ಮಂಗಳೂರು: ಎಂಆರ್ ಪಿಎಲ್ ಸ್ಫೋಟ ಪ್ರಕರಣ ಸಂಬಂಧಪಟ್ಟ ಹಾಗೆ ಕೇಸ್ ದಾಖಲು ಆಗಿದೆ. ಸೆಪ್ಟೆಂಬರ್ 30ರ ಬುಧವಾರದಂದು ಮಧ್ಯಾಹ್ನದ ಹೊತ್ತಿಗೆ ಎಂಆರ್ ಪಿಎಲ್ ನ ಫೇಸ್-3ರ ಕುಕ್ಕರ್ ಹೈಡ್ರೋ ಟ್ರೇಟರ್ ಯೂನಿಟ್ ಭೀಕರ ರೀತಿಯಲ್ಲಿ ಸ್ಫೋಟಗೊಂಡಿದೆ. ಎಂಆರ್ ಪಿಎಲ್ ನ ಉದ್ಯೋಗಿಗಳಿಗೆ ಊಟ, ಉಪಹಾರ ಮತ್ತು ನೀರು ಸರಬರಾಜು ಮಾಡುವ ಕೆ ಸ್ಟಾರ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವೀಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲಸಗಾರರು ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದರು. ಅದರಲ್ಲೂ ಮನೀಶ್ ಕರ್ಕಡ ಅವರು ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ್, ಜಗಜೀವನ್ ಸಿಂಗ್, ಶರತ್ ಶೆಟ್ಟಿ, ರಾಜೇಶ್ ಪೂಜಾರಿ ಸೇರಿ ಹಲವರು ಗಾಯಗೊಂಡಿದ್ದಾರೆ. ಕುಕ್ಕರ್ ಹೈಡ್ರೋ ಟ್ರೇಟರ್ ಯೂನಿಟ್ ನ ಉಪಕರಣಗಳನ್ನು ಘಟಕದ ಮುಖ್ಯಸ್ಥರು ಮತ್ತು ಎಂಆರ್ ಪಿಎಲ್ ಸಂಸ್ಥೆಯವರು ಸಮರ್ಪಕವಾಗಿ ಪರಿಶೀಲಿಸದೆ ನಿರ್ಲಕ್ಷ್ಯ ವಹಿಸಿದುದೇ ಈ ದುರಂತಕ್ಕೆ ಕಾರಣವಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬಂಟ್ವಾಳ: ಕೂಲಿ ಕಾರ್ಮಿಕನೀಗ ಕೊಟ್ಯಧಿಪತಿ..!
ಬಂಟ್ವಾಳ: ಕೇರಳ ಮೂಲದ ತಿರುವೋಣಂ ಲ್ಯಾಟರಿಯ ಎರಡನೇ ಬಹುಮಾನ ಕರ್ನಾಟಕಕ್ಕೆ ಬಂದಿದ್ದು, ಅದರಲ್ಲೂ ಕೂಲಿ ಕಾರ್ಮಿಕರೊಬ್ಬರಿಗೆ ಲಭಿಸಿರುವುದು ವಿಶೇಷವಾಗಿದೆ. ನಗರಿ ಸಮೀಪದ ಕೇಪುಳಗುಡ್ಡೆ ನಿವಾಸಿಯಾದ ರೋಹಿತ್ ನಾಯ್ಕ ಅವರು ಕಾಸರಗೋಡಿನ ನ್ಯೂ ಲಕ್ಕಿ ಸೆಂಟರ್ ಏಜೆನ್ಸಿಯಲ್ಲಿ ಲ್ಯಾಟರಿ ಟಿಕೆಟ್ ಅನ್ನು ಖರೀದಿಸಿದ್ದು, ಎರಡನೇ ಬಹುಮಾನ ಬರುವ ಮೂಲಕ 1ಕೋಟಿ ರೂಪಾಯಿ ಹಣವನ್ನು ಗಳಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ರೋಹಿತ್ ನಾಯ್ಕ ಅವರು ತಮಗೆ ಅದೃಷ್ಟವನ್ನು ತಂದುಕೊಟ್ಟ ಸಂಸ್ಥೆಯ ಸಿಬ್ಬಂದಿಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
•ಸುಳ್ಯ: ಹೊಟ್ಟೆ ನೋವಿನಿಂದ ಯುವಕ ಸಾವು
ಸುಳ್ಯ: ಹೊಟ್ಟೆ ನೋವಿನಿಂದ ನರಳುತ್ತಿದ್ದ ಯುವಕನೊಬ್ಬ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಪಂಜದ ಕಂರ್ಬು ನಿವಾಸಿ, ನಿಂತಿಕಲ್ಲಿನಲ್ಲಿ ‘ಅಜಯ್ ಪಾದರಕ್ಷೆ’ ಎನ್ನುವ ಹೆಸರಿನ ಮಳಿಗೆಯನ್ನು ನಡೆಸುತ್ತಿದ್ದ ಅಜಯ್ ಎಂದು ಗುರುತಿಸಲಾಗಿದೆ. ಹೊಟ್ಟೆ ನೋವಿನ ಹಿನ್ನೆಲೆಯಿಂದಾಗಿ ಸೆಪ್ಟೆಂಬರ್ 29ರ ಮಂಗಳವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅಜಯ್, ಚಿಕಿತ್ಸೆಗೆ ಸ್ಪಂದಿಸದೆ ಅದೇ ದಿನ ರಾತ್ರಿ ಮೃತಪಟ್ಟಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ಮಂಗಳೂರು: ಅಕ್ರಮ ದನ ಸಾಗಣೆ; ಪೊಲೀಸರ ವಶ
ಮಂಗಳೂರು: ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಕಾರ್ಯಾಚರಣೆ ಕೈಗೊಂಡು ದಾಳಿ ನಡೆಸಿದ ಘಟನೆ, ಬುಧವಾರದಂದು ಕಲ್ಲಡ್ಕ ಮೇಲ್ಸೇತುವೆ ಬಳಿ ನಡೆದಿದೆ. ಗುಂಡ್ಯ ಕಡೆಯಿಂದ ಆಗಮಿಸುತ್ತಿದ್ದ ಬೃಹತ್ ಗಾತ್ರದ ಲಾರಿಯೊಂದನ್ನು ಪೊಲೀಸರು ತಡೆಗಟ್ಟಿ ಪರಿಶೀಲಿಸಿದಾಗ, 20ಕ್ಕೂ ಹೆಚ್ಚು ದನಗಳನ್ನು ಮಂಗಳೂರಿಗೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರನ್ನು ಕಂಡೊಡನೆ ಲಾರಿ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ದನಗಳನ್ನು ರಕ್ಷಿಸಿದ್ದು, ಅಕ್ರಮ ಸಾಗಾಟಕ್ಕೆ ಬಳಸಿದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
•ಬಂಟ್ವಾಳ: ರಸ್ತೆ ಅಪಘಾತ; ಪಾದಚಾರಿ ಸಾವು
ಬಂಟ್ವಾಳ: ರಸ್ತೆ ಅಪಘಾತದಲ್ಲಿ ಕೂಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ, ಬುಧವಾರದಂದು ದಾಸಕೋಡಿ ಎನ್ನುವಲ್ಲಿ ನಡೆದಿದೆ. ವ್ಯಕ್ತಿಯು ಸಂಜೆ ಕೆಲಸವನ್ನು ಮುಗಿಸಿ, ಕಲ್ಲಡ್ಕ ಕಡೆಯಿಂದ ಬಸ್ ನಲ್ಲಿ ಮನೆಗೆ ತೆರಳುತ್ತಿದ್ದು, ದಾಸಕೋಡಿಯಲ್ಲಿ ಬಸ್ ನಿಂದ ಇಳಿದು, ರಸ್ತೆ ಬದಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ಬಾಳ್ತಿಲ ನಿವಾಸಿ ಹರೀಶ್ ನಾಯ್ಕ ಎಂದು ಗುರುತಿಸಲಾಗಿದೆ.
•ಕಾಪು: ಟೆಂಪೋ, ಆಟೋ ಡಿಕ್ಕಿಯಾಗಿ ಮಗು ಸಾವು
ಕಾಪು: ಫ್ಲೈ ಓವರ್ ಮೇಲಿನ ಭೀಕರ ಅಪಘಾತದಲ್ಲಿ ಒಂದೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದ್ದು , ತಡವಾಗಿ ಬೆಳಕಿಗೆ ಬಂದಿದೆ. ಉಚ್ಚಿಲಾದಿಂದ ಉಡುಪಿಯ ಕಡೆಗೆ ತೆರಳುತ್ತಿದ್ದ ಆಟೋ, ಬ್ಯಾನರ್ ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ, ಪುರಸಭೆಗೆ ಸೇರಿದ ಟೆಂಪೊಗೆ ಹಿಂಬದಿಯಿಂದ ಬಲವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮವಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಉಚ್ಚಿಲ ನಿವಾಸಿ ಸಂಧ್ಯಾ ಮತ್ತು ಅವರ ಮಕ್ಕಳಾದ ಗಯಾನ್ ಮತ್ತು ಸುಮಿತ್ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡು ಗಂಭೀರ ಸ್ಥಿತಿಗೆ ತಲುಪಿದ್ದ ಸುಮಿತ್ ನನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಯಿತಾದರೂ, ಮಗು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರದಂದು ಮೃತಪಟ್ಟಿದೆ.
ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ: ತನಿಖೆ
ಪುತ್ತೂರು: ಕೂರ್ನಡ್ಕದ ಮಹಿಳೆಯೊಬ್ಬರಿಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು, ಪ್ರಕರಣದ ಕುರಿತು ಸೂಕ್ತ ವಿಚಾರಣೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ತಿಳಿಸಿದ್ದಾರೆ.
ಕೂರ್ನಡ್ಕದ ಮಹಿಳೆ ಸೆ.16ರಂದು ಮಧುಮೇಹಕ್ಕೆ ಸಂಬಂಧಿಸಿದ ಔಷಧಿಗಳನ್ನು ಪಡೆಯಲು ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿದ್ದರು. ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಮಧುಮೇಹದ ಮಾತ್ರೆ ಸೇರಿದಂತೆ ಇತರ ಔಷಧಿಗಳನ್ನು ನೀಡಲಾಗಿತ್ತು. ಆದರೆ ನೀಡಲಾದ ಮಾತ್ರೆಗಳ ಪೈಕಿ ಕೆಲವು ಮಾತ್ರೆಗಳ ಬಳಕೆಯ ಅವಧಿ ಆಗಸ್ಟ್ ತಿಂಗಳಲ್ಲೇ ಮುಕ್ತಾಯಗೊಂಡಿತ್ತು ಎಂದು ಎಸ್ಡಿಪಿಐ ಮುಖ೦ಡ ತಾಜುದ್ದೀನ್ ಆರೋಪಿಸಿದ್ದಾರೆ. ಈ ಬಗ್ಗೆ ಅರಿವಿಲ್ಲದೆ ಮಹಿಳೆ ಸುಮಾರು 10 ದಿನಗಳ ಕಾಲ ಮಾತ್ರೆಗಳನ್ನು ಸೇವಿಸಿದ್ದರು. ಎರಡು ದಿನಗಳ ಹಿಂದೆ ಮಹಿಳೆಯ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಮನೆಯವರು ಆಕೆಗೆ ನೀಡಲಾಗಿದ್ದ ಔಷಧಿಗಳನ್ನು ಪರಿಶೀಲಿಸಿದಾಗ ಅವುಗಳ ಅವಧಿ ಮುಗಿದಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಲಾಗಿದೆ. ಈ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದು, ಔಷಧಿ ವಿತರಣೆಯಲ್ಲಿ ಲೋಪವಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.







