ಬೆಂಗಳೂರು: ಮಹಿಳಾ ಸ್ವಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುವ ಸಲುವಾಗಿ ಪ್ರತ್ಯೇಕ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸುವ ಕುರಿತು ಸರ್ಕಾರವು ನಿರ್ಧಾರವನ್ನು ಕೈಗೊಂಡಿದೆ.
ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಮಹಿಳಾ ಸ್ವಸಹಾಯ ಸಂಘಗಳಿದ್ದು, ಅವುಗಳ ಸಬಲೀಕರಣಕ್ಕೆ ತಲಾ 1.50 ಲಕ್ಷ ಬಂಡವಾಳ ನಿಧಿಯನ್ನು ಇರಿಸಲು ನಿರ್ಣಯಿಸಿದೆ. ಇದರೊಂದಿಗೆ ಮಹಿಳಾ ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲು ಕೋ-ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸಲು ಈಗಾಗಲೇ ಅದರ ಕುರಿತ ರೂಪುರೇಷೆಯ ರಚನೆ ಸಂಪೂರ್ಣಗೊಂಡಿದೆ ಎನ್ನುವ ಮಾಹಿತಿ ಲಭಿಸಿದೆ.
ಸ್ವಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟಕ್ಕೂ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲು ಆದೇಶವನ್ನು ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ ಅವರು “ಇನ್ನು ಒಂದು ತಿಂಗಳೊಳಗೆ ಈ ಸಹಕಾರ ಸಂಘ ಕಾರ್ಯಾರಂಭ ಮಾಡಲಿದೆ” ಎಂದು ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ತಿಳಿಸಿದ್ದಾರೆ.







