Categories
Uncategorized

ಕಾಂಗ್ರೆಸ್ ನಾಯಕ ಸುಂದರೇಶ್ ವಿರುದ್ಧ ಕ್ರಮಕ್ಕೆ ಪಟ್ಟು! – ಅನಾರೋಗ್ಯದಿಂದ ಹಾಗೆ ಮಾತಾಡಿದ್ದಾರೆ ಎಂದ ಮಂಜುನಾಥ ಗೌಡ – ಶಿಸ್ತು ಕ್ರಮಕ್ಕೆ ಕಾರಣ ಕೇಳಿ ನೋಟಿಸ್ ನೀಡಿದ ಹೈಕಮಾಂಡ್ – ಒಬ್ಬ ಸಿಡಿದೆದ್ದಾಗಲೇ ಪಕ್ಷದ ಹುಳುಕು ಗೊತ್ತಾಗೋದು…! – ತೀರ್ಥಹಳ್ಳಿ ರಾಜಕಾರಣದ ಬಗ್ಗೆ ಸುಂದರೇಶ್ ಮಾತನಾಡುವ ನೈತಿಕ ಹಕ್ಕಿದೆಯೇ?: ತುಪ್ಪದಮನೆ ವಿನಾಯಕ್

ಶಿವಮೊಗ್ಗ/ ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಸೂಡಾ ಹಾಲಿ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಇತ್ತೀಚೆಗೆ ಕಾಂಗ್ರೆಸ್ ನಾಯಕರ ವಿರುದ್ಧವೇ ಭಾರೀ ಆರೋಪಗಳ ಹೊಳೆ ಹರಿಸಿದ್ದು ಇಡೀ ಜಿಲ್ಲಾ ಕಾಂಗ್ರೆಸ್ ನಾಯಕರನ್ನು ಇರಿಸು ಮುರಿಸು ಮಾಡಿದೆ. ಈ ನಡುವೆ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಕಾರಣ ಕೇಳಿ ಪಕ್ಷದ ಹೈಕಮಾಂಡ್ ನೋಟೀಸ್ ನೀಡಿದೆ. ಈ ಒಂದು ಘಟನೆಯಿಂದ ಅವರು ಪಕ್ಷಕ್ಕೆ ಮಾಡಿದ ಸೇವೆ ನೀರಲ್ಲಿ ಹೋಮ ಮಾಡಿದಂತಾಗಿದೆ.
ಇತ್ತೀಚಿಗೆ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಂದರೇಶ್ ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ, ಜಿಲ್ಲಾ, ತಾಲೂಕು ನಾಯಕರ ವಿರುದ್ಧ ಅಸಮಾಧಾನದ ಬಾಂಬ್ ಹಾಕಿದ್ದರು. ಇದು ಶಿವಮೊಗ್ಗ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಶೋಕಾಸ್ ನೋಟೀಸು: ಉತ್ತರಿಸುತ್ತಾರಾ ಸುಂದರೇಶ್?

ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್‌. ಸುಂದರೇಶ್‌ ಖಾಸಗಿ ಹೋಟೆಲ್‌ ಒಂದರಲ್ಲಿ ನಡೆಸಿದ ಪತ್ರಿಕಗೋಷ್ಟಿಯಲ್ಲಿ ಆಲ್‌ ಇಂಡಿಯಾ ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ‘ಸಂಘಟನ್ ಸೃಜನ್ ಅಭಿಯಾನ್’ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡಿರುವುದಲ್ಲದೇ, ಕಾಂಗ್ರೆಸ್ ಪಕ್ಷದ ಮುಖಂಡರುಗಳ ಬಗ್ಗೆ ಮಾಡಿರುವ ಟೀಕೆ ಮಾಡಿದ್ದರು. ಈ ಬಗ್ಗೆ ಪಕ್ಷಕ್ಕೆ, ಮುಖಂಡರಿಗೆ ತೀವ್ರ ಮುಜುಗರವಾಗಿದೆ ಎಂದು ಸ್ಥಳೀಯ ಮುಖಂಡರು ಕೆಪಿಸಿಸಿಗೆ ದೂರು ನೀಡಿದ್ದರು. ದೂರಿನಂತೆ ಶಿಸ್ತು ಉಲ್ಲಂಘನೆಯಾಗಿದೆ ಎಂದು ಕೆಪಿಸಿಸಿ ಶೋಕಾಸ್‌ ನೋಟೀಸ್‌ ಜಾರಿ ಮಾಡಿದೆ. ನೋಟೀಸಿಗೆ ಏಳು ದಿನಗಳ ಒಳಗಾಗಿ ಸಮಜಾಯಿಷಿ ನೀಡಲು ಕಾಲಾವಕಾಶ ನೀಡಿದೆ. ತಪ್ಪಿದಲ್ಲಿ ಮುಂದಿನ ಶಿಸ್ತುಕ್ರಮ ಜರುಗಿಸುವುದಾಗಿ ಹೇಳಿದೆ. ಆದರೆ ಸುಂದರೇಶ್ ಉತ್ತರಿಸುತ್ತಾರಾ ಕಾದು ನೋಡಬೇಕಿದೆ.

ಅನಾರೋಗ್ಯ ಇತ್ತು… ಹಾಗಾಗಿ ಒತ್ತಡದಲ್ಲಿ ಮಾತನಾಡಿದ್ದಾರೆ!

ಕಾಂಗ್ರೆಸ್ ಹಾಗೂ ಸಹಕಾರ ನಾಯಕರು ಆದ ಡಾ.ಮಂಜುನಾಥ ಗೌಡ ಮಾತನಾಡಿ, ಸುಂದರೇಶ್ ಅವರು ಅನಾರೋಗ್ಯಕ್ಕೆ ಈಡಾಗಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾಗಿ ಒತ್ತಡದಲ್ಲಿ ಏನೇನೋ ಮಾತನಾಡಿದ್ದಾರೆ. ಅವರು ಕೂಡ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ಹೇಳಿದ್ದಾರೆ.

ಸುಂದರೇಶ್ ವಿರುದ್ಧ ಕ್ರಮಕ್ಕೆ ಪಟ್ಟು!

ಶಿವಮೊಗ್ಗ, ತೀರ್ಥಹಳ್ಳಿ ನಾಯಕರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿರುವ ಆರೋಪ ಮಾಡಿರುವ ಸುಂದರೇಶ್ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಪ್ರಮುಖರು, ಹೊಸನಗರ, ತೀರ್ಥಹಳ್ಳಿ ಕಾಂಗ್ರೆಸ್ ಪ್ರಮುಖರು ಒತ್ತಾಯಿಸಿದ್ದಾರೆ.

ತೀರ್ಥಹಳ್ಳಿ ಕಾಂಗ್ರೆಸ್ ನಾಯಕರ ಬಗ್ಗೆ ಹೇಳಿಕೆ ಬೇಡ: ವಿನಾಯಕ್ ತುಪ್ಪದಮನೆ

ತೀರ್ಥಹಳ್ಳಿ ಕ್ಷೇತ್ರದ ಪಕ್ಷ ಮುಖಂಡರಾದ, ಮಾಜಿ ಸಚಿವ ,ಹಿರಿತನ ಅನುಭವವಿರುವ ಹಿರಿಯ ರಾಜಕಾರಣಿ ಕಿಮ್ಮನೆ ರತ್ನಾಕರ್ ಹಾಗೂ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಮಾಡಿರುವ ಬಹಿರಂಗ ಟೀಕೆಗಳು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ತೀರ್ಥಹಳ್ಳಿಯ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವಲಯದಿಂದಲೂ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸಾಮಾಜಿಕ-ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ತುಪ್ಪದಮನೆ ವಿನಾಯಕ್, ಮಾತನಾಡಿ, ತೀರ್ಥಹಳ್ಳಿಯ ರಾಜಕಾರಣದ ಬಗ್ಗೆ ಮಾತನಾಡುವ ಮುನ್ನ ಇಲ್ಲಿನ ರಾಜಕೀಯ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥಗೌಡರು ಈ ಭಾಗದಲ್ಲಿ ಪಕ್ಷದ ಸಂಘಟನೆಗಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ನಾಯಕರು. ಅವರ ನಾಯಕತ್ವವನ್ನು ಒಪ್ಪಿಕೊಂಡು, ಅವರೊಂದಿಗೆ ಹೆಜ್ಜೆ ಹಾಕುತ್ತಿರುವ ಕಾರ್ಯಕರ್ತರು ಇಂದು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅಂತಹ ಸಂದರ್ಭದಲ್ಲಿ ಹೊರಗಿನಿಂದ ಬಂದು ತೀರ್ಥಹಳ್ಳಿಯ ನಾಯಕರ ರಾಜಕೀಯ ಭವಿಷ್ಯದ ಬಗ್ಗೆ ತೀರ್ಪು ನೀಡುವ ರೀತಿಯಲ್ಲಿ ಮಾತನಾಡುವುದು ಎಷ್ಟು ಸಮಂಜಸ?” ಎಂಬ ಪ್ರಶ್ನೆಯನ್ನು ವಿನಾಯಕ್ ಮುಂದಿಟ್ಟಿದ್ದಾರೆ .ಜಿಲ್ಲಾ ರಾಜಕಾರಣವನ್ನು ತೀರ್ಥಹಳ್ಳಿಯ ಸ್ಥಳೀಯ ರಾಜಕಾರಣವನ್ನು ಎಳೆದು ತಂದು, ಇಲ್ಲಿನ ನಾಯಕರ ಬಗ್ಗೆ ವೈಯಕ್ತಿಕವಾಗಿ ಟೀಕಿಸುವುದು ಸಲ್ಲ. ನಾಯಕತ್ವದ ವಿಚಾರದಲ್ಲಿ ಅಸಮಾಧಾನವಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದು. ಆದರೆ ತೀರ್ಥಹಳ್ಳಿಯ ಇಬ್ಬರು ಪ್ರಮುಖ ನಾಯಕರ ಬಗ್ಗೆ ಸಾರ್ವಜನಿಕವಾಗಿ ಹಗುರವಾಗಿ ಮಾತನಾಡುವುದರಿಂದ, ವರ್ಷಗಳಿಂದ ಪಕ್ಷದ ಸಂಘಟನೆಗಾಗಿ ದುಡಿಯುತ್ತಿರುವ ಸ್ಥಳೀಯ ಕಾರ್ಯಕರ್ತರ ಮನಸ್ಸಿಗೂ ನೋವಾಗುತ್ತದೆ. ಸುಂದರೇಶ್ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಹಲವು ವರ್ಷ ದುಡಿದಿರುವ ಹಿರಿಯ ನಾಯಕರು ಎಂಬುದನ್ನು ಯಾರೂ ನಿರಾಕರಿಸುವಂತಿಲ್ಲ. ಆದರೆ ಅದೇ ಕಾರಣಕ್ಕೆ ತೀರ್ಥಹಳ್ಳಿಯ ಹಾಲಿ ರಾಜಕೀಯದಲ್ಲಿ ಸಕ್ರಿಯವಾಗಿರುವ ನಾಯಕರ ಬಗ್ಗೆ ಬೇಕಾದಂತೆ ಮಾತನಾಡುವ ಹಕ್ಕಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.