ಬೆಂಗಳೂರು: ರಾಜ್ಯಾದ್ಯಂತ ಗೌರಿ ಗಣೇಶ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಿದ್ದು, ಈಗ ಎಲ್ಲೆಡೆ ಗಣೇಶೋತ್ಸವ ನಡೆಯುತ್ತಿದೆ.
ಮೂರು, ಐದು ಮತ್ತು ಏಳು ದಿನಗಳ ಕಾಲ ಗಣೇಶೋತ್ಸವವನ್ನು ನಡೆಸಲಾಗುತ್ತಿದ್ದು ಕೊನೆಯ ದಿನದಂದು ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಹುಲಿವೇಷ, ಕೇರಳದ ಚಂಡೆ ವಾದನ ಮತ್ತು ವಿವಿಧ ನಾಸಿಕ್ ಡೋಲುಗಳ ವೈಭವದೊಂದಿಗೆ ಗಣಪನಿಗೆ ಭವ್ಯ ವಿದಾಯವನ್ನು ಹೇಳಲು ಸಿದ್ಧತೆ ನಡೆದಿದೆ.
ಸಾಂಸ್ಕೃತಿಕ ಸ್ಪರ್ಧೆಗಳ ಕಲರವ : ಗಣೇಶೋತ್ಸವದ ಅಂಗವಾಗಿ ಭಜನೆ, ನಾಟಕ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅನೇಕ ವೇದಿಕೆಗಳಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದೆ. ಈ ವರ್ಷ ಗಣೇಶೋತ್ಸವವನ್ನು ಆಚರಿಸುತ್ತಿದ್ದು ಡಿಜೆ, ಬೈಕ್ ರಾಲಿ, ಪೇಪರ್ ಬ್ಲಾಸ್ಟ್ ಮತ್ತು ಸಿಡಿಮದ್ದುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಶಾಂತಿಯುತವಾಗಿ ನಡೆಸುತ್ತಿದ್ದು, ಇವುಗಳನ್ನು ಅಕ್ಟೋಬರ್ 14ರ ವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಗಣೇಶನ ವಿಸರ್ಜನೆಯ ಸಂದರ್ಭದಲ್ಲಿ ಮಿತವಾದ ಸಂಖ್ಯೆಯಲ್ಲಿ ಭಕ್ತರು ತೆಪ್ಪಗಳಲ್ಲಿ ತೆರಳಬೇಕು ಎನ್ನುವ ಕಟ್ಟುನಿಟ್ಟಿನ ಕ್ರಮವನ್ನು ಸಹ ಕೈಗೊಳ್ಳಲಾಗಿದೆ. ಜೊತೆಗೆ ತೆಪ್ಪದಲ್ಲಿ ತೆರಳುವವರು ಜೀವ ರಕ್ಷಕ ಕವಚಗಳನ್ನು ಧರಿಸುವುದನ್ನು ಕೂಡ ಕಡ್ಡಾಯಗೊಳಿಸಲಾಗಿದೆ.







