ಬೆಂಗಳೂರು: ಸೆಪ್ಟೆಂಬರ್ 20ರ ಮುನ್ಸೂಚನೆಯಂತೆ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮವಾಗಿ, ರಾಜ್ಯದಲ್ಲಿ 24ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ತೀವ್ರವಾಗಿರಲಿದೆ. ಅಲ್ಲದೆ ಸೆಪ್ಟೆಂಬರ್ 22ರ ಮಂಗಳವಾರದಿಂದ ರಾಜ್ಯಾದ್ಯಂತ ಮಳೆಯ ಪ್ರಮಾಣ ಅಧಿಕವಾಗಲಿದೆ ಎನ್ನುವ ಮಾಹಿತಿ ಲಭಿಸಿದೆ.
ಸೆಪ್ಟೆಂಬರ್ 21ರ ಸೋಮವಾರದಂದು ದಕ್ಷಿಣಕನ್ನಡ, ಕಾಸರಗೋಡು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದ್ದು, ಕರಾವಳಿಯಲ್ಲಿ ಸೆಪ್ಟೆಂಬರ್ 22ರ ಮಂಗಳವಾರದಂದು ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಮಲೆನಾಡಿನ ಭಾಗಗಳಾದ ಕೊಡಗು, ಸಕಲೇಶಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಜೆಯ ಹೊತ್ತಿಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 22ರ ಮಂಗಳವಾರದಿಂದ 25ರ ಶುಕ್ರವಾರದವರೆಗೆ ಮೂರು ದಿನಗಳ ಕಾಲ ಮಳೆ ಹೆಚ್ಚಾಗುವ ಲಕ್ಷಣಗಳಿವೆ ಎನ್ನಲಾಗುತ್ತಿದೆ. ಉತ್ತರ ಒಳನಾಡಿನ ಭಾಗಗಳಾದ ಬೆಳಗಾವಿ, ಧಾರವಾಡ, ವಿಜಯಪುರ, ಕಲಬುರ್ಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 22ರ ಮಂಗಳವಾರದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಉತ್ತಮ ಮಳೆಯಾಗಲಿದ್ದು, ಹಾವೇರಿ ಗದಗ ಮತ್ತು ಬಾಗಲಕೋಟೆಗಳಲ್ಲಿ ಸಾಧಾರಣ ಮಳೆ ಸಂಭವಿಸಲಿದೆ. ದಕ್ಷಿಣ ಒಳನಾಡಿನ ಭಾಗಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳ ಹಲವೆಡೆ ಸಂಜೆ ಮತ್ತು ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆ ಉಂಟಾಗಲಿದ್ದು, ಇದು ಸೆಪ್ಟೆಂಬರ್ 25ರ ಶುಕ್ರವಾರದ ತನಕ ಮುಂದುವರಿಯುವ ಸಾಧ್ಯತೆ ಇದೆ ಎನ್ನುವ ಸಂಗತಿ ತಿಳಿದುಬಂದಿದೆ.







