ನರಸಿಂಹರಾಜಪುರ: ನರಸಿಂಹರಾಜಪುರ ತಾಲ್ಲೂಕಿನ ಹಲವಾರು ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗೋಕಳ್ಳತನ, ಇಸ್ಪೀಟ್ ದಂಧೆ, ಗಾಂಜಾ ಮಾರಾಟದಂತಹ ಅಕ್ರಮ ಚಟುವಟಿಕೆಗಳು ಹೆಚ್ಚಾಗಿರುವುದರ ಜೊತೆಗೆ ಕೊಳವೆ ಬಾವಿಗಳಿಗೆ ಅಳವಡಿಸಲಾಗಿರುವ ಕೇಬಲ್ ಸಹ ಕಳುವಾಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಸೋಮವಾರದಂದು ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ನಿವಾಸಿಯಾದ ವೆಂಕಟೇಶ್ ಎನ್ನುವವರ ತೋಟಕ್ಕೆ ರಾತ್ರಿಯ ಸಮಯದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಖದೀಮರು, ಎರಡು ಕೊಳವೆ ಬಾವಿಗಳಿಗೆ ಅಳವಡಿಸಿದ್ದಂತಹ 360 ಮೀಟರ್ ಉದ್ದದ, ಸುಮಾರು 80.000ರೂಪಾಯಿಗಳಷ್ಟು ತಾಮ್ರದ ಮೌಲ್ಯ ಇರುವಂತಹ ಕೇಬಲ್ ಗಳನ್ನು ಕಳ್ಳತನ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿಯೂ ಕೂಡ ಮೆಣಸೂರು ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ಕೊಳವೆಬಾವಿಗೆ ಅಳವಡಿಸಲಾಗಿದ್ದ 25 ಅಡಿ ಉದ್ದದ ತಾಮ್ರದ ಕೇಬಲ್ ಅನ್ನು ಸಹ ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಕೇಬಲ್ ಕಳುವು ಪ್ರಕರಣವು ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ ಎನ್ನುವ ಮಾಹಿತಿ ಲಭಿಸಿದೆ. ಪರಿಣಾಮವಾಗಿ ರೈತರು ರಾತ್ರಿಯ ಸಮಯದಲ್ಲಿ ಕೊಳವೆಬಾವಿಗಳನ್ನು ಕಾಯುವಂತಹ ಸನ್ನಿವೇಶ ಎದುರಾಗಿದೆ. ಇದರೊಂದಿಗೆ ಭದ್ರಾವತಿ ಮತ್ತು ಶಿವಮೊಗ್ಗದಿಂದ ಈ ಭಾಗಕ್ಕೆ ಗಾಂಜಾ ಸಾಗಾಟ ನಡೆಯುತ್ತಿದ್ದು, ಯುವಕರು ಇದಕ್ಕೆ ದಾಸರಾಗುತ್ತಿರುವುದು, ಮುತ್ತಿನಕೊಪ್ಪ ಅರಣ್ಯ ವ್ಯಾಪ್ತಿಯಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿರುವುದು ಸ್ಥಳೀಯರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಅಲ್ಲದೆ ಕೆಲವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಇಸ್ಪೀಟ್ ಮತ್ತು ಗಾಂಜಾ ದಂಧೆಯ ವಿರುದ್ಧ ಪೊಲೀಸ್ ಇಲಾಖೆಯು ಕಾನೂನು ಕ್ರಮವನ್ನು ಕೈಗೊಳ್ಳಲು ಆಲೋಚಿಸುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಂತಹ ಗಂಭೀರ ಸಂಗತಿಯತ್ತ ಗಮನಹರಿಸಿ, ತಾಲ್ಲೂಕು ಭಾಗದಲ್ಲಿ ನಡೆಯುತ್ತಿರುವಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಪಡಿಸಿದ್ದಾರೆ.
•ಶಿವಮೊಗ್ಗ: ಬಸ್ ಮತ್ತು ಬೈಕ್ ನ ನಡುವೆ ಅಪಘಾತ
ಶಿವಮೊಗ್ಗ: ಬೈಕ್ ಮತ್ತು ಖಾಸಗಿ ಬಸ್ ನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಘಟನೆ, ಬುಧವಾರದಂದು ಸಾಗರ ರಸ್ತೆಯಲ್ಲಿರುವ ಫ್ಲೈ ಓವರ್ ಬಳಿ ನಡೆದಿದೆ. ಬೈಕ್ ಸವಾರರು ವೇಗವಾಗಿ ಬಂದು ಖಾಸಗಿ ಬಸ್ ಒಂದಕ್ಕೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಾಮವಾಗಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
•ಸೊರಬ: ಐದು ವರ್ಷದಿಂದ ಸಿಗದಿದ್ದ ಆರೋಪಿಯ ಬಂಧನ
ಸೊರಬ: ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ವ್ಯಕ್ತಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಮಡಿವಾಳಪ್ಪ ಎಂದು ಗುರುತಿಸಲಾಗಿದೆ. 2022ರಲ್ಲಿ ನಡೆದಂತಹ ರಸ್ತೆ ಅಪಘಾತದ ಹಿನ್ನೆಲೆಯಲ್ಲಿ ಮಡಿವಾಳಪ್ಪನ ವಿರುದ್ಧ ಸೊರಬದ ಪಿಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯವು ಅಪರಾಧ ಕ್ರಮ 2342/2022ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಅಂದಿನಿಂದ ಮಡಿವಾಳಪ್ಪ ತಲೆಮರೆಸಿಕೊಂಡಿದ್ದ ಎನ್ನುವ ಮಾಹಿತಿ ಲಭಿಸಿದೆ. ಹೀಗಾಗಿ ಮಡಿವಾಳಪ್ಪನನ್ನು ಜಾಮೀನು ರಹಿತವಾಗಿ ದಸ್ತಗಿರಿ ಮಾಡುವಂತೆ ವಾರೆಂಟ್ ಅನ್ನು ಹೊರಡಿಸಲಾಗಿತ್ತು. ಸೊರಬ ವೃತ್ತದ ಸಿಪಿಐ ಮಹಾಂತೇಶ್ ಲಂಬಿ ಅವರ ಮಾರ್ಗದರ್ಶನದಲ್ಲಿ, ಸೊರಬ ಠಾಣೆಯ ಪಿಎಸ್ಐ ನವೀನ್ ಅವರ ನೇತೃತ್ವದಲ್ಲಿ ಪ್ರೋಸೆಸ್ ವಿಭಾಗದ ಸಿಬ್ಬಂದಿ ಸೋಮನಾಯ್ಕ ಅವರು ಕಾರ್ಯಾಚರಣೆಯನ್ನು ನಡೆಸಿ, ಆರೋಪಿಯ ಚಲನವಲನಗಳತ್ತ ಗಮನಹರಿಸಿ ಬಳಿಕ ಸ್ವಗ್ರಾಮದಲ್ಲಿ ಆತನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ರಸ್ತೆಯಲ್ಲಿ ಮಲಗಿದ್ದ ದನಗಳ ಮೇಲೆ ವಾಹನ ಹರಿದು ದನಗಳು ಸಾವು
ರಿಪ್ಪನ್‌ಪೇಟೆ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಎರಡು ದನಗಳು ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೆರಡು ದನಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆದಿದೆ.
ರಸ್ತೆಯಲ್ಲಿ ದನಗಳ ಗುಂಪೊಂದು ಮಲಗಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನ, ಬಹುಶಃ ಲಾರಿ, ದನಗಳ ಮೇಲೆ ಹರಿದು ಹೋಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡು ದನಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೆರಡು ದನಗಳಿಗೆ ಗಂಭೀರ ಗಾಯಗಳಾಗಿವೆ. ಅಪಘಾತಕ್ಕೆ ಕಾರಣವಾದ ವಾಹನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.