ಶಿವಮೊಗ್ಗ: ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಕಾರ್ಯಕ್ರಮ ಶನಿವಾರ ಬೆಳಗಿನ ಜಾವ ಮುಕ್ತಾಯಗೊಂಡಿದೆ.
ಶುಕ್ರವಾರ ರಾತ್ರಿಯಿಡೀ ಸಾಗಿದ ಮೆರವಣಿಗೆಗೆ ಬೆಳಗಿನ ಜಾವ 5ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಣಪತಿ ವಿಗ್ರಹವನ್ನು ಭೀಮನ ಮಡುವಿನಲ್ಲಿ ವಿಸರ್ಜನೆ ಮಾಡುವ ಮೂಲಕ ತೆರೆ ಬಿದ್ದಿದೆ. ಇಡೀ ಶಿವಮೊಗ್ಗ ಜನ ಈ ಉತ್ಸವದಲ್ಲಿ ಭಾಗಿಯಾಗಿದ್ದಾರೆ.
ಆರಾಧ್ಯ ದೈವವನ್ನು ಸಾವಿರಾರು ಭಕ್ತರು ಭಾವಪೂರ್ಣವಾಗಿ ಬೀಳ್ಕೊಟ್ಟಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು ಹರ ಹರ ಮಹಾದೇವ, ಭಾರತ್ ಮಾತಾ ಕಿ ಜೈ ಮೊದಲಾದ ಘೋಷಣೆಗಳನ್ನು ಕೂಗುತ್ತಾ ಉತ್ಸಾಹವನ್ನು ಇಮ್ಮಡಿಗೊಳಿಸಿದರು.
ಮಲೆನಾಡ ಮಡಿಲಲ್ಲಿ ವಿವಿಧ ಕಲಾಕೃತಿ
ಶಿವಮೊಗ್ಗದ ಹಿಂದೂ ಸಂಘಟನಾ ಮಹಾಮಂಡಳಿಯ ಗಣಪತಿ ಉತ್ಸವಕ್ಕೆ ಸಾಂಸ್ಕೃತಿಕ ಸ್ವರೂಪವನ್ನು ನೀಡಲಾಗಿತ್ತು. ಅಮೀರ್ ಅಹಮದ್ ವೃತ್ತದಲ್ಲಿ ಸಿಂಹಾರೂಢ ಛತ್ರಪತಿ ಶಿವಾಜಿ ಆಯುಧ ಪ್ರಧಾನ ಕಲಾಕೃತಿಯನ್ನು ನಿರ್ಮಿಸುವುದರ ಜೊತೆಗೆ, ನಗರದ ಪ್ರಮುಖ ರಸ್ತೆಗಳನ್ನು ಮತ್ತು ಮಹದ್ವಾರಗಳನ್ನು ವಿವಿಧ ಬಗೆಯ ವಿದ್ಯುತ್ ದೀಪಗಳಿಂದ ಮತ್ತು ವಿವಿಧ ಕಲಾಕೃತಿಗಳಿಂದ ಅಲಂಕರಿಸಲಾಗಿತ್ತು. ಇದನ್ನು ವೀಕ್ಷಿಸಲೆಂದೇ ಜಿಲ್ಲೆಯ ನಾನಾ ಭಾಗಗಳಿಂದ ಜನಸ್ತೋಮವೇ ಹರಿದುಬಂದಿತ್ತು.
ಜಾನಪದ.. ಡಾನ್ಸ್ ಡಾನ್ಸ್..!
ಮೆರವಣಿಗೆಯ ಹುಮ್ಮಸ್ಸನ್ನು ಮತ್ತಷ್ಟು ಉತ್ತೇಜಿಸಲು ಜನಪದ ಸೊಗಡಿನ ಡೊಳ್ಳು, ನಾಸಿಕ್ ವಾದ್ಯ, ಚಂಡೆ ಮತ್ತು ಆಧುನಿಕತೆಯ ರೂಪಕವಾದ ಡಿಜೆ ಜೊತೆಗೂಡಿದವು. ನಗರದ ಗಲ್ಲಿಗಲ್ಲಿಗಳಿಂದ ಜನರು ಆಗಮಿಸಿ ರಾಜಬೀದಿ ಉತ್ಸವವನ್ನು ಕುಟುಂಬ ಸಮೇತರಾಗಿ ಕಣ್ತುಂಬಿಕೊಂಡರು. ಸಾಮಾಜಿಕ ಜಾಲ ತಾಣಗಳಲ್ಲಿ ಶಿವಮೊಗ್ಗ ಗಣಪತಿ ಭಾರೀ ವೈರಲ್ ಆಗಿದೆ.
ಪಟಾಕಿ.. ಚಿತ್ತಾರ… ಪಕ್ಷಬೇಧ ಮರೆತು ಭಾಗಿ
ಶಿವಮೊಗ್ಗ ಶಾಸಕ ಚನ್ನಬಸಪ್ಪ, ಪ್ರಮುಖ ನಾಯಕರಾದ ರಾಘವೇಂದ್ರ, ಅರುಣ್, ಡಾ.ಧನಂಜಯ ಸರ್ಜಿ, ಈಶ್ವರಪ್ಪ, ಯೋಗೀಶ್, ಮಂಜುನಾಥ್ ಗೌಡ, ಶ್ರೀಕಾಂತ್, ಪ್ರಸನ್ನ ಕುಮಾರ್, ಕಾಂತೇಶ್ ಸೇರಿ ಬಹುತೇಕ ನಾಯಕರು, ಮುಖಂಡರು ಈ ಹಬ್ಬದಲ್ಲಿ ಭಾಗಿಯಾಗಿದ್ದರು.







