ಟಾಪ್ 3 ನ್ಯೂಸ್ ಹಾಸನ
ಹಾಸನ : ಮೈಕ್ರೋಫೈನ್ಸಾನ್ ಸಿಬ್ಬಂದಿ ಕಿರುಕುಳದಿಂದ ಮಹಿಳೆ ಆತ್ಮಹತ್ಯೆ
– ಹಾಸನ : ಗಾಂಜಾ ಸೊಪ್ಪು ಮಾರಾಟಕ್ಕೆ ಯತ್ನ : 10 ಕೆಜಿ ಗಾಂಜಾ ಸೊಪ್ಪು ಸಮೇತ ಇಬ್ಬರ ಬಂಧನ
– ಹಾಸನ : ಕೌಟುಂಬಿಕ ಕಲಹದಿಂದ ಕೆರೆಗೆ ಹಾರಿ ತಾಯಿ ಮಗ ಆತ್ಮಹತ್ಯೆ
NAMMUR EXPRESS NEWS
ಹಾಸನ : ಮೈಕ್ರೋಫೈನ್ಸಾನ್ ಸಿಬ್ಬಂದಿ ಕಿರುಕುಳ ಹಿನ್ನಲೆ ಮಹಿಳೆಯೋರ್ವ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಕೆಂಚಮ್ಮ (50) ಆತ್ಮಹತ್ಯೆಗೆ ಶರಣಾದ ಮಹಿಳೆ. ಜಿಲ್ಲೆಯ ಆಲೂರು ತಾಲ್ಲೂಕಿನ, ಹಳ್ಳಿಯೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಕೆಂಚಮ್ಮ BSS, EIF ಫೈನಾನ್ಸ್ ಕಂಪನಿಯಿಂದ ಎರಡು ಲಕ್ಷ ಸಾಲ ಮಾಡಿದ್ದರು. ಪ್ರತಿ ತಿಂಗಳು ಸರಿಯಾಗಿ ಹಣ ಕಟ್ಟುತ್ತಿದ್ದ ಮಹಿಳೆ ಈ ತಿಂಗಳು ಹಣ ಇಲ್ಲದ ಕಾರಣ ಕಂತು ಕಟ್ಟಿಲ್ಲ. ಮೈಕ್ರೋಫೈನಾನ್ಸ್ ಸಿಬ್ಬಂದಿ ಇಂದೇ ಹಣ ಕಟ್ಟುಬೇಕೆಂದು ಬಿಎಸ್ಎಸ್ ಫೈನಾನ್ಸ್ ಸಿಬ್ಬಂದಿ ಪಟ್ಟು ಹಿಡಿದು ಮನೆಯ ಬಳಿಯೇ ಕುಳಿತಿದ್ದ. ಇದರಿಂದ ಮನನೊಂದು ಕೆಂಚಮ್ಮ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಕೆಂಚಮ್ಮ ಸಾವಿನ ಸುದ್ದಿ ತಿಳಿದು ಮೈಕ್ರೋಫೈನಾನ್ಸ್ ಸಿಬ್ಬಂದಿಗಳು ಎಸ್ಕೇಪ್ ಆಗಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
– ಹಾಸನ : ಗಾಂಜಾ ಸೊಪ್ಪು ಮಾರಾಟಕ್ಕೆ ಯತ್ನ : 10 ಕೆಜಿ ಗಾಂಜಾ ಸೊಪ್ಪು ಸಮೇತ ಇಬ್ಬರ ಬಂಧನ
ಹಾಸನ : ಹೊರ ರಾಜ್ಯದಿಂದ ಅಕ್ರಮವಾಗಿ ಗಾಂಜಾ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗಾಂಜಾ ಸಮೇತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಒರಿಸ್ಸಾ ಮೂಲದ ಸಮೀರ್ ಪ್ರಧಾನ್ (47), ಗೀತಾ ಪ್ರಧಾನ್ (25) ಬಂಧಿತ ಆರೋಪಿಗಳು. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ, ರಾಮನಾಥಪುರದ ಐಬಿ ವೃತ್ತದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರು ದೊರೆತ ತಕ್ಷಣವೇ ಕಾರ್ಯ ಪ್ರವೃತರಾದ ಪಿಎಸ್ಐ ಗಿರೀಶ್, ಪ್ರಹ್ಲಾದ್, ಸಿಬ್ಬಂದಿಗಳಾದ ಎಸ್. ಅಭಿಷೇಕ್, ಗಿರೀಶ್, ಮಹೇಶ್, ಸೂರ್ಯ, ಅಭಿಷೇಕ್ ರವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ರಾಮನಾಥಪುರ ಪ್ರವಾಸಿ ಮಂದಿರದ ವೃತ್ತದಲ್ಲಿ ಗಾಂಜಾ ಸೊಪ್ಪು ಮಾರುತ್ತಿದ್ದ ಇಬ್ಬರನ್ನು ಮಾಲು ಸಮೇತ ಬಂಧಿಸಿ ೧೦ ಕೆಜಿ ೬೦೦ ಗ್ರಾಂ ತೂಕದಷ್ಟು ಗಾಂಜಾ ವಶಕ್ಕೆ ಪಡೆದು ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಹಾಸನ : ಕೌಟುಂಬಿಕ ಕಲಹದಿಂದ ಕೆರೆಗೆ ಹಾರಿ ತಾಯಿ ಮಗ ಆತ್ಮಹತ್ಯೆ
ಹಾಸನ : ಕೌಟುಂಬಿಕ ಕಲಹ ಹಿನ್ನಲೆ ಕೆರೆಗೆ ಹಾರಿ ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಕಬ್ಬಳಿ ಗ್ರಾಮದಲ್ಲಿ ನಡೆದಿದೆ. ಜಯಂತಿ (60), ಭರತ್ (35) ಆತ್ಮಹತ್ಯೆಗೆ ಶರಣಾದ ತಾಯಿ-ಮಗ. ಭರತ್ ಕಳೆದ ಎಂಟು ತಿಂಗಳ ಹಿಂದಷ್ಟೇ ಅರಸೀಕೆರೆ ತಾಲ್ಲೂಕು, ಬಾಗೂರನಹಳ್ಳಿ ಗ್ರಾಮದ ಗೀತಾ ಎಂಬುವವರ ಜೊತೆ ಮದುವೆಯಾಗಿದ್ದ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇಲ್ಲದೆ ಪದೇ ಪದೇ ಜಗಳ ನಡೆಯುತ್ತಿದ್ದ ಕಾರಣಕ್ಕೆ ಗೀತಾ ಮನೆ ಬಿಟ್ಟು ಹೋಗಿದ್ದರು. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಎರಡು ಬಾರಿ ನಡೆದಿದ್ದ ರಾಜಿ-ಪಂಚಾಯ್ತಿ ಮಾಡಿದ್ದರು ಸಹ ಗೀತಾ ಗಂಡನ ಜೊತೆ ಇರದೆ ತವರು ಮನೆಗೆ ಹೋಗಿದ್ದರು. ಇದರಿಂದ ಮನನೊಂದಿದ್ದ ತಾಯಿ-ಮಗ ಕೆರೆಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದಾರೆ ಎನ್ನಲಾಗಿದೆ. ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







