ಖಾಸಗಿ ಆಸ್ಪತ್ರೆ ಚಿಕಿತ್ಸಾ ದರ ಪಟ್ಟಿ ಬೋರ್ಡ್ ಅಳವಡಿಕೆ ಕಡ್ಡಾಯ!
– ರಾಜ್ಯ ಸರ್ಕಾರ ಮಹತ್ವದ ಆದೇಶ: ಎಲ್ಲಾ ಆಸ್ಪತ್ರೆಗಳಿಗೆ ಆದೇಶ
– ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಉದ್ದೇಶ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿನ ಖಾಸಗಿ ಆಸ್ಪತ್ರೆಗಳು ರೋಗಿಗಳ ಸುಲಿಗೆಗೆ ಇಳಿದಿವೆ. ತಮಗೆ ಇಷ್ಟ ಬಂದಂತೆ ಚಿಕಿತ್ಸಾ ದರವನ್ನು ವಿಧಿಸುತ್ತಿವೆ ಎಂಬುದಾಗಿ ಸಾರ್ವಜನಿಕರಿಂದ ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು. ಈ ದೂರುಗಳ ಬೆನ್ನಲ್ಲೇ ಇನ್ಮುಂದೆ ರಾಜ್ಯಾಧ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಬೋರ್ಡ್ ಅಳವಡಿಸೋದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಮಾಡಿದೆ. ರಾಜ್ಯದಲ್ಲಿ ಖಾಸಗೀ ಆಸ್ಪತ್ರೆಗಳಲ್ಲಿ ಅವರದ್ದೇ ದರ್ಬಾರ್. ತಮಗೆ ಇಷ್ಟಬಂದಂತೆ ರೋಗಿಗಳಿಗೆ ಚಿಕಿತ್ಸೆಯ ದರವನ್ನು ವಿಧಿಸಲಾಗುತ್ತಿವೆ. ಈ ದರಪಟ್ಟಿಯಿಂದಾಗಿ ರಾಜ್ಯದಲ್ಲಿನ ಜನರು ಸುಲಿಗೆಗೆ ಒಳಗಾಗಿದ್ದು, ಬಡವರು, ಮಧ್ಯಮ ವರ್ಗದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಎಂಬುದೇ ಸಿಂಹಸ್ವಪ್ನವಾದಂತೆ ಆಗಿದೆ ಎನ್ನಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ, ಆರೋಗ್ಯ ಇಲಾಖೆಗೆ ಸಾರ್ವಜನಿಕರು ವಿವಿಧ ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರು ಸಲ್ಲಿಸಲಾಗಿತ್ತು. ಈ ದೂರಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಚಿಕಿತ್ಸಾ ದರಪಟ್ಟಿ ಬೋರ್ಡ್ ಹಾಕುವುದನ್ನು ಕಡ್ಡಾಯಗೊಳಿಸುವಂತೆ ಆದೇಶ ಹೊರಡಿಸಲು ಆರೋಗ್ಯ ಇಲಾಖೆಗೆ ಸೂಚಿಸಿದ್ದರು. ಆರೋಗ್ಯ ಸಚಿವರ ಸೂಚನೆಯಂತೆ ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸಾ ದರಪಟ್ಟಿಯ ಬೋರ್ಡ್ ಅಳವಡಿಸುವಂತೆ ಖಡಕ್ ಸೂಚನೆಯನ್ನು ಹೊರಡಿಸಿದೆ. ಒಂದು ವೇಳೆ ಈ ನಿಯಮವನ್ನು ಪಾಲಿಸದೇ ಇದ್ದರೇ, ಅಂತಹ ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದೆ.