ಕಡೂರು: ಕುಟುಂಬಕ್ಕೆ ಸಂಬಂಧಿಸಿದ ಕಲಹ ಕೊಲೆಯಲ್ಲಿ ಅಂತ್ಯ ಕಂಡ ಘಟನೆ, ಪಂಚನಹಳ್ಳಿ ಸಮೀಪದ ಆಲದಹಳ್ಳಿ ತಾಂಡ್ಯಾದಲ್ಲಿ ನಡೆದಿದೆ. ತಾಂಡ್ಯಾದ ನಿವಾಸಿಯಾದ ದೇವರಾಜ್ ನಾಯ್ಕ ಕೌಟುಂಬಿಕ ಕಲಹದ ಹಿನ್ನೆಲೆಯಿಂದಾಗಿ ಪತ್ನಿಯಿಂದ ದೂರವಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದನು. ಆದರೂ ಆಗಾಗ ತನ್ನ ಮಾವನಾದ ರಾಜಾನಾಯ್ಕನ ಜೊತೆ ಜಗಳ ಮಾಡುತ್ತಿದ್ದನು ಎನ್ನಲಾಗಿದೆ. ಈ ದ್ವೇಷದಿಂದ ದೇವರಾಜ ರಾಜಾನಾಯ್ಕನ ತೋಟಕ್ಕೆ ತೆರಳಿದ್ದು, ಅಲ್ಲಿದ್ದ ಎರಡು ತೆಂಗಿನ ಸಸಿಗಳನ್ನು ಮಚ್ಚಿನಿಂದ ಕಡಿದು ನಾಶಗೊಳಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ರಾಜಾನಾಯ್ಕ ದೇವರಾಜ್ ನ ಕೈಯ್ಯಲ್ಲಿದ್ದ ಮಚ್ಚನ್ನು ಕಸಿದುಕೊಂಡು, ಆತನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ದೇವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದು, ಆರೋಪಿಯಾದ ರಾಜನಾಯ್ಕನನ್ನು ಬಂಧಿಸಿದ್ದಾರೆ. ಬಳಿಕ ದೇವರಾಜ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
•ಚಿಕ್ಕಮಗಳೂರು: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳುವು
ಚಿಕ್ಕಮಗಳೂರು: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಇಬ್ಬರು ದುಷ್ಕರ್ಮಿಗಳು ಅಪಹರಿಸಿರುವ ಘಟನೆ, ಹಿರೇಮಗಳೂರು ರೈಲ್ವೆ ಮೇಲ್ಸೇತುವೆಯ ಸಮೀಪದಲ್ಲಿ ನಡೆದಿದೆ. ಗಂಗಮ್ಮ ಎನ್ನುವ ಮಹಿಳೆಯು ಗೌಡನಹಳ್ಳಿಯ ನಿವಾಸಿಯಾಗಿದ್ದು, ಪರಿಚಯದವರಾದ ಲಲಿತಾ ಮತ್ತು ನಿಂಗಮ್ಮ ಎನ್ನುವವರೊಂದಿಗೆ ಹಿರೇಮಗಳೂರಿಗೆ ಮದುವೆಗೆ ತೆರಳಿದ್ದು, ಮಧ್ಯಾಹ್ನ ಮದುವೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಸನ್ನಿವೇಶ ಎದುರಾಗಿದೆ. ಗಂಗಮ್ಮ ಅವರು ಹಿರೇಮಗಳೂರು ರೈಲ್ವೆ ಮೇಲ್ಸೇತುವೆಯಿಂದ ಸ್ವಲ್ಪ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಆಗಮಿಸಿದ ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸಿದ್ದು, ಗಂಗಮ್ಮ ಅವರ ಬಳಿ ಬಂದು ನಿಂತಿದ್ದಾರೆ. ಬಳಿಕ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯು ಇದ್ದಕ್ಕಿದ್ದ ಹಾಗೆ ಗಂಗಮ್ಮ ಅವರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಮತ್ತು ಕರಿಮಣಿ ಸರವನ್ನು ಕಿತ್ತುಕೊಂಡಿದ್ದಾನೆ ಎನ್ನಲಾಗಿದೆ. ಆಘಾತಕ್ಕೆ ಒಳಗಾದ ಗಂಗಮ್ಮ ಅವರು ತನ್ನ ನೆರವಿಗಾಗಿ ಕೂಗಿಕೊಂಡಿದ್ದು, ಆರೋಪಿಗಳು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಗಂಗಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದು, 11ಗ್ರಾಂ ತೂಕದ ಚಿನ್ನದ ಸರ ಮತ್ತು 6 ಚಿನ್ನದ ಗುಂಡುಗಳು ಸೇರಿ ಒಟ್ಟು 1.04 ಲಕ್ಷ ರೂಪಾಯಿಗಳಷ್ಟು ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
•ಶಿವಮೊಗ್ಗ: ಮಣಿಪಾಲದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ
ಶಿವಮೊಗ್ಗ: ಮಣಿಪಾಲದ ಎಂಐಟಿ ಕಾಲೇಜಿನಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಸೆಪ್ಟೆಂಬರ್ 22ರ ಮಂಗಳವಾರದಂದು ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿಯನ್ನು ಶಿವಮೊಗ್ಗದ ವಿನೋಬನಗರ ನಿವಾಸಿ ಸಮರ್ಥ್ ಆರ್ ಪಾಟೀಲ್ ಎಂದು ಗುರುತಿಸಲಾಗಿದೆ. ವ್ಯಾಸಂಗದ ನಿಮಿತ್ತ ಮಣಿಪಾಲದಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ವಾಸವಾಗಿದ್ದ ಸಮರ್ಥ್, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ವೈಯಕ್ತಿಕ ಕಾರಣದಿಂದಾಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಅನುಮಾನ ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದ್ದು, ನಿಖರವಾದ ಕಾರಣ ಏನೆನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.
•ತೀರ್ಥಹಳ್ಳಿ: ಅರಣ್ಯ ಪಾಲಕನ ಮನೆಯಲ್ಲೇ ನಾಟಾ ಪತ್ತೆ
ತೀರ್ಥಹಳ್ಳಿ: ಅರಣ್ಯವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಹೊತ್ತಿರುವಂತಹ ವಾಚರ್ ಮನೆಯಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ನಾಟಾ ಪತ್ತೆಯಾಗಿರುವ ವಿಷಾದಕರ ಸಂಗತಿಯೊಂದು ಮುಂಡುವಳ್ಳಿ ಗ್ರಾಮದ ಶಾಂತಿಕೆರೆ ವ್ಯಾಪ್ತಿಯ ಮೃಗವಧೆಯಲ್ಲಿ ನಡೆದಿದೆ. ಸರ್ವೆ ನಂಬರ್ 188 ಪ್ರದೇಶದಲ್ಲಿ ಮರಗಳನ್ನು ಅಕ್ರಮವಾಗಿ ಕಡಿದು, ಅವುಗಳನ್ನು ನಾಟಾವಾಗಿ ಪರಿವರ್ತಿಸಿ ಸಂಗ್ರಹಿಸಿಡಲಾಗಿದೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಂಚಾರಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆಯನ್ನು ನಡೆಸಿದಾಗ ಎಂಪಿಎಂ ನಡುತೋಪಿನ ಅರಣ್ಯ ವಲಯದಲ್ಲಿ ವಾಚರ್ ಆಗಿ ಕಾರ್ಯನಿರ್ವಹಿಸುತ್ತಿರುವ ಫಿಲಿಪ್ ಡಿಸೋಜಾ ಅವರ ತೋಟದ ಮನೆಯಲ್ಲಿ ಹೊನ್ನೆ, ಮತ್ತಿ, ಬೋಗಿ ಸೇರಿದಂತೆ ವಿವಿಧ ಜಾತಿಯ ಮರಗಳ ನಾಟಾಗಳು ಸಂಗ್ರಹಗೊಂಡಿರುವುದು ಪತ್ತೆಯಾಗಿದೆ. ನಾಟಾಗಳ ನಿಖರ ಪ್ರಮಾಣ, ಮರಗಳ ಜಾತಿ, ಮಾರುಕಟ್ಟೆ ದರ ಮತ್ತು ಅವುಗಳ ಮೂಲಗಳ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಫಿಲಿಪ್ ಡಿಸೋಜಾ ವಿರುದ್ಧ ಶಿವಮೊಗ್ಗದ ಡಿಎಫ್ಓ ಅವರಿಗೆ ದೂರು ನೀಡಲಾಗಿದ್ದು, ದೂರಿನ ಆಧಾರದ ಮೇಲೆ ಸಂಚಾರಿ ಅರಣ್ಯಾಧಿಕಾರಿಗಳ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಟ್ಟ ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ.







