ರಾಮೇಶ್ವರ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ..!
– 9 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ: ದೇಗುಲದಲ್ಲಿ ವಿಶೇಷ ಅಲಂಕಾರ
– ಕುಶಾವತಿ ಪಾರ್ಕ್ ಅಲ್ಲಿ ಸ್ವಚ್ಛತೆ: ಸರ್ವರಿಗೂ ಸ್ವಾಗತ
– ಇದೇ ಮೊದಲ ಬಾರಿಗೆ ಯುವ, ಮಹಿಳಾ ದಸರಾಗೆ ಸಜ್ಜು
NAMMUR EXPRESS NEWS
ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ತೀರ್ಥರಾಜಪುರದ ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅನಾದಿಕಾಲದಿಂದಲೂ ಸಹ ವಿಶೇಷವಾದಂತಹ ನವರಾತ್ರಿ ಉತ್ಸವವನ್ನು ಹಾಗೂ ವಿಜಯ ದಶಮಿ ದಿನದಂದು ವೈಭವದ ದಸರಾ ಮೆರವಣಿಗೆ ಉತ್ಸವ ಮೂರ್ತಿಯ ಸಲುವಾಗಿ ದಸರಾ ಮೆರವಣಿಗೆ ಮಾಡಲು ಆಯೋಜನೆ ಮಾಡಲಾಗಿದೆ.
ಶ್ರೀ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಸಂಜೆ 6 ಗಂಟೆಯಿಂದ ಅಮ್ಮನವರ ಇತ್ಯರ್ಥವಾಗಿ ಸಪ್ತಶತಿ ಪಾರಾಯಣ ಕುಂಕುಮಾರ್ಚನೆ ಇತ್ಯಾದಿ ಸೇವೆಗಳು ವಿಶೇಷವಾಗಿ ನಡೆಯುತ್ತದೆ. ಒಂಬತ್ತು ದಿನಗಳ ಕಾಲ ಈ ಎಲ್ಲಾ ಕಾರ್ಯಕ್ರಮದ ನಂತರ ವಿಜಯದಶಮಿಯ ದಿನದಂದು ದುರ್ಗಾ ಹೋಮ ಭಗವತಿಗೆ ಅತ್ಯಂತ ಪ್ರಿಯವಾದ ಪರಮಾನ್ನವನ್ನು ಅಗ್ನಿಪೂರಕವಾಗಿ ಆಹುತಿ ಕೊಟ್ಟು ಸಂತುಷ್ಟವಾದ ವಿಶೇಷವಾದ ದುರ್ಗಾ ಹೋಮವನ್ನು ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಸಹ ಈ ವರ್ಷ ಭಕ್ತಾದಿಗಳು ಹಾಗೂ ವ್ಯವಸ್ಥಾಪನ ಸಮಿತಿ, ದಸರಾ ಉತ್ಸವ ಸಮಿತಿಯ ವತಿಯಿಂದ ವಿಶಿಷ್ಟವಾದ ರೀತಿಯಲ್ಲಿ ಆಚರಣೆ ಮಾಡಬೇಕೆಂದು ಈ ಕಾರ್ಯಕ್ರಮ ಈಗಾಗಲೇ ಚಾಲನೆಗೊಂಡಿದೆ.
ಶ್ರೀರಾಮೇಶ್ವರ ತೀರ್ಥರಾಜಪುರದ ಪುರದೊಡೆಯ ಎಂಬುದು ಜನಜನಿತವಾಗಿದೆ. ಈ ನವರಾತ್ರಿ ಉತ್ಸವ ಎಂಬುದು ತಾಲೂಕಿನ ಪ್ರಧಾನ ದೇವಸ್ಥಾನಗಳಲ್ಲಿ ನಡೆಯುವುದು ರಾಜನ ಕಾಲದಿಂದಲೂ ರಾಜನ ಆಶ್ರಯದಲ್ಲಿ ನಡೆಯುತ್ತಿತ್ತು. ರಾಮೇಶ್ವರದಲ್ಲಿ ಅಮ್ಮನವರ ಸಹಿತವಾದ ಈಶ್ವರನ ಸಾನಿಧ್ಯದಲ್ಲಿ ನಡೆಯುತ್ತಿರುವುದು ತುಂಬಾ ವಿಶೇಷ. ಎಲ್ಲಾ ಭಕ್ತರು ಸಹ ಈ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದು ವ್ಯವಸ್ಥಾಪನ ಸಮಿತಿ, ತಾಲೂಕು ಮುಜರಾಯಿ ಇಲಾಖೆ, ದಸರಾ ಉತ್ಸವ ಸಮಿತಿಯವರು ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆದು ಭಕ್ತರಿಗೆ ಸನ್ಮಂಗಲ ಉಂಟು ಮಾಡಿ ರಾಮೇಶ್ವರನ ಪೂರ್ಣ ಅನುಗ್ರಹ ಎಲ್ಲರಿಗೂ ದೊರೆಯಲಿ ಹಾಗೂ ಎಲ್ಲರೂ ಕೂಡ ಇದರಲ್ಲಿ ಭಾಗವಹಿಸಬೇಕೆಂದು ವ್ಯವಸ್ಥಾಪನ ಸಮಿತಿ ಹಾಗೂ ದಸರಾ ಸಮಿತಿಯವರು ಕೋರಿದ್ದಾರೆ.
ಸೆ. 22ರಂದು ಸಾವಿರಾರು ಭಕ್ತರು ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಅನ್ನ ಪ್ರಸಾದ ಸ್ವೀಕರಿಸಿದರು.
ಮಲೆನಾಡ ಸಮಸ್ತ ಭಕ್ತರನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಹಾಗೂ ದಸರಾ ಸಮಿತಿ ಸಂಚಾಲಕರಾದ ಸಂದೇಶ್ ಜವಳಿ, ಅಮರ ನಾಥ ಶೆಟ್ಟಿ ಸೇರಿ ಎಲ್ಲಾ ಸಮಿತಿ ಸದಸ್ಯರು ಸರ್ವರನ್ನು ಸ್ವಾಗತಿಸಿದ್ದಾರೆ.
ಇದೇ ಮೊದಲ ಬಾರಿಗೆ ಯುವ, ಮಹಿಳಾ ದಸರಾಗೆ ಸಜ್ಜಾಗಿದೆ. ವಿವಿಧ ಆಟೋಟ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಕುಶಾವತಿ ಪಾರ್ಕ್ ಅಲ್ಲಿ ಸ್ವಚ್ಛತೆ: ಸೆಲ್ಫಿ ಪಾಯಿಂಟ್
ತೀರ್ಥಹಳ್ಳಿ ಕುಶಾವತಿ ಪಾರ್ಕ್ ಅಲ್ಲಿ ದಸರಾ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಅಲ್ಲಿ ಪಟ್ಟಣ ಪಂಚಾಯತ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಭಕ್ತರು ಸೇರಿ ಸ್ವಚ್ಛತೆ ಕಾರ್ಯ ಮಾಡಿದ್ದಾರೆ. ಪಟ್ಟಣ ಪಂಚಾಯತ್ ಅಧ್ಯಕ್ಷ ಆಸಾದಿ ಅವರ ನೇತೃತ್ವದಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಐ ಲವ್ ಯೂ ತೀರ್ಥಹಳ್ಳಿ ಕಲ್ಲಿನ ಬೋರ್ಡ್ ಹಾಕಲಾಗಿದೆ.








