ಬೆಂಗಳೂರು: ಕರ್ನಾಟಕದಲ್ಲಿ ಹಾಲಿನ ದರ ಏರಿಕೆಗೆ ಬೇಡಿಕೆ ಬೆನ್ನಲ್ಲೇ, ಬಸ್ ಪ್ರಯಾಣವೂ ದುಬಾರಿಯಾಗಲಿದೆ ಎಂಬ ಮಾತುಗಳಿಗೆ ಸ್ವತಃ ಸಾರಿಗೆ ಸಚಿವರೇ ಪುಷ್ಟಿ ನೀಡಿದ್ದಾರೆ. ಸಾರಿಗೆ ನಿಗಮಗಳ ಬಸ್ ದರ ಹೆಚ್ಚಳ ಸಂಬಂಧ ರಚಿಸಿದ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಒಂದೆರಡು ದಿನಗಳಲ್ಲಿ ವರದಿ ಸಲ್ಲಿಸಲಿದ್ದು, ಸಂಪುಟದ ಅನುಮೋದನೆ ಪಡೆದು ಶೀಘ್ರ ದರ ಪರಿಷ್ಕರಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಸಾರಿಗೆ ನಿಗಮಗಳು ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವುದರಿಂದ ಪ್ರಯಾಣ ದರ ಹೆಚ್ಚಳ ಅನಿವಾರ್ಯವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ನಾಲ್ಕು ಬಾರಿ ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ. ಇದರ ಪರಿಣಾಮ ಪ್ರತಿ ಲೀಟರ್ ಡೀಸೆಲ್ ಬೆಲೆ 15ರಿಂದ 16 ರೂ. ಹೆಚ್ಚಳವಾಗಿದ್ದು, ನಮ್ಮ ಸಾರಿಗೆ ನಿಗಮಗಳಿಗೆ ವಾರ್ಷಿಕ 8 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ,” ಎಂದು ಹೇಳಿದರು.
”ಅತುಲ್ ತಿವಾರಿ ಅವರು ಎಲ್ಲಾ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಆ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿಟ್ಟು ಚರ್ಚಿಸಿ, ಮುಖ್ಯಮಂತ್ರಿಗಳ ಅನುಮೋದನೆ ಪಡೆದ ನಂತರ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ,” ಎಂದು ಸ್ಪಷ್ಟ ಪಡಿಸಿದರು.
– ಮಹಿಳೆಯರಿಗೆ ಶಕ್ತಿ ಕಾರ್ಡ್ ವಿತರಣೆ
”ಅನ್ಯ ರಾಜ್ಯಗಳ ಮಹಿಳೆಯರೂ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯದ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಲು ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ. ಮೊದಲ ಹಂತದಲ್ಲಿ 1 ಕೋಟಿ ಮಹಿಳೆಯರಿಗೆ ನೀಡುವ ದಿಸೆಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಎರಡು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಸಿದ್ಧವಾಗಲಿವೆ,” ಎಂದು ಬೈರತಿ ಸುರೇಶ್ ತಿಳಿಸಿದರು. ಕೇಂದ್ರ ಸರ್ಕಾರದ ಸಹಯೋಗದಲ್ಲಿ 4500 ಎಲೆಕ್ಟ್ರಿಕ್ ಬಸ್ಗಳನ್ನು ಬಿಎಂಟಿಸಿಗೆ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಬಸ್ಗಳು ಹಂತ-ಹಂತವಾಗಿ ರಾಜಧಾನಿಯ ನಾಗರಿಕರ ಸೇವೆಗೆ ಲಭ್ಯವಾಗಲಿವೆ. ಇವುಗಳ ಸಂಚಾರದಿಂದ ನಗರದ ಸಾರಿಗೆ ದಟ್ಟಣೆ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದೆ,” ಎಂದು ಸಾರಿಗೆ ಸಚಿವರು ತಿಳಿಸಿದರು.







