ಯುಪಿಐ ಹೊಸ ನಿಯಮ: ಮೇ 1ರಿಂದ ಜಾರಿ!
– 10 ಸಾವಿರ ವರ್ಗಾವಣೆಗೆ 1 ಗಂಟೆ ಕಾಯಬೇಕು
– ಸೈಬರ್ ಕಳ್ಳರ ಹ್ಯಾಕ್ ತಡೆಯಲು ಸರ್ಕಾರದ ಪ್ಲಾನ್!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಯುಪಿಐ ಗೆ ಸಂಬಂಧಿಸಿದಂತೆ ಮೇ ಒಂದರಿಂದ ಹೊಸ ನಿಯಮವೊಂದು ಜಾರಿಯಾಗಲಿದ್ದು, ಪರಿಣಾಮವಾಗಿ 10.000 ರೂಪಾಯಿ ವರ್ಗಾವಣೆ ಮಾಡಲು ಒಂದು ಗಂಟೆ ಕಾಯಬೇಕಾದ ಅನಿವಾರ್ಯತೆ ಎದುರಾಗಲಿದೆ. ಹಣದ ವರ್ಗಾವಣೆಯಲ್ಲಿನ ವಂಚನೆ ತಡೆಯುವ ನಿಟ್ಟಿನಲ್ಲಿ ಆರ್ಬಿಐ ಈ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಣದ ವರ್ಗಾವಣೆ, ಪಾವತಿ ಸೇರಿದಂತೆ ಬಹುತೇಕ ಆರ್ಥಿಕ ವಹಿವಾಟುಗಳು ಡಿಜಿಟಲ್ ಮೂಲಕವೇ ಅತಿ ಹೆಚ್ಚು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಅದರಲ್ಲೂ ಯುಪಿಐ ಮೂಲಕವೇ ಹೆಚ್ಚಿನ ವಹಿವಾಟು ನಡೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ವಂಚನೆಗಳ ಸಂಖ್ಯೆಯೂ ಕೂಡ ಹೆಚ್ಚಳವಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಕಾರಣಕ್ಕಾಗಿ ಆರ್ಬಿಐ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರುತ್ತಿದ್ದು,10.000 ರೂಪಾಯಿಗಳನ್ನು ಮತ್ತೊಂದು ಮೊಬೈಲ್ ಸಂಖ್ಯೆಗೆ ಅಥವಾ ಖಾತೆಗೆ ವರ್ಗಾವಣೆ ಮಾಡಬೇಕಾದರೆ ಒಂದು ಗಂಟೆ ಕಾಯಬೇಕಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೇ ಒಂದರಿಂದ ಯುಪಿಐ ನಿಯಮದಲ್ಲಿ ಭಾರಿ ಬದಲಾವಣೆ ಉಂಟಾಗುತ್ತಿದ್ದು, ಹೊಸ ವ್ಯಕ್ತಿಗಳಿಗೆ 10.000 ರೂಪಾಯಿಗಳಿಗಿಂತ ಹೆಚ್ಚಿನ ಪ್ರಮಾಣದ ಹಣವನ್ನು ವರ್ಗಾವಣೆ ಮಾಡಲು ಒಂದು ಗಂಟೆಗೂ ಹೆಚ್ಚು ಸಮಯ ಕಾಯಬೇಕಿದೆ.
ಸೈಬರ್ ಕಳ್ಳರ ಹ್ಯಾಕ್ ತಡೆಯಲು ಸರ್ಕಾರದ ಪ್ಲಾನ್!
ಸೈಬರ್ ಕಳ್ಳರು ಹ್ಯಾಕ್ ಮಾಡಿ ಅಥವಾ ಇನ್ನು ಯಾವುದೇ ರೀತಿಯ ಮಾರ್ಗದಲ್ಲಿ ಹಣವನ್ನು ಕ್ಷಣಾರ್ಧದಲ್ಲಿ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಇದನ್ನು ನಿಯಂತ್ರಿಸುವ ಸಲುವಾಗಿ ಒಂದು ಗಂಟೆ ಕಾಯಬೇಕಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ. ಒಂದು ಗಂಟೆ ಅವಧಿಯಲ್ಲಿ ವರ್ಗಾವಣೆ ಮಾಡಿರುವ ಹಣವು ಬ್ಯಾಂಕ್ ಸೆಂಟ್ರಲ್ ಸಿಸ್ಟಮ್ ನಲ್ಲಿ ಇರುತ್ತದೆ. ಒಂದು ಗಂಟೆಯ ಬಳಿಕ ಹಣವು ಹೊಸ ವ್ಯಕ್ತಿಗಳ ಖಾತೆಗೆ ಜಮೆಯಾಗಲಿದೆ. ಒಂದು ವೇಳೆ ಅನುಮಾನ ಬಂದಲ್ಲಿ ಹಣವು ಜಮೆಯಾಗುವ ಮೊದಲೇ, ಅಂದರೆ ಈ ಒಂದು ಗಂಟೆಯ ನಡುವೆ ಮೂಲ ಖಾತೆಗೆ ಹಣ ಹಿಂಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಅಂದರೆ ಹಣವು ಪಡೆಯುವವರ ಕೈಗೆ ಸೇರುವ ಮೊದಲೇ ಒಂದು ಗಂಟೆಗಳ ಕಾಲ ಅತಂತ್ರವಾಗಿ ಮಧ್ಯದಲ್ಲೇ ನಿಂತಿರುತ್ತದೆ.
ಆಗ ನಾವು ಹಣವನ್ನು ಹಿಂದಕ್ಕೆ ತೆಗೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಆರ್ ಬಿಐ ಡಿಲೇ ರೂಲ್ಸ್ ತರಲಾಗುತ್ತದೆ. ಈ ನಿಯಮವು ಮರ್ಚೆಂಟ್ ಪೇಮೆಂಟ್ಸ್ ಗಳಿಗೆ, ರಿಕರಿಂಗ್ ಪೇಮೆಂಟ್ಸ್, ಮೆಡಿಕಲ್ ಪೇಮೆಂಟ್ಸ್ ಗಳಿಗೆ ಅನ್ವಯವಾಗುವುದಿಲ್ಲ. ಜೊತೆಗೆ ಈಗಾಗಲೇ ಹಣ ವರ್ಗಾವಣೆ ಮಾಡುತ್ತಿರುವ ಕಾಂಟ್ಯಾಕ್ಟ್ ನಂಬರ್ ಅಥವಾ ಖಾತೆಗಳಿಗೆ ಅನ್ವಯವಾಗುವುದಿಲ್ಲ. ಇದು ಕೇವಲ ಹೊಸಬರಿಗೆ ಹಣ ವರ್ಗಾವಣೆ ಮಾಡುವಾಗ ಮಾತ್ರ ಅನ್ವಯಿಸುತ್ತದೆ. 2021ರಲ್ಲಿ 2.6 ಲಕ್ಷ ಡಿಜಿಟಲ್ ಪೇಮೆಂಟ್ ವಂಚನೆ ಪ್ರಕರಣ, 2025ರಲ್ಲಿ 28ಲಕ್ಷ ಪ್ರಕರಣ ದಾಖಲಾಗಿದ್ದು, 2025ರಲ್ಲಿ ಸೈಬರ್ ವಂಚಕರು ಲಪಟಾಯಿಸಿರುವ ಒಟ್ಟು ಮೊತ್ತ 22.931 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಇದೆಲ್ಲದಕ್ಕೂ ಕಡಿವಾಣ ಹಾಕುವ ಸಲುವಾಗಿ ಆರ್ಬಿಐ ಈ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ.








