ಉಡುಪಿ: ಶ್ರೀಕೃಷ್ಣ ಪ್ರಸಾದ್ ಎನ್ನುವ ಹೆಸರಿನ ಸಿಟಿ ಬಸ್ ಒಂದು ಬೆಂಕಿಗಾಹುತಿಯಾದ ಘಟನೆ, ಶುಕ್ರವಾರದಂದು ಮಣಿಪುರ ಪಂಚಾಯತ್ ವ್ಯಾಪ್ತಿಯ ದೆಂದೂರುಕಟ್ಟೆಯ ಎಂಆರ್ ಪಿಎಲ್ ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಮೂಡುಬೆಳ್ಳೆ-ಕಾರ್ಕಳ ಮಾರ್ಗದಲ್ಲಿ ಸಂಚಾರಿಸುತ್ತಿದ್ದ ಬಸ್ ಅನ್ನು ಎಂದಿನಂತೆ ಗುರುವಾರ ರಾತ್ರಿ ಪೆಟ್ರೋಲ್ ಪಂಪ್ ನ ಬಳಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ 3:30ರ ಸುಮಾರಿಗೆ ಬಸ್ ನಲ್ಲಿ ಇದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡಿದ್ದು, ಅದು ತೀವ್ರವಾಗಿ ಆವರಿಸಿಕೊಂಡ ಪರಿಣಾಮವಾಗಿ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಬಸ್ ಸಮೀಪದಲ್ಲಿ ಟೆಂಪೋ ಒಂದನ್ನು ನಿಲ್ಲಿಸಿದ್ದರಿಂದ ಅದಕ್ಕೂ ಸ್ವಲ್ಪ ಬೆಂಕಿ ವ್ಯಾಪಿಸಿದ್ದು, ಸೆಕ್ಯೂರಿಟಿ ಗಾರ್ಡ್ ಮತ್ತು ಸ್ಥಳದಲ್ಲಿದ್ದ ಪೆಟ್ರೋಲ್ ಪಂಪ್ ನ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಅದರ ಸಮೀಪದಲ್ಲೇ ಮತ್ತೊಂದು ಬಸ್ ನಿಲ್ಲಿಸಲಾಗಿದ್ದು, ಅದಕ್ಕೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಅಲ್ಲದೆ ಪೆಟ್ರೋಲ್ ಪಂಪ್ ಗೆ ಬೆಂಕಿ ವ್ಯಾಪಿಸದ ಕಾರಣ ಎದುರಾಗಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. ಬಸ್ ಗೆ ಬೆಂಕಿ ತಗುಲಲು ಕಾರಣವೇನೆಂಬುದು ನಿಖರವಾಗಿ ತಿಳಿದುಬಂದಿಲ್ಲ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆಯನ್ನು ನಡೆಸಿದರು. ಬಸ್ ಬೆಂಕಿಯ ತೀವ್ರತೆಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದರಿಂದ ಸುಮಾರು 10 ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.
•ಸುಳ್ಯ: ಆಟೋ ಮತ್ತು ಕಾರಿನ ನಡುವೆ ರಸ್ತೆ ಅಪಘಾತ ಸಂಭವಿಸಿರುವ ಘಟನೆ, ಅಡ್ಕಾರ್ ಬಳಿ ನಡೆದಿದೆ. ಪರಿಣಾಮವಾಗಿ ಆಟೋ ಚಾಲಕನ ಕಾಲಿಗೆ ಗಂಭೀರ ರೀತಿಯ ಗಾಯವಾಗಿದ್ದು, ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
•ಕುಂದಾಪುರ: ಪತ್ನಿಯಿಂದಲೇ ಪತಿ ಕೊಲೆ
ಕುಂದಾಪುರ: ಪತ್ನಿಯೇ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ, ದುಬೈನ ಶಾರ್ಜಾದಲ್ಲಿ ನಡೆದಿದೆ. ಸುಮಾರು ಎರಡು ತಿಂಗಳ ಹಿಂದೆ ಪತ್ನಿಯು ತನ್ನ ಪತಿಯ ದೇಹವನ್ನು ಹತ್ತಕ್ಕೂ ಹೆಚ್ಚು ಭಾಗ ತುಂಡುಗಳಾಗಿ ಕತ್ತರಿಸಿ, ಭೀಕರವಾಗಿ ಕೊಲೆಗೈದು, ಅದನ್ನು ಚೀಲದೊಳಗೆ ತುಂಬಿಸಿ, ಕಾರಿನಲ್ಲಿರಿಸಿ ಮಗನೊಂದಿಗೆ ಪರಾರಿಯಾಗಿದ್ದಳು ಎನ್ನಲಾಗಿದೆ. ಮೃತ ದುರ್ದೈವಿಯನ್ನು ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದೆ. ಪ್ರಕಾಶ್ ಕುಂದರ್ ಅವರ ಸಾವಿನ ಸಂಗತಿ ತಿಳಿಯುತ್ತಿದ್ದಂತೆ ಅವರ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿ, ಅವರ ಸಹಕಾರದಿಂದ ಮೃತದೇಹವನ್ನು ಪತ್ತೆ ಹಚ್ಚಿ, ಅಲ್ಲಿನ ನಿಯಮಾನುಸಾರ ಪ್ರಕ್ರಿಯೆಗಳನ್ನು ನಡೆಸಿ, ದುಬೈನಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣದಿಂದ ಶುಕ್ರವಾರದಂದು ಹುಟ್ಟೂರಿಗೆ ತರಲಾಯಿತು ಎನ್ನುವ ಮಾಹಿತಿ ಲಭಿಸಿದೆ. ಬಳಿಕ ಪ್ರಕಾಶ್ ಕುಂದರ್ ಅವರ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
•ಮಂಗಳೂರು: ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ
ಮಂಗಳೂರು: ಡೇಟಾ ಎಂಟ್ರಿ ವರ್ಕ್ ಫ್ರಮ್ ಹೋಂ ಕೆಲಸದ ಆಸೆಗೆ ಯುವತಿಯೊಬ್ಬಳು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಸೆಪ್ಟೆಂಬರ್ 11ರ ಶುಕ್ರವಾರದಂದು ಯುವತಿಯ ವಾಟ್ಸಪ್ ಗೆ ಅಪರಿಚಿತ ಸಂಖ್ಯೆಯಿಂದ ಮೆಸೇಜ್ ಬಂದಿದ್ದು, ಸಂದೇಶವನ್ನು ಕಳುಹಿಸಿದ ವ್ಯಕ್ತಿಯು ತಾನು ಮೇಘಾ ಕಂಪನಿಯ ಎಚ್ಆರ್ ಎಂದು ಗುರುತಿಸಿಕೊಂಡಿದ್ದಾನೆ. ಬಳಿಕ ತಮ್ಮಲ್ಲಿ ಡೇಟಾ ಎಂಟ್ರಿಗೆ ಸಂಬಂಧಿಸಿದಂತೆ ವರ್ಕ್ ಫ್ರಮ್ ಹೋಂ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ. ಮಾಹಿತಿ ನೀಡಿದ ನಂತರ ಯುವತಿಗೆ ಟೆಲಿಗ್ರಾಂ ಲಿಂಕ್ ಕಳುಹಿಸಿದ್ದು, ಯುವತಿಯು ಅದನ್ನು ತೆರೆದು, ಗ್ರೂಪ್ ಒಂದಕ್ಕೆ ಸೇರಿಕೊಂಡಿದ್ದಾಳೆ. ಆಗ ಅಪರಿಚಿತ ವ್ಯಕ್ತಿಯು 20 ಟಾಸ್ಕ್ ಗಳನ್ನು ಪೂರ್ಣಗೊಳಿಸಿದ್ದಲ್ಲಿ 200 ರೂಪಾಯಿ ನೀಡಲಾಗುವುದು ಎಂದು ನಂಬಿಸಿದ್ದಾನೆ. ಅಲ್ಲದೆ ಮೊದಲ ದಿನ ಯುವತಿಯು 20 ಟಾಸ್ಕ್ ಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅವಳ ಖಾತೆಗೆ 200 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಆಕೆಗೆ ಕೆಲಸದ ಕುರಿತು ಭರವಸೆ ಮೂಡಿ ಅದನ್ನೇ ಮುಂದುವರಿಸಲು ನಿರ್ಧರಿಸಿದ್ದಾಳೆ. ಮರುದಿನ ಯುವತಿಗೆ 13 ಟಾಸ್ಕ್ ಗಳನ್ನು ನೀಡಲಾಗಿದ್ದು, ಯುವತಿಗೆ ಅಂದು ಟಾಸ್ಕ್ ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ. ಆಗ ಅಮರ್ಜಿತ್ ಕುಮಾರ್ ಎನ್ನುವ ಹೆಸರಿನ, ಟೆಲಿಗ್ರಾಂ ಅನ್ನು ಬಳಸುತ್ತಿದ್ದ ವ್ಯಕ್ತಿಯು ಯುವತಿಗೆ ಕರೆ ಮಾಡಿ ಟಾಸ್ಕ್ ಗಳನ್ನು ಮುಂದುವರಿಸುವಂತೆ ಉತ್ತೇಜನ ನೀಡಿದ್ದಾನೆ. ಆತನ ಸೂಚನೆಯಂತೆ ಯುವತಿಯು ಆರಂಭದಲ್ಲಿ 3000 ರೂಪಾಯಿ ಹಣವನ್ನು ಯುಪಿಐ ಮೂಲಕ ವರ್ಗಾಯಿಸಿದ್ದಳು ಎನ್ನುವ ಮಾಹಿತಿ ಲಭಿಸಿದೆ. ಆದರೆ ಯುವತಿಯು ಟಾಸ್ಕ್ ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಾಳೆ. ಇದಕ್ಕೆ ಪ್ರತಿಯಾಗಿ ಅಪರಿಚಿತ ವ್ಯಕ್ತಿಗಳು ಹಣವನ್ನು ಹಿಂಪಡೆಯಬೇಕಾದರೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಸೂಚಿಸಿದ್ದಾರೆ. ತನ್ನ ಹಣವನ್ನು ಹಿಂತೆಗೆದುಕೊಳ್ಳಲು ಈ ರೀತಿ ಅನುಸರಿಸಬೇಕೇನೊ ಎಂದು ನಂಬಿದ ಯುವತಿಯು ಸೆಪ್ಟೆಂಬರ್ 12ರ ಶನಿವಾರದಿಂದ ಸೆಪ್ಟೆಂಬರ್ 17ರ ಗುರುವಾರದವರೆಗೆ ಸುಮಾರು 9.33.866 ರೂಪಾಯಿಗಳಷ್ಟು ಹಣವನ್ನು ವರ್ಗಾಯಿಸಿದ್ದಾಳೆ. ಇಷ್ಟಾದರೂ ತನ್ನ ಹಣ ಮರಳಿ ಸಿಗದಿದ್ದರಿಂದ ತಾನು ಆನ್ ಲೈನ್ ವರ್ಕ್ ಫ್ರಮ್ ಹೋಂ ಸ್ಕ್ಯಾಮ್ ಗೆ ಒಳಗಾಗಿರುವ ಕುರಿತು ಅರಿವು ಮೂಡಿದೆ. ಈ ಹಿನ್ನೆಲೆಯಲ್ಲಿ ಯುವತಿಯು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಸಿಇಎನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣ ವರ್ಗಾವಣೆಗೊಂಡ ಬ್ಯಾಂಕ್ ಖಾತೆಗಳ ಕುರಿತು ತನಿಖೆಯನ್ನು ಕೈಗೊಳ್ಳಲಾಗಿದೆ.