ಛೇ.. ನೀಚ ತಾಯಿ ತಂದೆ ಹೀಗೂ ಇದ್ದಾರೆ!
– ರೀಲ್ಸ್ ಮಾಡಲು ಐಫೋನ್ ಖರೀದಿಸಲು ಮಗುವನ್ನೇ ಮಾರಿದ ತಂದೆ ತಾಯಿ!
– ಮೊಬೈಲ್ ಬಿಟ್ಟು ಚೆನ್ನಾಗಿ ಓದು ಎಂದಿದ್ದಕ್ಕೆ ನದಿಗೆ ಹಾರಿದಳು!
– ಗೋಡೆಗಳ ಮೇಲೆ ಅಶ್ಲೀಲ ಬರಹ: ಆರೋಪಿ ಪಾಗಲ್ ಪ್ರೇಮಿಯ ಬಂಧನ!
NAMMUR EXPRESS NEWS
ಮೊಬೈಲ್, ಸಾಮಾಜಿಕ ಜಾಲ ತಾಣದ ಹುಚ್ಚು ಇಡೀ ಬದುಕನ್ನೇ ನಾಶ ಮಾಡುತ್ತಿದೆ. ಈ ನಡುವೆ ತಂದೆ ತಾಯಿ ಮೊಬೈಲ್ ಖರೀದಿ ಮಾಡಲು ಮಗುವನ್ನೇ ಮಾರಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ
( Reels ) ರೀಲ್ಸ್ ಹುಚ್ಚಿಗೆ ಬಿದ್ದಿದ್ದ ದಂಪತಿ, ಐಫೋನ್ 14 ಪ್ರೋ ಖರೀದಿಸಲು ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಪೊಲೀಸರು ತಾಯಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿ ತಂದೆ ಜಯದೇವ್ ಘೋಷ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಪೊಲೀಸ್ ಅಧಿಕಾರಿಗಳು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ. 8 ತಿಂಗಳ ಮಗು ನಾಪತ್ತೆಯಾಗಿ ದಿನಗಳು ಕಳೆದರೂ ದಂಪತಿಗಳು ಆರಾಮವಾಗಿದ್ದರು. ಇವರ ವಿಚಿತ್ರ ನಡವಳಿಕೆ ಕಂಡು ನೆರೆಹೊರೆಯವರಿಗೆ ಸಂಶಯ ಬಂದಿದೆ. ಅಲ್ಲದೆ, ಆರ್ಥಿಕ ಸಂಕಷ್ಟದಲ್ಲಿದ್ದ ಅವರ ಬಳಿ ಏಕಾಏಕಿ ಲಕ್ಷ ಬೆಲೆಯ ಫೋನ್ ಕಂಡು ಅನುಮಾನ ಇನ್ನೂ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ತಾಯಿಯನ್ನು ವಿಚಾರಿಸಿದಾಗ ಐಫೋನ್ ಖರೀದಿಸಲು ತಮ್ಮ ಮಗುವನ್ನು ಪತಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಇನ್ನೂ ಆಘಾತಕಾರಿ ಸಂಗತಿಯೆಂದರೆ, ತಮ್ಮ ಸಣ್ಣ ಮಗುವನ್ನು ಮಾರಾಟ ಮಾಡುವ ಮೊದಲು, ದಂಪತಿ ತನ್ನ ಏಳು ವರ್ಷದ ಮಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ದಂಪತಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದು, ಮಗುವನ್ನು ಖರೀದಿಸಿದ ಮಹಿಳೆ ವಿರುದ್ಧವೂ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಗೋಡೆಗಳ ಮೇಲೆ ಅಶ್ಲೀಲ ಬರಹ: ಪಾಗಲ್ ಪ್ರೇಮಿ ಬಂಧನ!
ಕಿರಾತಕ ಸಿನಿಮಾದ ಸ್ಟೈಲ್ನಲ್ಲಿ ಹುಡಗಿಯನ್ನು ಪಟಾಯಿಸಲು ಹೋಗಿದ್ದ ಪಾಗಲ್ ಪ್ರೇಮಿಯನ್ನು ಇದೀಗ ಬಂಧಿಸಲಾಗಿದೆ. ಕೊಪ್ಪಳದ ಕನಕಗಿರಿಯ ಶಾಲಾ ಕಾಲೇಜಿನ ಗೋಡೆಗಳ ಮೇಲಿನ ಅಶ್ಲೀಲ ಬರಹಗಾರ ಮಹಿಬೂಬ ಸಿಕ್ಕಲಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಅಂದ ಹಾಗೆ ಈತ, ಗೋಡೆಗಳ ಮೇಲೆ ಅಶ್ಲೀಲ ಬರಹ ಬರೆಯುವುದಕ್ಕೂ ಮಹತ್ತರ ಕಾರಣವಿದೆ. ಈತ ಅಪ್ರಾಪ್ತಳ ಹಿಂದೆ ಪ್ರೀತ್ಸೆ ಪ್ರೀತ್ಸೆ ಎಂದು ಬಿದ್ದಿದ್ದ. ಆದರೆ ಹುಡುಗಿ ಅವಾಯ್ಡ್ ಮಾಡುತ್ತಿದ್ದಳು ಎಂದು ಆತ ಗೋಡೆ ಮೇಲೆ ಅಶ್ಲೀಲವಾಗಿ ಹೆಸರು ಗೀಚುತ್ತಿದ್ದನಂತೆ! ಶಾಲಾ ಕಾಲೇಜುಗಳ ಗೋಡೆಗಳಿಗಷ್ಟೇ ನಿಲ್ಲದ ಈತನ ಆಟಾಟೋಪ, ಫೇಕ್ ಇನ್ಸ್ಟಾಗ್ರಾಮ್ ಅಕೌಂಟ್ ಮಾಡಿ ಪೋಸ್ಟ್ ಕೂಡ ಮಾಡುತ್ತಿದ್ದ! ಈತನ ಬರಹಕ್ಕೆ ಅಂಜುತ್ತಿದ್ದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲು ಹಿಂಜರಿಯುತ್ತಿದ್ದರು! ಇತ್ತಿಚೆಗೆ ಶಾಲಾ ಗೋಡೆ ಬರಹದ ಪ್ರಕರಣ ಗಂಭೀರ ಸ್ವರೂಪ ಕೂಡ ಪಡೆದಿತ್ತು. ಈ ಕಿರಾತಕ 1 ವರ್ಷದಿಂದ ಪೊಲೀಸರಿಗೆ ತಲೆನೋವಾಗಿದ್ದು ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಮೊಬೈಲ್ ಬಿಟ್ಟು ಚೆನ್ನಾಗಿ ಓದು ಎಂದಿದ್ದಕ್ಕೆ ನದಿಗೆ ಹಾರಿದಳು!
ಆತ್ಮಹತ್ಯೆಗೆ ಶರಣಾದ ಬಾಲಕಿಯನ್ನು ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆಯ ವಿಜಯ್ ಕುಮಾರ್ ಹಾಗೂ ಭವ್ಯ ದಂಪತಿಯ ಪುತ್ರಿ 15 ವರ್ಷದ ಬಾಲಕಿ ವಿದ್ಯಾಶ್ರೀ ಎಂದು ತಿಳಿದು ಬಂದಿದೆ. ವಿದ್ಯಾಶ್ರೀ ನಗರದ ಖಾಸಗಿ ಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಗೊತ್ತಾಗಿದೆ. ಯಾವಾಗಲೂ ಮೊಬೈಲ್ನಲ್ಲಿ ಆಟವಾಡುತ್ತ ಸರಿಯಾಗಿ ಅಭ್ಯಾಸದ ಕಡೆ ಗಮನಕೊಡದ ಮಗಳನ್ನು ಕಂಡು ಅವಳ ತಾಯಿ ಮಗಳಿಗೆ ಗುರುವಾರ ಬುದ್ದಿಮಾತು ಹೇಳಿದ್ದಾರೆ. ಇಷ್ಟಕ್ಕೆ ಮನನೊಂದ ಬಾಲಕ ವಿದ್ಯಾಶ್ರೀ ಸಮೀಪದ ಉತ್ತರ ಪಿನಾಕಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧ ಸ್ಥಳಕ್ಕೆ ಗೌರಿಬಿದನೂರು ಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!

HOW TO APPLY : NEET-UG COUNSELLING 2023







