೆ.
•ಉಡುಪಿ: ಶಾಲಾ ಮಕ್ಕಳಿಗೆ ಕಳಪೆ ಆಹಾರ, ಹಳಸಿದ ಮೊಟ್ಟೆ, ಕಸ ಸೇರಿದ ಬೇಳೆ
ಉಡುಪಿ: ಜಿಲ್ಲೆಯ ಹಲವಾರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿರುವ ಮೊಟ್ಟೆ, ಅಕ್ಕಿ ಮತ್ತು ಬೇಳೆಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಪೌಷ್ಟಿಕಾಂಶದ ಕಾರಣಕ್ಕಾಗಿ ಮಕ್ಕಳಿಗೆ ನೀಡಲಾಗುತ್ತಿರುವ ಮೊಟ್ಟೆ ಹಳಸಿದ್ದು, ಅದು ಮಕ್ಕಳ ಹೊಟ್ಟೆಯನ್ನು ಸೇರಿ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತಿದೆ ಎನ್ನುವಂತಹ ಆತಂಕಕಾರಿ ಮಾಹಿತಿ ಲಭಿಸಿದೆ. ಅಲ್ಲದೆ ಸರ್ಕಾರಿ ಶಾಲೆಗಳಿಗೆ ಮೊಟ್ಟೆಗಳನ್ನು ವಿತರಿಸುವ ಹೊಣೆಯನ್ನು ಹೊತ್ತಿರುವಂತಹ ಹೋಲ್ ಸೇಲ್ ವಿತರಕರಿಂದಲೇ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಎದ್ದಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಉಡುಪಿಯ ನಿಸಾರ್ ಎನ್ನುವ ಹೋಲ್ ಸೇಲ್ ಮೊಟ್ಟೆ ವ್ಯಾಪಾರಿಗೆ ಸರ್ಕಾರಿ ಶಾಲೆಗಳಿಗೆ ಮೊಟ್ಟೆಯನ್ನು ವಿತರಿಸುವ ಟೆಂಡರ್ ಅನ್ನು ನೀಡಲಾಗಿದ್ದು, ಅವರಿಂದಲೇ ಕಳಪೆ ಮೊಟ್ಟೆಗಳು ವಿತರಣೆಯಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದೆ. ಕೇವಲ ಮೊಟ್ಟೆಯಷ್ಟೇ ಅಲ್ಲದೆ ಅಕ್ಕಿ ಮತ್ತು ಬೇಳೆಗಳಲ್ಲೂ ಸಹ ಕಸ ಕಂಡುಬಂದಿದೆ ಎನ್ನಲಾಗಿದೆ. ಹಳಸಿದ ಮೊಟ್ಟೆಯನ್ನು ಸೇವಿಸಿ ಸಮಸ್ಯೆಯನ್ನು ಎದುರಿಸಿದ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ಈ ಸಂದರ್ಭದಲ್ಲಿ ತನ್ನ ಕಹಿ ಅನುಭವವನ್ನು ಹಂಚಿಕೊಂಡಿದ್ದಾನೆ. ಮಕ್ಕಳಿಗೆ ನೀಡುವ ಆಹಾರದಲ್ಲೇ ಇಂತಹ ಸಮಸ್ಯೆ ಕಂಡುಬಂದಿದೆ ಎಂದರೆ ಸಾಮಾನ್ಯವಾಗಿ ಮಾರಾಟ ಮಾಡುವ ಆಹಾರ ಪದಾರ್ಥಗಳ ಕಥೆ ಏನು ಎನ್ನುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ಸೂಕ್ತ ಕ್ರಮವನ್ನು ಕೈಗೊಂಡಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಇದರೊಂದಿಗೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರಿ ಶಾಲಾ ಮಕ್ಕಳಿಗೆ ಆಹಾರ ನೀಡುವ ಯೋಜನೆಯಲ್ಲೇ ಗುಣಮಟ್ಟದ ಲೋಪ ಕಂಡುಬಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಮೊಟ್ಟೆ, ಅಕ್ಕಿ ಮತ್ತು ಬೇಳೆಗಳನ್ನು ವಿತರಿಸುವಾಗ ಗುಣಮಟ್ಟವನ್ನು ಪರಿಶೀಲಿಸಬೇಕು ಮತ್ತು ಕಳಪೆ ಗುಣಮಟ್ಟದ ಪದಾರ್ಥಗಳನ್ನು ವಿತರಿಸಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಜಿಲ್ಲಾಡಳಿತ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಆಗ್ರಹ ಪಡಿಸಿದ್ದಾರೆ.
•ಕಾರ್ಕಳ: ಅಧಿಕ ಮೌಲ್ಯದ ಮರಗಳ ಕಳ್ಳತನಕ್ಕೆ ಯತ್ನ
ಕಾರ್ಕಳ: ಅಕ್ರಮವಾಗಿ ಮರಗಳನ್ನು ಕಡಿದು ಸಾಗಿಸಲು ಪ್ರಯತ್ನಿಸಿದ ಘಟನೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮುಟ್ಲುಪಾಡಿ ಪಡು ದರ್ಖಾಸು ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಿರಾಳು ಬೋಗಿ ಮತ್ತು ಹೆಬ್ಬಲಸು ಸೇರಿದಂತೆ 9ಕ್ಕೂ ಹೆಚ್ಚಿನ ಬೃಹತ್ ಗಾತ್ರದ ಮರಗಳನ್ನು ಕಡಿದು ಹಾಕಿದ್ದು, ಸುಮಾರು 10ಲಕ್ಷ ರೂಪಾಯಿಗಳಷ್ಟು ಬೆಲೆ ಬಾಳುತ್ತದೆ ಎನ್ನಲಾಗಿದೆ. ಕತ್ತರಿಸಿದ ಮರಗಳನ್ನು ಕ್ರೇನ್ ಮೂಲಕ ಆರೋಪಿಗಳು ಸಾಗಿಸಲು ಪ್ರಯತ್ನ ನಡೆಸಿದ್ದರು ಎನ್ನುವ ಮಾಹಿತಿ ಲಭಿಸಿದೆ. ಅಕ್ರಮ ಚಟುವಟಿಕೆಯ ವಿರುದ್ಧ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದಾಗ ಆರೋಪಿಗಳು ಕಡಿದ ಮರಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಮರಗಳನ್ನು ಕಡಿದ ಸ್ಥಳವು ಆ್ಯಂಟಿ ಪೋಚಿಂಗ್ ಕ್ಯಾಂಪ್ ನಿಂದ 50 ಮೀಟರ್ ದೂರದಲ್ಲಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿ, ಮರದ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಾರ್ಕಳ ವಲಯ ಅರಣ್ಯಾಧಿಕಾರಿ ಅರುಣ್ ಅವರು “ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೃತ್ಯಕ್ಕೆ ಬಳಸಿದ ಲಾರಿ ಮತ್ತು ಕ್ರೇನ್ ಗಳ ಕುರಿತು ಈಗಾಗಲೇ ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ. ಪ್ರಕರಣವನ್ನು ದಾಖಲಿಸಿಕೊಂಡು, ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.







