ನವದೆಹಲಿ: ಸಿಲಿಂಡರ್ ಬೆಲೆ ಏರಿಕೆಯಿಂದ ಮತ್ತು ಬುಕಿಂಗ್ ಸಮಯದಲ್ಲಿ ಪೂರ್ಣ ಪ್ರಮಾಣದ ಹಣ ಬಾರದೆ ಆತಂಕಿತರಾಗಿದ್ದ ಗ್ರಾಹಕರಿಗೆ ಭಾರತ್ ಗ್ಯಾಸ್ ಸಿಹಿಸುದ್ಧಿಯೊಂದನ್ನು ನೀಡಿದೆ.
ಎಲ್ಪಿಜಿ ಸಿಲಿಂಡರ್ ಮರುಪೂರಣಕ್ಕೆ ಬಡ್ಡಿರಹಿತವಾಗಿ ಸಾಲ ಸೌಲಭ್ಯ ನೀಡುವುದಾಗಿ ಭಾರತ್ ಗ್ಯಾಸ್ ಘೋಷಿಸಿದ್ದು, ತಕ್ಷಣ ಹಣ ಕೊಟ್ಟು ಸಿಲಿಂಡರ್ ರೀಫಿಲ್ ಮಾಡಿಸಿಕೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಇಎಂಐ ರೀತಿಯಲ್ಲಿ ಕಂತುಗಳಲ್ಲಿ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ನ ಬೆಲೆ 950 ರೂಪಾಯಿಗಳಷ್ಟಿವೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಭಾರತ್ ಗ್ಯಾಸ್ “ಸಿಲಿಂಡರ್ ಮರುಭರ್ತಿಗೆ ಬಡ್ಡಿರಹಿತ ಮೈಕ್ರೋ ಸಾಲ ಸೌಲಭ್ಯವನ್ನು ಘೋಷಿಸುತ್ತಿದ್ದೇವೆ. ಈ ಸೌಲಭ್ಯದ ಮೂಲಕ ಗ್ರಾಹಕರು ಎಲ್ಪಿಜಿ ರೀಫಿಲ್ ಗಾಗಿ 600 ರೂಪಾಯಿವರೆಗೆ ಬಡ್ಡಿರಹಿತ ಸಾಲವನ್ನು ಪಡೆಯಬಹುದಾಗಿದೆ. 600 ರೂಪಾಯಿ ಸಾಲಕ್ಕೆ ತಲಾ 100 ರೂಪಾಯಿಯಂತೆ ಪ್ರತಿವಾರ ಕಂತುಗಳಲ್ಲಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಮೊತ್ತದ ಮೇಲೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ. ಪ್ರತಿವಾರ 100ರೂಪಾಯಿ ಇಎಂಐ ಕಟ್ಟಿ ಮುಂಚಿತವಾಗಿ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ” ಎಂದು ತಿಳಿಸಿದೆ. ಮತ್ತು ಹೆಚ್ಚಿನ ಮಾಹಿತಿಗಾಗಿ ಸಮೀಪದ ಭಾರತ್ ಗ್ಯಾಸ್ ವಿತರಕರನ್ನು ಸಂಪರ್ಕಿಸಿ, ಅಗತ್ಯವಾಗಿ ಬೇಕಾಗಿರುವಂತಹ ದಾಖಲೆಗಳನ್ನು ನೀಡಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಸೂಚಿಸಲಾಗಿದೆ.







